ಬುಧವಾರ ವಿಶ್ವಕಪ್ ಸೆಮಿಫೈನಲ್: ಪ್ರಶಸ್ತಿ ಸುತ್ತಿಗೆ ಮುನ್ನಗ್ಗಲು ಭಾರತ ಮತ್ತು ನ್ಯೂಝಿಲ್ಯಾಂಡ್ ನಡುವೆ ಹೋರಾಟ
ಮುಂಬೈ: ಭಾರತದಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯ ಮೊದಲ ಸೆಮಿಫೈನಲ್ ಬುಧವಾರ ಭಾರತ ಮತ್ತು ನ್ಯೂಝಿಲ್ಯಾಂಡ್ ತಂಡಗಳ ನಡುವೆ ನಡೆಯಲಿದೆ.
ಮುಂಬೈಯ ವಾಂಖೇಡೆ ಸ್ಟೇಡಿಯಮ್ ನಲ್ಲಿ ನಡೆಯಲಿರುವ ಹಗಲು-ರಾತ್ರಿ ಪಂದ್ಯವು ಹಲವು ಕಾರಣಗಳಿಗಾಗಿ ವಿಶಿಷ್ಟವಾಗಿದೆ. ಭಾರತವು ಈವರೆಗೆ ಈ ಪಂದ್ಯಾವಳಿಯಲ್ಲಿ ಅಜೇಯ ತಂಡವಾಗಿದೆ. ಅದು ಈವರೆಗಿನ ತನ್ನ ಎಲ್ಲಾ ಒಂಭತ್ತು ಲೀಗ್ ಪಂದ್ಯಗಳನ್ನು ಸುಲಭವಾಗಿ ಗೆದ್ದು ಬಂದಿದೆ. ಆದರೆ, ಸೆಮಿಫೈನಲ್ ಲೀಗ್ ಪಂದ್ಯಗಳಂತಲ್ಲ. ಇಷ್ಟರವರೆಗೆ ಗೆಲ್ಲುತ್ತಾ ಬಂದರೂ, ಸೆಮಿಫೈನಲ್ ನ ಒಂದು ಸೋಲು ವಿನಾಶಕಾರಿಯಾಗಿರುತ್ತದೆ. ಹಾಗಾಗಿ, ಭಾರತಕ್ಕೆ ತನ್ನ ಗೆಲುವಿನ ಅಭಿಯಾನವನ್ನು ಮುಂದುವರಿಸಿಕೊಂಡು ಹೋಗುತ್ತದೆಯೇ ಎನ್ನುವುದನ್ನು ಅಭಿಮಾನಿಗಳು ಕಾತರದಿಂದ ಎದುರು ನೋಡುತ್ತಿದ್ದಾರೆ.
ಲೀಗ್ ಹಂತದಲ್ಲಿ ಭಾರತವು ನ್ಯೂಝಿಲ್ಯಾಂಡನ್ನು ಸುಲಭವಾಗಿ ಸೋಲಿಸಿದೆ. ಭಾರತವು 12 ಎಸೆತಗಳು ಬಾಕಿಯಿರುವಂತೆಯೇ ಎದುರಾಳಿಯನ್ನು 4 ವಿಕೆಟ್ ಗಳಿಂದ ಮಣಿಸಿದೆ.
ಅದೂ ಅಲ್ಲದೆ, ಈ ವಿಶ್ವಕಪ್ ನಲ್ಲಿ ಭಾರತ ಎಲ್ಲಾ ಪಂದ್ಯಗಳನ್ನು ಗೆದ್ದು ಅಜೇಯ ತಂಡವಾಗಿ ಹೊರಹೊಮ್ಮುವುದನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಈವರೆಗಿನ ಎಲ್ಲಾ ಪಂದ್ಯಗಳನ್ನು ಗೆದ್ದಿರುವುದರಿಂದ, ಇನ್ನುಳಿದ ಮಹತ್ವದ ಪಂದ್ಯಗಳನ್ನು ಗೆಲ್ಲಬೇಕಾದ ಅಗಾಧ ಒತ್ತಡವಂತೂ ಭಾರತದ ಮೇಲಿದೆ.
ಇನ್ನೊಂದೆಡೆ ನ್ಯೂಝಿಲ್ಯಾಂಡ್ ಈ ಪಂದ್ಯಾವಳಿಯಲ್ಲಿ 5 ಪಂದ್ಯಗಳನ್ನು ಗೆದ್ದು ನಾಲ್ಕರಲ್ಲಿ ಸೋತಿದೆ. ಹಾಗಾಗಿ, ಸೆಮಿಫೈನಲ್ನಲ್ಲಿ ಸೋತರೂ ಅದು ಕಳೆದುಕೊಳ್ಳುವುದೇನಿಲ್ಲ. ಸೆಮಿಫೈನಲ್ ನ ಸೋಲು ಅದಕ್ಕೆ ಇನ್ನೊಂದು ಸೋಲು ಆಗಬಹುದು ಅಷ್ಟೆ. ಗೆದ್ದರೆ ಅದಕ್ಕೆ ಬೋನಸ್ ಆಗುತ್ತದೆ. ಹಾಗಾಗಿ, ಅದರ ಮೇಲೆ ಹೆಚ್ಚಿನ ಒತ್ತಡವಿಲ್ಲ.
ಈ ವಿಶ್ವಕಪ್ನಲ್ಲಿ ಭಾರತ ಒಂದು ಘಟಕವಾಗಿ ಆಡಿದೆ. ಅದು ತಂಡದ ಫಲಿತಾಂಶದ ಮೇಲೆ ಧನಾತ್ಮಕ ಪ್ರಭಾವವನ್ನು ಬೀರಿದೆ. ನಾಯಕ ರೋಹಿತ್ ಶರ್ಮ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಉತ್ತಮ ಫಾರ್ಮ್ನಲ್ಲಿದ್ದಾರೆ. ಆರಂಭದ ಪಂದ್ಯಗಳಲ್ಲಿ ತಂಡದ ಬ್ಯಾಟಿಂಗನ್ನು ಮುನ್ನಡೆಸಿದವರು ಅವರೇ ಆಗಿದ್ದಾರೆ. ಬಳಿಕ ಕೆ.ಎಲ್. ರಾಹುಲ್ ಕೂಡ ಅವರ ಜೊತೆಗೆ ಸೇರಿಕೊಂಡರು. ಅಂತಿಮ ಪಂದ್ಯಗಳಲ್ಲಿ ರಾಹುಲ್ ಕೂಡ ತಂಡದ ಗೆಲುವುಗಳಿಗೆ ಉತ್ತಮ ದೇಣಿಗೆಗಳನ್ನು ನೀಡಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಮುಹಮ್ಮದ್ ಶಮಿ ಮತ್ತು ಮುಹಮ್ಮದ್ ಸಿರಾಜ್ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ತಮ್ಮ ಬೌಲಿಂಗ್ ಮೂಲಕವೇ ಈ ಇಬ್ಬರು ಹಲವು ಪಂದ್ಯಗಳನ್ನು ಗೆಲ್ಲಿಸಿದ್ದಾರೆ.
ವಿಶ್ವಕಪ್ನ ಒಂದು ಆವೃತ್ತಿಯಲ್ಲಿ ಅತಿ ಹೆಚ್ಚು ವಿಜಯಗಳನ್ನು ಸಂಪಾದಿಸಿದ ತನ್ನ ಹಿಂದಿನ ದಾಖಲೆಯನ್ನು ಈ ಬಾರಿ ಭಾರತ ಮುರಿದಿದೆ. 2003ರ ವಿಶ್ವಕಪ್ನಲ್ಲಿ ಅದು 8 ಪಂದ್ಯಗಳನ್ನು ಗೆದ್ದಿತ್ತು.
ಅದೇ ವೇಳೆ, ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಝಿಲ್ಯಾಂಡ್, ತನ್ನ 2019ರ ಸೆಮಿಫೈನಲ್ ಫಲಿತಾಂಶವನ್ನು ಪುನರಾವರ್ತಿಸಲು ಎದುರು ನೋಡುತ್ತಿದೆ.
ನ್ಯೂಝಿಲ್ಯಾಂಡ್ ತನ್ನ ಕೊನೆಯ ಪಂದ್ಯದಲ್ಲಿ ಶ್ರೀಲಂಕಾವನ್ನು ಐದು ವಿಕೆಟ್ಗಳಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದೆ.
ಭಾರತ ಈಗಾಗಲೇ ಎರಡು ಬಾರಿ ಏಕದಿನ ವಿಶ್ವಕಪ್ ಪ್ರಶಸ್ತಿಗಳನ್ನು ಎತ್ತಿದೆ. ಅದು ಮೊದಲ ಬಾರಿ ಪ್ರಶಸ್ತಿ ಎತ್ತಿದ್ದು 1983ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ. ಎರಡನೆಯ ಬಾರಿ ಭಾರತ ಪ್ರಶಸ್ತಿ ಜಯಿಸಿದ್ದು 2011ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ.
ನ್ಯೂಝಿಲ್ಯಾಂಡ್ ಕಳೆದ ಎರಡು ಆವೃತ್ತಿಗಳಲ್ಲಿ ಗೆಲುವಿನ ಸನಿಹಕ್ಕೆ ಹೋಗಿದ್ದರೂ ಪ್ರಶಸ್ತಿ ಎತ್ತಲು ಅದಕ್ಕೆ ಸಾಧ್ಯವಾಗಿರಲಿಲ್ಲ.
ತಂಡಗಳು:
ಭಾರತ: ರೋಹಿತ್ ಶರ್ಮ (ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್, ರವೀಂದ್ರ ಜಡೇಜ, ಶಾರ್ದುಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮುಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಮುಹಮ್ಮದ್ ಶಮಿ, ರವಿಚಂದ್ರನ್ ಅಶ್ವಿನ್, ಇಶಾನ್ ಕಿಶನ್, ಪ್ರಸಿದ್ಧ್ ಕೃಷ್ಣ ಮತ್ತು ಸೂರ್ಯಕುಮಾರ್ ಯಾದವ್.
ನ್ಯೂಝಿಲ್ಯಾಂಡ್: ಕೇನ್ ವಿಲಿಯಮ್ಸನ್ (ನಾಯಕ), ಟ್ರೆಂಟ್ ಬೋಲ್ಟ್, ಮಾರ್ಕ್ ಚಾಪ್ಮನ್, ಡೇವನ್ ಕಾನ್ವೆ, ಲಾಕೀ ಫರ್ಗ್ಯೂಸನ್, ಟಾಮ್ ಲ್ಯಾತಮ್, ಡ್ಯಾರಿಲ್ ಮಿಚೆಲ್, ಜಿಮ್ಮ ನೀಶಮ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚ್ ಸ್ಯಾಂಟ್ನರ್, ಇಶ್ ಸೋದಿ, ಟಿಮ್ ಸೌತೀ ಮತ್ತು ವಿಲ್ ಯಂಗ್.
ಭಾರತಕ್ಕೆ ವಾಂಖೇಡೆಯಲ್ಲಿ ಆಡಿದ ಅನುಭವ:
ಪ್ರಸಕ್ತ ವಿಶ್ವಕಪ್ನಲ್ಲಿ, ಭಾರತ ಈಗಾಗಲೇ ಮುಂಬೈಯ ವಾಂಖೇಡೆ ಸ್ಟೇಡಿಯಮ್ ನಲ್ಲಿ ಆಡಿದೆ. ಆ ಪಂದ್ಯದಲ್ಲಿ ಅದು ಶ್ರೀಲಂಕಾವನ್ನು 302 ರನ್ ಗಳಿಂದ ಸೋಲಿಸಿತ್ತು. ಆದರೆ, ಈ ವಿಶ್ವಕಪ್ನಲ್ಲಿ ನ್ಯೂಝಿಲ್ಯಾಂಡ್ ಈ ಮೈದಾನದಲ್ಲಿ ಆಡುವುದು ಇದೇ ಮೊದಲು.
ಜನವರಿಯಲ್ಲಿ, ಉಭಯ ತಂಡಗಳು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಿದ್ದವು. ಆ ಸರಣಿಯನ್ನು ಭಾರತ 3-0 ಅಂತರದಿಂದ ಗೆದ್ದಿದೆ.
ವಿಶ್ವಕಪ್ ಮುಖಾಮುಖಿ:
ಏಕದಿನ ವಿಶ್ವಕಪ್ ಇತಿಹಾಸದಲ್ಲಿ, ಭಾರತ ಮತ್ತು ನ್ಯೂಝಿಲ್ಯಾಂಡ್ ತಂಡಗಳು ಒಂಭತ್ತು ಬಾರಿ ಮುಖಾಮುಖಿಯಾಗಿವೆ.
ಈ ಪೈಕಿ ಐದು ಪಂದ್ಯಗಳನ್ನು ನ್ಯೂಝಿಲ್ಯಾಂಡ್ ಗೆದ್ದರೆ, ನಾಲ್ಕು ಪಂದ್ಯಗಳಲ್ಲಿ ಭಾರತ ಜಯ ಗಳಿಸಿದೆ. ಹಾಲಿ ವಿಶ್ವಕಪ್ ನ ಲೀಗ್ ಹಂತದಲ್ಲಿ, ಭಾರತ ತಂಡವು ನ್ಯೂಝಿಲ್ಯಾಂಡನ್ನು 4 ವಿಕೆಟ್ ಗಳಿಂದ ಮಣಿಸಿದೆ.