ಆಸ್ಟ್ರೇಲಿಯ ಪ್ರವಾಸದ ವೇಳೆ 250 ಕೆಜಿ ತೂಕದ ಲಗೇಜ್ ಕೊಂಡೊಯ್ದ ಭಾರತದ ಸ್ಟಾರ್ ಆಟಗಾರ!
ಲಕ್ಷಾಂತರ ರೂಪಾಯಿ ಭರಿಸಿದ ಬಿಸಿಸಿಐ: ವರದಿ

File Photo: PTI
ಹೊಸದಿಲ್ಲಿ: ಇತ್ತೀಚೆಗೆ ಮುಕ್ತಾಯಗೊಂಡ ಆಸ್ಟ್ರೇಲಿಯ ಪ್ರವಾಸದ ಸಂದರ್ಭದಲ್ಲಿ ಭಾರತ ತಂಡದ ಸ್ಟಾರ್ ಆಟಗಾರರೊಬ್ಬರು 27 ಚೀಲಗಳಲ್ಲಿ ಸುಮಾರು 250 ಕೆಜಿ ತೂಕದ ಲಗೇಜ್ ಕೊಂಡೊಯ್ದಿದ್ದರು ಎಂಬ ಮಾಹಿತಿ ಬಹಿರಂಗಗೊಂಡಿದೆ. ಹೀಗಾಗಿ, ಆಸ್ಟ್ರೇಲಿಯ ಪ್ರವಾಸ ಮುಕ್ತಾಯಗೊಂಡ ಬೆನ್ನಿಗೇ, ಹಲವಾರು ನೂತನ ನಿಯಮಗಳನ್ನು ಜಾರಿಗೊಳಿಸಿದ್ದ ಬಿಸಿಸಿಐ, ಆಟಗಾರರೊಬ್ಬರು ವಿದೇಶಿ ಪ್ರವಾಸಗಳಿಗೆ ಕೊಂಡೊಯ್ಯಬಹುದಾದ ಲಗೇಜ್ ತೂಕದ ಮಿತಿಯನ್ನು 150 ಕೆಜಿಗೆ ನಿಗದಿಗೊಳಿಸಿದೆ.
‘ದೈನಿಕ ಜಾಗರಣ್’ ವರದಿಯ ಪ್ರಕಾರ, ಕೆಲವು ಆಟಗಾರರು ಬಿಸಿಸಿಐನ ಔದಾರ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಮುಕ್ತಾಯಗೊಂಡ ಆಸ್ಟ್ರೇಲಿಯ ಪ್ರವಾಸದ ಸಂದರ್ಭದಲ್ಲಿ ಭಾರತ ತಂಡದ ಆಟಗಾರರೊಬ್ಬರು ತನ್ನ 27 ಚೀಲಗಳ ಲಗೇಜ್ ವೆಚ್ಚವನ್ನು ಬಿಸಿಸಿಐ ಭರಿಸುವಂತೆ ಮಾಡಿದ್ದಾರೆ ಎಂದು ವರದಿಯಾಗಿದೆ. ಆ ಚೀಲಗಳು ಕೇವಲ ಆಟಗಾರನಿಗೆ ಮಾತ್ರ ಸೇರಿದ್ದಲ್ಲದೆ, ಅವರ ಕುಟುಂಬದ ಸದಸ್ಯರು ಹಾಗೂ ಆಪ್ತ ಸಿಬ್ಬಂದಿಗಳಿಗೂ ಸೇರಿತ್ತು. ಈ ಚೀಲಗಳ ತೂಕ 250 ಕೆಜಿಯನ್ನೂ ದಾಟಿ, ಅದರ ವೆಚ್ಚವನ್ನು ಬಿಸಿಸಿಐ ಭರಿಸುವಂತಾಗಿತ್ತು ಎಂದು ಹೇಳಲಾಗಿದೆ.
ಆ ಚೀಲಗಳಲ್ಲಿ 17 ಬ್ಯಾಟ್ ಗಳಲ್ಲದೆ, ಆಟಗಾರನ ಕುಟುಂಬದ ಸದಸ್ಯರು ಹಾಗೂ ಆಪ್ತ ಸಿಬ್ಬಂದಿಗಳಿಗೆ ಸಂಬಂಧಿಸಿದ ವಸ್ತುಗಳೂ ಇದ್ದವು. ಬಿಸಿಸಿಐ ನೀತಿಯ ಪ್ರಕಾರ, ಆಟಗಾರನ ಕುಟುಂಬದ ಸದಸ್ಯರು ಹಾಗೂ ಖಾಸಗಿ ಸಿಬ್ಬಂದಿಗಳಿಗೆ ಸಂಬಂಧಿಸಿದ ಲಗೇಜ್ ಅನ್ನು ಪ್ರತ್ಯೇಕವಾಗಿ ಕೊಂಡೊಯ್ಯಬೇಕಿತ್ತು. ಆದರೆ, ಬಿಸಿಸಿಐ ಅವೆಲ್ಲ ಲಗೇಜ್ ಗಳನ್ನು ನಿರ್ವಹಿಸುವಂತೆ ಸದರಿ ಆಟಗಾರ ಮಾಡಿದ್ದರು ಎನ್ನಲಾಗಿದೆ.
ಪ್ರವಾಸದುದ್ದಕ್ಕೂ ಈ ಆಟಗಾರನೊಂದಿಗೆ ಅವರ ಕುಟುಂಬದ ಸದಸ್ಯರಿದ್ದರು. ಈ ಪ್ರಕ್ರಿಯೆಯಲ್ಲಿ ಭಾರತದಿಂದ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಿದ ಆಟಗಾರ ಹಾಗೂ ಅವರ ಕುಟುಂಬದ ಲಗೇಜ್ ಗಳ ವೆಚ್ಚವನ್ನು ಬಿಸಿಸಿಐ ಭರಿಸಬೇಕಾಯಿತು. ಅದೇ ರೀತಿ ಆಸ್ಟ್ರೇಲಿಯಾದಿಂದ ಭಾರತಕ್ಕೆ ಮರಳುವಾಗಲೂ ಕೂಡಾ. ಇದಲ್ಲದೆ, ಸರಣಿಯ ಸಂದರ್ಭದಲ್ಲಿ ಒಂದು ನಗರದಿಂದ ಮತ್ತೊಂದು ನಗರಕ್ಕೆ ಪ್ರಯಾಣ ಬೆಳೆಸಿದಾಗಲೂ ಅವರ ಲಗೇಜ್ ವೆಚ್ಚವನ್ನು ಬಿಸಿಸಿಐ ಭರಿಸಬೇಕಾಯಿತು. ಈ ಪ್ರಕ್ರಿಯೆಗಾಗಿ ಬಿಸಿಸಿಐ ಎಷ್ಟು ವೆಚ್ಚ ಮಾಡಿದೆ ಎಂಬುದು ನಿಖರವಾಗಿ ತಿಳಿದು ಬಂದಿರದಿದ್ದರೂ, ಅದಕ್ಕಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದೆ ಎಂದು ಅಂದಾಜಿಸಲಾಗಿದೆ ಎಂದು ವರದಿಯಲ್ಲಿ ಆರೋಪಿಸಲಾಗಿದೆ.
ಇಂತಹ ವ್ಯವಸ್ಥೆಯಿಂದ ತಂಡದ ಉಳಿದ ಸದಸ್ಯರ ಮೇಲೂ ನಕಾರಾತ್ಮಕ ಪರಿಣಾಮ ಉಂಟಾಗಿದ್ದು, ಅವರೂ ಕೂಡಾ ಅದೇ ಧೋರಣೆ ಪ್ರದರ್ಶಿಸುವಂತಾಯಿತು. ಹೀಗಾಗಿ, ಬಿಸಿಸಿಐ ಈ ಕುರಿತು ಕ್ರಮ ಕೈಗೊಂಡು, ಕೆಲವು ನಿಯಮಗಳನ್ನು ಜಾರಿಗೊಳಿಸಬೇಕಾಯಿತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಆಸ್ಟ್ರೇಲಿಯ ಪ್ರವಾಸದ ನಂತರ ಭಾರತ ತಂಡದಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು, ಇದೀಗ ತಂಡದ ಆಟಗಾರರು ಪಂದ್ಯಗಳಿಗೆ ತಂಡದ ಬಸ್ ನಲ್ಲೇ ಪ್ರಯಾಣಿಸಬೇಕಾಗಿದೆ. ತಂಡದ ಪ್ರಯಾಣದ ವಿಷಯಕ್ಕೆ ಬಂದಾಗ, ಯಾವ ಆಟಗಾರನೂ ವೈಯಕ್ತಿಕ ವ್ಯವಸ್ಥೆ ಮಾಡಿಕೊಳ್ಳಲು ಅನುಮತಿ ದೊರೆಯುವುದಿಲ್ಲ.