ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್: ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ
PC: x.com/Cricketracker
ಗಬ್ಬಾ, ಆಸ್ಟ್ರೇಲಿಯಾ: ಬಾರ್ಡರ್-ಗಾವಸ್ಕರ್ ಟ್ರೋಫಿ ಸರಣಿಯ ಮೂರನೇ ಟೆಸ್ಟ್ ಪಂದ್ಯ ಗಬ್ಬಾದಲ್ಲಿ ಶನಿವಾರ ಆರಂಭವಾಗಿದ್ದು, ಮಳೆಯಿಂದ ಬಾಧಿತವಾಗಿರುವ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಉತ್ತಮ ಬ್ಯಾಟಿಂಗ್ ಪ್ರದರ್ಶಿಸುತ್ತಿರುವ ಆಸ್ಟ್ರೇಲಿಯಾ ಇತ್ತೀಚಿನ ವರದಿಗಳು ಬಂದಾಗ 10 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 26 ರನ್ ಗಳಿಸಿತ್ತು.
ಐದು ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು 1-1 ಸಮಬಲ ಸಾಧಿಸಿವೆ. ಭಾರತ ತಂಡದಲ್ಲಿ ಎರಡು ಬದಲಾವಣೆ ಮಾಡಿಕೊಂಡಿದ್ದು, ಹರ್ಷಿತ್ ರಾಣಾ ಮತ್ತು ಆರ್. ಅಶ್ವಿನ್ ಅವರ ಜಾಗದಲ್ಲಿ ಆಕಾಶ್ದೀಪ್ ಮತ್ತು ರವೀಂದ್ರ ಜಡೇಜಾ ಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯಾ ತಂಡ ಗಾಯದಿಂದ ಚೇತರಿಸಿಕೊಂಡಿರುವ ಜೋಶ್ ಹೇಝಲ್ ವುಡ್ ಅವರನ್ನು ವಾಪಾಸು ಕರೆಸಿಕೊಂಡಿದ್ದು, ಸ್ಕಾಟ್ ಬೊಲಾಂಡ್ ಅವರಿಗೆ ಜಾಗ ಮಾಡಿಕೊಟ್ಟಿದ್ದಾರೆ. ಹವಾಮಾನ ಮುನ್ಸೂಚನೆ ಆಧರಿಸಿ, ನಯವಾದ ಹಾಗೂ ಹುಲ್ಲುಹಾಸಿನ ಪಿಚ್ ನಲ್ಲಿ ಪಂದ್ಯ ಸಾಗಿದಂತೆ ಬ್ಯಾಟಿಂಗ್ ಗೆ ಅನುಕೂಲಕರ ಪರಿಸ್ಥಿತಿ ಸೃಷ್ಟಿಯಾಗುವ ಸಾಧ್ಯತೆ ಇರುವುದರಿಂದ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾಗಿ ರೋಹಿತ್ ಶರ್ಮಾ ಹೇಳಿದ್ದಾರೆ.
ಸರಣಿಯಲ್ಲಿ ನಿಯಂತ್ರಣ ಪಡೆಯಲು ಉಭಯ ತಂಡಗಳು ಸಾಹಸ ಮಾಡುತ್ತಿವೆ. ಗಬ್ಬಾದಲ್ಲಿ ಮಳೆಯಿಂದಾಗಿ ಪಂದ್ಯ ಸುಮಾರು ಅರ್ಧಗಂಟೆ ವಿಳಂಬವಾಯಿತು. ಇದರಿಂದಾಗಿ ಭೋಜನ ವಿರಾಮವನ್ನು ಕೂಡಾ ಅರ್ಧಗಂಟೆ ಮುಂದೂಡಿದ್ದು, 7.30ಕ್ಕೆ ಪಾನೀಯ ವಿರಾಮ ಹಾಗೂ 8.20ಕ್ಕೆ ಭೋಜನ ವಿರಾಮ ಘೋಷಿಸಲಾಗಿದೆ.
ಆಸ್ಟ್ರೇಲಿಯಾ ತಂಡ 5.3 ಓವರ್ ಗಳಲ್ಲಿ 19 ರನ್ ಗಳಿಸಿದ್ದಾಗ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿತ್ತು. ಉಸ್ಮಾನ್ ಖ್ವಾಜಾ ಮತ್ತು ನ್ಯಾಥನ್ ಮೆಕ್ಸ್ವೀನಿ ಆಸ್ಟ್ರೇಲಿಯಾ ಪರ ಇನಿಂಗ್ಸ್ ಆರಂಭಿಸಿದರೆ, ಜಸ್ಪ್ರೀತ್ ಬೂಮ್ರಾ ಭಾರತದ ಪರ ಬೌಲಿಂಗ್ ದಾಳಿ ಆರಂಭಿಸಿದರು.