ಆಸ್ಟ್ರೇಲಿಯ ವಿರುದ್ಧ ಬಾಕ್ಸಿಂಗ್ ಡೇ ಟೆಸ್ಟ್ ನಲ್ಲಿ ಭಾರತಕ್ಕೆ ಸೋಲು | WTC ಹಾದಿ ಕಠಿಣ
Photo : x/@icc
ಮೆಲ್ಬರ್ನ್ : ಇಲ್ಲಿನ ಎಂಸಿಜಿ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ನಲ್ಲಿ ಭಾರತ ತಂಡವು 155 ರನ್ ಗಳಿಗೆ ಆಲೌಟ್ ಆಗಿದೆ.
ಎರಡಣೇ ಇನಿಂಗ್ಸ್ ನಲ್ಲಿ 234 ರನ್ ಗೆ ಆಲೌಟ್ ಆದ ಆಸ್ಟ್ರೇಲಿಯವು 340 ರನ್ ಗಳ ಗುರಿ ನೀಡಿತು. ಬ್ಯಾಟಿಂಗ್ ಪ್ರಾರಂಭಿಸಿದ ಭಾರತ ತಂಡಕ್ಕೆ ಆಸ್ಟ್ರೇಲಿಯ ತಂಡದ ನಾಯಕ ಪ್ಯಾಟ್ ಕಮಿನ್ಸ್ ಒಂದೇ ಓವರ್ ನಲ್ಲಿ ಎರಡು ವಿಕೆಟ್ ಕಿತ್ತು ಆಘಾತ ನೀಡಿದರು. ಭಾರತದ ಅಗ್ರ ಗಣ್ಯ ಬ್ಯಾಟರ್ ಗಳಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ವೈಫಲ್ಯ ಮುಂದುವರೆಯಿತು.
ಕೆ ಎಲ್ ರಾಹುಲ್ ಕೂಡ ಸೊನ್ನೆ ಸುತ್ತಿದರು. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ರಕ್ಷಣಾತ್ಮಕ ಆಟವಾಡಿ 208 ಎಸೆತ ಎದುರಿಸಿ 8 ಬೌಂಡರಿ ಸಹಿತ 84 ರನ್ ಗಳಿಸಿ ಕುಸಿಯುತ್ತಿದ್ದ ಭಾರತ ತಂಡಕ್ಕೆ ಆಸರೆಯಾದರು. ಅವರಿಗೆ ರಿಷಬ್ ಪಂತ್ ಜೊತೆಯಾದರು. 30 ರನ್ ಗಳಿಸಿದ ರಿಷಬ್ ಪಂತ್ 2 ಬೌಂಡರಿ ಬಾರಿಸಿದರು. ಆದರೆ ಟ್ರಾವೆಸ್ ಹೆಡ್ ಎಸೆತದಲ್ಲಿ ಅವರು ಮಿಷೆಲ್ ಮಾರ್ಷ್ಗೆ ಕ್ಯಾಚಿತ್ತು ನಿರ್ಗಮಿಸಿದರು.
ಮೊದಲ ಇನ್ನಿಂಗ್ಸ್ ಹೀರೋ ನಿತೀಶ್ ಕುಮಾರ್ ರೆಡ್ಡಿ ಈ ಬಾರಿ ವಿಫಲವಾದರು. ಕೇವಲ ಒಂದು ರನ್ ಗಳಿಸಿದ ಅವರು ನಾಥನ್ ಲಿಯೊನ್ ಗೆ ವಿಕೆಟ್ ಒಪ್ಪಿಸಿದಾಗ ಭಾರತದ ಭರವಸೆಯ ಕಟ್ಟೆ ಕುಸಿಯಿತು.
ಯಶಸ್ವಿ ಜೈಸ್ವಾಲ್ 80 ರನ್ ಗಳಿಸಿದ ಪ್ಯಾಟ್ ಕಮಿನ್ಸ್ ಗೆ ವಿಕೆಟ್ ಒಪ್ಪಿಸುತ್ತಿದ್ದಂತೆ ಆಸ್ಟ್ರೇಲಿಯ ತಂಡಕ್ಕೆ ಗೆಲವು ಖಚಿತವಾಗತೊಡಗಿತು. ಆದರೂ, ಕ್ರೀಸ್ ಗೆ ಬಂದ ವಾಷಿಂಗ್ಟನ್ ಸುಂದರ್ ಭಾರತದ ಗೋಡೆಯಾಗುವ ಪ್ರಯತ್ನ ನಡೆಸಿದರು. 45 ಎಸೆತ ಎದುರಿಸಿದ ಅವರು 5 ರನ್ ಗಳಿಸಿ ಅಜೇಯರಾಗಿ ಉಳಿದರು.
ಈ ಸೋಲಿನ ಮೂಲಕ ಭಾರತ ತಂಡದ WTC ಫೈನಲ್ ಹಾದಿ ಕಠಿಣವಾಗಿದೆ. ಟೆಸ್ಟ್ ಸರಣಿಯಲ್ಲಿ 2-1 ಅಂಕಗಳೊಂದಿಗೆ ಆಸ್ಟ್ರೇಲಿಯ ತಂಡವು ಮುನ್ನಡೆ ಸಾಧಿಸಿದೆ.