ಇಂದು ಮೊದಲ ಸೆಮಿ ಫೈನಲ್: ಭಾರತ-ಆಸ್ಟ್ರೇಲಿಯ ಮುಖಾಮುಖಿ
2023ರ ವಿಶ್ವಕಪ್ ಫೈನಲ್ ಸೋಲಿಗೆ ಸೇಡು ತೀರಿಸಿಕೊಳ್ಳುವುದೇ ರೋಹಿತ್ ಪಡೆ?

PC : PTI
ದುಬೈ : ನ್ಯೂಝಿಲ್ಯಾಂಡ್ ತಂಡದ ವಿರುದ್ಧ ರವಿವಾರ 44 ರನ್ ಅಂತರದಿಂದ ಜಯ ಸಾಧಿಸಿರುವ ಭಾರತ ಕ್ರಿಕೆಟ್ ತಂಡವು ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ‘ಎ’ ಗುಂಪಿನಲ್ಲಿ ಅಗ್ರ ಸ್ಥಾನ ಪಡೆದಿದೆ. ಗ್ರೂಪ್ ಹಂತದ ಎಲ್ಲ 3 ಪಂದ್ಯಗಳನ್ನು ಜಯಿಸಿ ಟೂರ್ನಿಯಲ್ಲಿ ಅಜೇಯ ದಾಖಲೆ ಕಾಯ್ದುಕೊಂಡಿರುವ ರೋಹಿತ್ ಬಳಗವು ಮಂಗಳವಾರ ದುಬೈ ಅಂತರ್ರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಮೊದಲ ಸೆಮಿ ಫೈನಲ್ನಲ್ಲಿ ಸ್ಟೀವ್ ಸ್ಮಿತ್ ಸಾರಥ್ಯದ ಆಸ್ಟ್ರೇಲಿಯ ತಂಡದ ಸವಾಲನ್ನು ಎದುರಿಸಲಿದೆ.
ಪ್ರತಿಷ್ಠಿತ 8 ತಂಡಗಳು ಭಾಗವಹಿಸಿರುವ ಪಂದ್ಯಾವಳಿಯಲ್ಲಿ ಉಭಯ ತಂಡಗಳು ಮಾ.9ರಂದು ನಡೆಯಲಿರುವ ಫೈನಲ್ನಲ್ಲಿ ಸ್ಥಾನ ಗಿಟ್ಟಿಸಲು ಹೋರಾಡಲಿವೆ.
ಆಸ್ಟ್ರೇಲಿಯ ತಂಡವು ತನ್ನ ಸಾಂಪ್ರದಾಯಿಕ ಎದುರಾಳಿ ಇಂಗ್ಲೆಂಡ್ ತಂಡವನ್ನು 5 ವಿಕೆಟ್ಗಳ ಅಂತರದಿಂದ ಮಣಿಸುವ ಮೂಲಕ ತನ್ನ ಅಭಿಯಾನ ಆರಂಭಿಸಿತ್ತು. ಆದರೆ ದಕ್ಷಿಣ ಆಫ್ರಿಕಾ ಹಾಗೂ ಅಫ್ಘಾನಿಸ್ತಾನದ ವಿರುದ್ಧದ ಎರಡೂ ಪಂದ್ಯಗಳು ಮಳೆಯಿಂದಾಗಿ ರದ್ದಾಗಿದ್ದವು. ಹೀಗಾಗಿ ‘ಬಿ’ ಗುಂಪಿನಲ್ಲಿ 3 ಪಂದ್ಯಗಳಲ್ಲಿ 1ರಲ್ಲಿ ಜಯ ಸಾಧಿಸಿ ಒಟ್ಟು 4 ಅಂಕ ಗಳಿಸಿ 2ನೇ ಸ್ಥಾನ ಪಡೆಯಿತು. ಮಳೆಯಿಂದ ರದ್ದುಗೊಂಡಿರುವ 2 ಪಂದ್ಯಗಳಲ್ಲಿ ತಲಾ ಒಂದು ಅಂಕ ಗಳಿಸಿತ್ತು.
ಆಸ್ಟ್ರೇಲಿಯ ತಂಡದಲ್ಲಿ ಹಲವು ಪ್ರಮುಖ ಆಟಗಾರರ ಅನುಪಸ್ಥಿತಿ ಇದ್ದರೂ ಅತಿ ಹೆಚ್ಚು ಒತ್ತಡವಿರುವ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಅದರ ಸಾಮರ್ಥ್ಯವನ್ನು ಅಲ್ಲಗಳೆಯುವಂತಿಲ್ಲ. 2023ರ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಭಾರತವನ್ನು ಕೊನೆಯ ಬಾರಿ ಮುಖಾಮುಖಿಯಾಗಿದ್ದ ಆಸ್ಟ್ರೇಲಿಯ ತಂಡವು ಜಯಭೇರಿ ಬಾರಿಸಿ ಪ್ರಶಸ್ತಿಯನ್ನು ಜಯಿಸಿತ್ತು.
ಅಹ್ಮದಾಬಾದ್ನಲ್ಲಿ ನವೆಂಬರ್ನಲ್ಲಿ ನಡೆದಿದ್ದ ವಿಶ್ವಕಪ್ ಟೂರ್ನಿಯ ಫೈನಲ್ನಲ್ಲಿ ಭಾರತ ತಂಡವನ್ನು 6 ವಿಕೆಟ್ಗಳಿಂದ ಮಣಿಸಿದ್ದ ಆಸ್ಟ್ರೇಲಿಯ ತಂಡಕ್ಕೆ ಹೋಲಿಸಿದರೆ ಈಗಿನ ತಂಡವು ದುರ್ಬಲವಾಗಿರುವಂತೆ ಕಾಣುತ್ತಿದೆ. ಸ್ಟಾರ್ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ವೈಯಕ್ತಿಕ ಕಾರಣಗಳಿಂದಾಗಿ ಪ್ರಸಕ್ತ ಟೂರ್ನಿಯಲ್ಲಿ ಆಡುತ್ತಿಲ್ಲ. ನಾಯಕ ಪ್ಯಾಟ್ ಕಮಿನ್ಸ್, ಜೋಶ್ ಹೇಝಲ್ವುಡ್ ಕೂಡ ಟೂರ್ನಿಯಲ್ಲಿ ಲಭ್ಯರಿಲ್ಲ. ಈ ಎಲ್ಲ ಆಟಗಾರರ ಅನುಪಸ್ಥಿತಿಯ ಲಾಭ ಪಡೆದು ಈ ಪಂದ್ಯದಲ್ಲಿ ಜಯ ದಾಖಲಿಸಿ ಏಕದಿನ ವಿಶ್ವಕಪ್ ಫೈನಲ್ ಸೋಲಿಗೆ ಸೇಡು ತೀರಿಸಿಕೊಳ್ಳುವ ಉತ್ತಮ ಅವಕಾಶ ಭಾರತ ತಂಡಕ್ಕಿದೆ.
ಭಾರತ ತಂಡವು ದುಬೈ ಕ್ರೀಡಾಂಗಣದಲ್ಲಿ ಟೂರ್ನಿಯ ಎಲ್ಲ ಮೂರೂ ಪಂದ್ಯಗಳನ್ನು ಆಡಿದ್ದು, ಅದಕ್ಕೆ ಬೇರೆ ಸ್ಥಳಕ್ಕೆ ಹೋಗುವ ಪ್ರಮೇಯ ಬಂದಿಲ್ಲ. ಭಾರತವು ದುಬೈನಲ್ಲಿ 2 ವಾರಗಳಲ್ಲಿ 4ನೇ ಪಂದ್ಯವನ್ನು ಆಡಲು ಸಜ್ಜಾಗಿದೆ. ಬ್ಯಾಟರ್ ಹಾಗೂ ಬೌಲರ್ಗಳಿಗೆ ಹೇಗೆ ಆಡಬೇಕೆಂಬ ಅರಿವಿದೆ. ಆಸ್ಟ್ರೇಲಿಯ ತಂಡ ಟೂರ್ನಿ ನಡೆಯುತ್ತಿರುವ 4 ಸ್ಟೇಡಿಯಮ್ಗಳ ಪೈಕಿ ಮೂರು ಸ್ಟೇಡಿಯಮ್ಗೆ ಪ್ರಯಾಣಿಸಿದೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗಳಲ್ಲಿ ಭಾರತ ತಂಡವು ಆಸ್ಟ್ರೇಲಿಯ ವಿರುದ್ಧ ಆಡಿರುವ 4 ಪಂದ್ಯಗಳಲ್ಲಿ 2ರಲ್ಲಿ ಜಯ ಸಾಧಿಸಿದ್ದು, ಒಂದರಲ್ಲಿ ಸೋತಿದೆ. ಒಂದು ಪಂದ್ಯದಲ್ಲಿ ಫಲಿತಾಂಶ ಬಂದಿಲ್ಲ. ಭಾರತ ತಂಡವು 1998ರಲ್ಲಿ ಢಾಕಾದಲ್ಲಿ ಆಸ್ಟ್ರೇಲಿಯ ವಿರುದ್ಧ 44 ರನ್ ಹಾಗೂ ಆನಂತರ 2000ರಲ್ಲಿ ನೈರೋಬಿಯಲ್ಲಿ 20 ರನ್ ಅಂತರದಿಂದ ಜಯ ಸಾಧಿಸಿತ್ತು.
ಉಭಯ ತಂಡಗಳು ಈ ತನಕ ಒಟ್ಟು 151 ಏಕದಿನ ಪಂದ್ಯಗಳನ್ನು ಆಡಿದ್ದು, ಈ ಪೈಕಿ ಆಸ್ಟ್ರೇಲಿಯ ತಂಡ 84 ಪಂದ್ಯಗಳಲ್ಲಿ ಜಯ ದಾಖಲಿಸಿದ್ದರೆ, ಭಾರತ ತಂಡವು 57 ಪಂದ್ಯಗಳಲ್ಲಿ ಜಯಶಾಲಿಯಾಗಿದೆ. 10 ಪಂದ್ಯಗಳು ಫಲಿತಾಂಶ ಇಲ್ಲದೆ ಅಂತ್ಯಗೊಂಡಿವೆ.
ಭಾರತ ತಂಡವು ರವಿವಾರ ದುಬೈನ ಮಂದಗತಿಯ ಪಿಚ್ನಲ್ಲಿ 249 ರನ್ ಗಳಿಸಿದ್ದರೂ ವರುಣ್ ಚಕ್ರವರ್ತಿ(5-42) ಅವರ ಅಮೋಘ ಬೌಲಿಂಗ್ ನೆರವಿನಿಂದ ಕಿವೀಸ್ ಪಡೆಯನ್ನು 205 ರನ್ಗೆ ಕಡಿವಾಣ ಹಾಕಿ ‘ಹ್ಯಾಟ್ರಿಕ್’ ಗೆಲುವು ದಾಖಲಿಸಿತು.
ಫೆ.20ರಂದು ಬಾಂಗ್ಲಾದೇಶ ತಂಡವನ್ನು 6 ವಿಕೆಟ್ಗಳಿಂದ ಮಣಿಸಿ ತನ್ನ ಅಭಿಯಾನ ಆರಂಭಿಸಿದ್ದ ಭಾರತ ತಂಡವು ಫೆ.23ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಕೂಡ 6 ವಿಕೆಟ್ಗಳಿಂದ ಸದೆಬಡಿದು ಸತತ 2ನೇ ಗೆಲುವು ದಾಖಲಿಸಿ ಸೆಮಿ ಫೈನಲ್ ಸ್ಥಾನ ಖಚಿತಪಡಿಸಿತ್ತು. ಟೂರ್ನಿಯ ಮೊದಲೆರಡು ಪಂದ್ಯಗಳಲ್ಲಿ ರನ್ ಚೇಸ್ ಮಾಡಿ ಗೆದ್ದರೆ, ಕೊನೆಯ ಗ್ರೂಪ್ ಪಂದ್ಯದಲ್ಲಿ ವರುಣ್ ನೇತೃತ್ವದ ಸ್ಪಿನ್ನರ್ಗಳ ಸಂಘಟಿತ ಪ್ರಯತ್ನದಿಂದ ಜಯಭೇರಿ ಬಾರಿಸಿತ್ತು.
ವರುಣ್ ತಾನಾಡಿದ 2ನೇ ಏಕದಿನ ಪಂದ್ಯದಲ್ಲಿ ಐದು ವಿಕೆಟ್ ಗೊಂಚಲು ಪಡೆದು ಮಿಂಚಿದ ಹಿನ್ನೆಲೆಯಲ್ಲಿ ಭಾರತ ತಂಡವು ಆಸೀಸ್ ವಿರುದ್ಧದ ಸೆಮಿ ಫೈನಲ್ ಪಂದ್ಯದಲ್ಲಿ ಮತ್ತೊಮ್ಮೆ ನಾಲ್ವರು ಸ್ಪಿನ್ ಬೌಲರ್ಗಳನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ.
ಭಾರತ ತಂಡವು 2011ರ ವಿಶ್ವಕಪ್ ಕ್ವಾರ್ಟರ್ ಫೈನಲ್ನಲ್ಲಿ ಆಸ್ಟ್ರೇಲಿಯ ತಂಡವನ್ನು ಮಣಿಸಿತ್ತು. ಆ ನಂತರ ನಡೆದ ಪ್ರಮುಖ ಪಂದ್ಯಗಳಲ್ಲಿ ಎಡವುತ್ತಾ ಬಂದಿದೆ. ಇದರಲ್ಲಿ 2015ರ ವಿಶ್ವಕಪ್ ಸೆಮಿ ಫೈನಲ್, 2023ರ ವಿಶ್ವಕಪ್ ಫೈನಲ್ ಹಾಗೂ 2023ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಕೂಡ ಸೇರಿದೆ.
ಇದೀಗ ಭಾರತ ತಂಡವು ಆಸ್ಟ್ರೇಲಿಯ ವಿರುದ್ಧ ಮತ್ತೊಂದು ಹಣಾಹಣಿಗೆ ಸಜ್ಜಾಗಿದೆ.
ಭಾರತ-ಆಸ್ಟ್ರೇಲಿಯ ಹೆಟ್-ಟು-ಹೆಡ್
*ಐಸಿಸಿ ಚಾಂಪಿಯನ್ಸ್ ಟ್ರೋಫಿ
4 ಮುಖಾಮುಖಿಗಳಲ್ಲಿ ಭಾರತ ತಂಡವು 2-1 ಮುನ್ನಡೆ ಸಾಧಿಸಿದೆ(ಒಂದು ಪಂದ್ಯದಲ್ಲಿ ಫಲಿತಾಂಶ ಬಂದಿಲ್ಲ)
1998: ಭಾರತಕ್ಕೆ 44 ರನ್ ಜಯ(ಢಾಕಾ)
2000: ಭಾರತಕ್ಕೆ 20 ರನ್ ಗೆಲುವು(ನೈರೋಬಿ)
ಒಟ್ಟಾರೆ ದಾಖಲೆ(151 ಏಕದಿನ ಪಂದ್ಯಗಳು)
ಆಸ್ಟ್ರೇಲಿಯಕ್ಕೆ ಜಯ: 84
ಭಾರತಕ್ಕೆ ಗೆಲುವು: 57
ಫಲಿತಾಂಶರಹಿತ: 10
ಐಸಿಸಿ ಏಕದಿನ ವಿಶ್ವಕಪ್(14 ಪಂದ್ಯಗಳು)
ಆಸ್ಟ್ರೇಲಿಯಕ್ಕೆ ಜಯ: 9
ಭಾರತಕ್ಕೆ ಗೆಲುವು: 5
ಹವಾಮಾನ ವರದಿ
ಪಂದ್ಯದ ದಿನ ಮಳೆ ಸುರಿಯುವ ಸಾಧ್ಯತೆಯಿಲ್ಲ, ಭಾರತ-ಆಸ್ಟ್ರೇಲಿಯ ಪಂದ್ಯದ ಮೊದಲಾರ್ಧದಲ್ಲಿ ತಾಪಮಾನವು 30 ಡಿಗ್ರಿ ಸೆಲ್ಸಿಯಸ್ ಇರಬಹುದೆಂದು ನಿರೀಕ್ಷಿಸಲಾಗಿದೆ. ಸೂರ್ಯಾಸ್ತದ ನಂತರ ತಾಪಮಾನವು ಸುಮಾರು 25 ಡಿಗ್ರಿ ಸೆಲ್ಸಿಯಸ್ಗೆ ಇಳಿಯುವ ಸಾಧ್ಯತೆಯಿದೆ ಎಂದು ಹವಾಮಾನ ಮನ್ಸೂಚನೆ ಲಭಿಸಿದೆ.
ಪಿಚ್ ರಿಪೋರ್ಟ್
ದುಬೈ ಕ್ರಿಕೆಟ್ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್ಗೆ ಸವಾಲಿನದ್ದಾಗಿದೆ ಎಂದು ಸಾಬೀತಾಗಿದೆ. ಪಂದ್ಯದ ನಿರ್ಣಾಯಕ ಅವಧಿಗಳಲ್ಲಿ ಎರಡೂ ತಂಡಗಳ ಸ್ಪಿನ್ ಬೌಲರ್ಗಳು ಪ್ರಾಬಲ್ಯ ಸಾಧಿಸುವ ಸಾಧ್ಯತೆಯಿದೆ.
ತಂಡಗಳು
ಭಾರತ (ಸಂಭಾವ್ಯ-11): ರೋಹಿತ್ ಶರ್ಮಾ(ನಾಯಕ),ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜ, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ.
ಆಸ್ಟ್ರೇಲಿಯ(ಸಂಭಾವ್ಯ-11): ಟ್ರಾವಿಸ್ ಹೆಡ್, ಕೂಪರ್ ಕೊನೊಲ್ಲಿ, ಸ್ಟೀವ್ ಸ್ಮಿತ್, ಮಾರ್ನಸ್ ಲ್ಯಾಬುಶೇನ್, ಜೋಶ್ ಇಂಗ್ಲಿಸ್, ಅಲೆಕ್ಸ್ ಕ್ಯಾರಿ, ಗ್ಲೆನ್ ಮ್ಯಾಕ್ಸ್ವೆಲ್, ಸ್ಪೆನ್ಸರ್ ಜಾನ್ಸನ್, ಬೆನ್ ಡ್ವೆರ್ಶುಯಿಸ್, ನಾಥನ್ ಎಲ್ಲಿಸ್, ಆಡಮ್ ಝಂಪಾ.
ಪಂದ್ಯ ಆರಂಭ ಸಮಯ: ಮಧ್ಯಾಹ್ನ 2:30