ಪಕ್ಷಬೇಧ ಮರೆತು ಜೊತೆಯಾಗಿ ಭಾರತ-ನ್ಯೂಝಿಲ್ಯಾಂಡ್ ಪಂದ್ಯ ವೀಕ್ಷಿಸಿದ ರಾಜಕೀಯ ಮುಖಂಡರು
Photo:X/@IARYANSHARMAGA1
ಶಿಮ್ಲಾ: ರವಿವಾರ ಧರಂಶಾಲಾದಲ್ಲಿ ನಡೆದ ಭಾರತ ಮತ್ತು ನ್ಯೂಝಿಲ್ಯಾಂಡ್ ತಂಡಗಳ ನಡುವಿನ ವಿಶ್ವಕಪ್ ಪಂದ್ಯವನ್ನು ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ತಮ್ಮ ರಾಜಕೀಯ ವೈರತ್ವವನ್ನು ಬದಿಗಿಟ್ಟು ಜೊತೆಯಾಗಿ ವೀಕ್ಷಿಸಿದರು.
ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಕ್ಕು, ರಾಜ್ಯ ಕೈಗಾರಿಕಾ ಸಚಿವ ಹರ್ಷವರ್ಧನ್ ಅವರ ಜೊತೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕುರ್ ಮತ್ತು ರಾಜ್ಯ ವಿಧಾನಸಭೆಯ ವಿಪಕ್ಷ ನಾಯಕ ಜೈ ರಾಮ್ ಠಾಕುರ್ ಜೊತೆಯಾಗಿ ವೀಕ್ಷಿಸಿದರು.
ಇವರ ಹೊರತಾಗಿ ಹಿಮಾಚಲ ಬಿಜೆಪಿ ಅಧ್ಯಕ್ಷ ಡಾ. ರಾಜೀವ್ ಬಿಂದಲ್ ಮತ್ತು ಹಲವು ಕಾಂಗ್ರೆಸ್ ಶಾಸಕರು ಕೂಡ ಪಂದ್ಯ ವೀಕ್ಷಿಸಲು ಆಗಮಿಸಿದ್ದರು. ಮುಖ್ಯಮಂತ್ರಿ ಸುಕ್ಕು ಅವರು ಜೆಪಿ ನಡ್ಡಾ ಮತ್ತು ಅನುರಾಗ್ ಠಾಕುರ್ ಅವರ ನಡುವೆ ಕುಳಿತಿದ್ದರು.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಐಪಿಎಲ್ ಅಧ್ಯಕ್ಷ ಅರುಣ್ ಧುಮಲ್ ಹಾಗೂ ಹಿಮಾಚಲ ಪ್ರವಾಸೋದ್ಯ,ಮ ನಿಗಮದ ಅಧ್ಯಕ್ಷ ರಘುಬೀರ್ ಸಿಂಗ್ ಬಾಲಿ ಕೂಡ ಪಂದ್ಯ ವೀಕ್ಷಿಸಲು ಆಗಮಿಸಿದ್ದರು.
ಕ್ರಿಕೆಟ್ ಪಂದ್ಯ ವೀಕ್ಷಿಸಲು ಎಲ್ಲಾ ನಾಯಕರು ಜೊತೆಗೂಡಿರುವುದು ಕ್ರೀಡೆಯ ಮೇಲೆ ನಮ್ಮ ದೇಶಕ್ಕಿರುವ ಪ್ರೀತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಕ್ಕು ಹೇಳಿದ್ದಾರೆ.