ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್: ಕರ್ನಾಟಕದ ಬ್ಯಾಟರ್ ದೇವದತ್ ಪಡಿಕ್ಕಲ್ ಭಾರತದ ಪರ ಪಾದಾರ್ಪಣೆ ಸಾಧ್ಯತೆ
ದೇವದತ್ ಪಡಿಕ್ಕಲ್ (Photo: PTI)
ಧರ್ಮಶಾಲಾ: ಇಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ನಡೆಯಲಿರುವ ಐದನೆ ಟೆಸ್ಟ್ ಪಂದ್ಯದಲ್ಲಿ ಕರ್ನಾಟಕದ ಬ್ಯಾಟರ್ ದೇವದತ್ ಪಡಿಕ್ಕಲ್ ಟೆಸ್ಟ್ ಪಂದ್ಯಕ್ಕೆ ಪದಾರ್ಪಣೆ ಮಾಡುವ ಸಾಧ್ಯತೆ ಇದೆ. ಮಾರ್ಚ್ 7ರಿಂದ ಪ್ರಾರಂಭಗೊಳ್ಳಲಿರುವ 5ನೇ ಟೆಸ್ಟ್ ಪಂದ್ಯದ ವೇಳೆಗೆ ಬ್ಯಾಟರ್ ಕೆ.ಎಲ್. ರಾಹುಲ್ ತಮ್ಮ ದೈಹಿಕ ಸಾಮರ್ಥ್ಯವನ್ನು ಸಂಪೂರ್ಣವಾಗಿ ಮರಳಿ ಪಡೆಯುವಲ್ಲಿ ವಿಫಲವಾಗಿರುವುದರಿಂದ ದೇವದತ್ ಪಡಿಕ್ಕಲ್ ಗೆ ಸ್ಥಾನ ದೊರೆಯಲಿದೆ ಎಂದು ಹೇಳಲಾಗಿದೆ.
ರಾಂಚಿಯಲ್ಲಿ ನಡೆದ ಮೂರನೆಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಪರಾಭವಗೊಳಿಸಿ, 3-1ರ ಅಂತರದಲ್ಲಿ ಸರಣಿಯನ್ನು ಕೈವಶ ಮಾಡಿಕೊಂಡಿರುವ ಭಾರತ ತಂಡವು ಆತ್ಮವಿಶ್ವಾಸದಿಂದ ಬೀಗುತ್ತಿದೆ. ಧರ್ಮಶಾಲಾಗೆ ತೆರಳುವುದಕ್ಕೂ ಮುನ್ನ ಚಂಡೀಗಢದಲ್ಲಿ ಸೇರಲಿರುವ ಭಾರತ ತಂಡವು, ಅಂದೇ ಸಂಜೆ ಅಥವಾ ಮರುದಿನ ಧರ್ಮಶಾಲಾಗೆ ಪ್ರಯಾಣ ಬೆಳೆಸಲಿದೆ.
ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣಗಳಿಗಾಗಿ ತಂಡದಿಂದ ಹಿಂದೆ ಸರಿದ ಕಾರಣ ನಾಲ್ಕನೆ ಸ್ಥಾನಕ್ಕೆ ಕೆ.ಎಲ್. ರಾಹುಲ್ ಆಯ್ಕೆದಾರರು ಹಾಗೂ ತಂಡದ ಆಡಳಿತ ಮಂಡಳಿಯ ಪ್ರಥಮ ಆಯ್ಕೆಯಾಗಿದ್ದರು. ಆದರೆ, ಅವರೂ ಗಾಯಗೊಂಡಿರುವುದರಿಂದ ದೇವದತ್ ಪಡಿಕ್ಕಲ್ ಗೆ ಅವಕಾಶ ದೊರೆತಿದೆ.
ಮೂರು ಮತ್ತು ನಾಲ್ಕನೆ ಟೆಸ್ಟ್ ಪಂದ್ಯದಲ್ಲಿ ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲವಾಗಿರುವ ಮತ್ತೊಬ್ಬ ಬ್ಯಾಟರ್ ರಜತ್ ಪಾಟೀದಾರ್, ಕೆ.ಎಲ್.ರಾಹುಲ್ ಕೊನೆಯ ಟೆಸ್ಟ್ ಪಂದ್ಯದಲ್ಲಿ ಆಡಲು ಅಲಭ್ಯರಾಗಿರುವುದರಿಂದ ತಂಡದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಮೂರನೆಯ ಟೆಸ್ಟ್ ಪಂದ್ಯಕ್ಕೂ ಮುನ್ನವೇ ಕರ್ನಾಟಕದ ಬ್ಯಾಟರ್ ದೇವದತ್ ಪಡಿಕ್ಕಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಸಿದ್ಧತೆಯಾಗಿತ್ತು. 23 ವರ್ಷದ ಎಡಗೈ ಬ್ಯಾಟರ್ ಆದ ದೇವದತ್ ಪಡಿಕ್ಕಲ್, ತಾವು ಆಡಿರುವ 31 ಪ್ರಥಮ ದರ್ಜೆ ಪಂದ್ಯಗಳ ಪೈಕಿ 44.54 ರನ್ ಸರಾಸರಿಯಲ್ಲಿ ಒಟ್ಟು 2,227 ರನ್ ಗಳಿಸಿದ್ದಾರೆ. ಅವರ ಈ ಮೊತ್ತದಲ್ಲಿ ಆರು ಶತಕ ಹಾಗೂ 12 ಅರ್ಧ ಶತಕಗಳಿವೆ. ಈ ಬಾರಿಯ ರಣಜಿ ಋತುವಿನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿರುವ ಪಡಿಕ್ಕಲ್, 92.66 ಸರಾಸರಿಯಲ್ಲಿ ಆಡಿರುವ ನಾಲ್ಕು ಪಂದ್ಯಗಳಿಂದ ಒಟ್ಟು 556 ರನ್ ಗಳಿಸಿದ್ದಾರೆ. ಇದಲ್ಲದೆ ಬ್ಯಾಟ್ ಮಾಡಿದ ಆರು ಇನಿಂಗ್ಸ್ ಗಳ ಪೈಕಿ ಮೂರು ಶತಕಗಳನ್ನು ಸಿಡಿಸಿರುವ ಪಡಿಕ್ಕಲ್, ತಾನು ಅರ್ಧ ಶತಕದ ಗಡಿಯನ್ನು ದಾಟಿದಾಗಲೆಲ್ಲ ಶತಕ ಪೂರೈಸಿದ್ದಾರೆ.