ವೆಸ್ಟ್ಇಂಡೀಸ್ ವಿರುದ್ಧದ ಸರಣಿ: ಕ್ಲೀನ್ ಸ್ವೀಪ್ ಹಾದಿಯಲ್ಲಿ ಭಾರತ
ಹೊಸದಿಲ್ಲಿ: ಭಾರತದ ವೇಗಿ ಮುಹಮ್ಮದ್ ಸಿರಾಜ್ ಅವರ ಜೀವನಶ್ರೇಷ್ಠ ಸಾಧನೆ ಬಳಿಕ ಭಾರತದ ಬ್ಯಾಟ್ಸ್ಮನ್ ಗಳ ಬಿರುಸಿನ ಆಟದ ನೆರವಿನಿಂದ ಅತಿಥೇಯ ವೆಸ್ಟ್ಇಂಡೀಸ್ ವಿರುದ್ಧದ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಭಾರತ ಬಿಗಿ ಹಿಡಿತ ಸಾಧಿಸಿದೆ. ಪೋರ್ಟ್ಆಫ್ ಸ್ಪೇನ್ ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಗೆಲುವಿಗಾಗಿ ಅಸಾಧ್ಯ 365 ರನ್ ಗಳ ಗುರಿ ಪಡೆದ ವೆಸ್ಟ್ಇಂಡೀಸ್ ತಂಡ ದಿನದಾಟದ ಅಂತ್ಯದ ವೇಳೆಗೆ 2 ವಿಕೆಟ್ ಕಳೆದುಕೊಂಡು 76 ರನ್ ಗಳಿಸಿತ್ತು.
ಸಿರಾಜ್ 60 ರನ್ ಗಳಿಗೆ 5 ವಿಕೆಟ್ ಕಬಳಿಸುವ ಮೂಲಕ ಅತಿಥೇಯರ ಮೊದಲ ಇನ್ನಿಂಗ್ಸ್ ಗೆ ಕಡಿವಾಣ ಹಾಕಿದರು. 5 ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿದ್ದ ವೆಸ್ಟ್ಇಂಡೀಸ್ 255 ರನ್ ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡಿತು. ಮೊದಲ ಇನ್ನಿಂಗ್ಸ್ ನಲ್ಲಿ 183 ರನ್ ಗಳ ಬೃಹತ್ ಮುನ್ನಡೆ ಸಾಧಿಸಿದ ಭಾರತ ಎರಡನೇ ಇನ್ನಿಂಗ್ಸ್ ನಲ್ಲಿ ಕೇವಲ 24 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 181 ರನ್ ಕಲೆ ಹಾಕಿ, ಚಹಾ ವಿರಾಮದ 35 ನಿಮಿಷಗಳ ಬಳಿಕ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಕೇವಲ 12.2 ಓವರ್ ಗಳಲ್ಲಿ ಭಾರತ 100 ರನ್ ಗಳಿಸಿದ್ದು, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ದಾಖಲೆಯಾಗಿ ಸೇರ್ಪಡೆಯಾಯಿತು.
ಅಂತಿಮ ಸೆಷನ್ ನಲ್ಲಿ ಆರ್.ಅಶ್ವಿನ್ ಅವರು ಕ್ರೆಗ್ ಬ್ರೆಟ್ ವೈಟ್ (28) ಹಾಗೂ ಕ್ರಿಕ್ ಮೆಕೆಂಝಿ (0) ಅವರ ವಿಕೆಟ್ ಪಡೆಯುವ ಮೂಲಕ ಭಾರತ ಬಿಗಿ ಹಿಡಿತ ಸಾಧಿಸಲು ನೆರವಾದರು. ಕೊನೆಯ ದಿನ ಉಳಿದ ಎಂಟು ವಿಕೆಟ್ ಗಳಿಂದ ವೆಸ್ಟ್ಇಂಡೀಸ್ 289 ರನ್ ಗಳಿಸಬೇಕಿದೆ. ದಿನದಾಟದ ಅಂತ್ಯದ ವೇಳೆಗೆ ತಗ್ನರೇನ್ ಚಂದ್ರಪಾಲ್ ಹಾಗೂ ಜೆರ್ಮೀನ್ ಬ್ಲ್ಯಾಕ್ ವುಡ್ ಕ್ರಮವಾಗಿ 24 ಹಾಗೂ 20 ರನ್ ಗಳೊಂದಿಗೆ ಕ್ರೀಸ್ ನಲ್ಲಿ ಉಳಿದಿದ್ದಾರೆ. ನಾಲ್ಕನೇ ದಿನವೂ ಮಳೆಯಿಂದಾಗಿ ಹಲವು ಬಾರಿ ಅಡಚಣೆ ಉಂಟಾಯಿತು. ಮಧ್ಯಾಹ್ನದ ಸೆಷನ್ ಬಳಿಕ ಕೇವಲ ಮೂರು ಓವರ್ ಆಟ ಮಾತ್ರ ಸಾಧ್ಯವಾಯಿತು.
ಭಾರತದ ಪರ ಎರಡನೇ ಇನ್ನಿಂಗ್ಸ್ ನಲ್ಲಿ ರೋಹಿತ್ ಶರ್ಮಾ (44 ಎಸೆತಗಳಲ್ಲಿ 57), ಯಶಸ್ವಿ ಜೈಸ್ವಾಲ್ (30 ಎಸೆತಗಳಲ್ಲಿ 38) ಅವರ ಸ್ಫೋಟಕ ಆರಂಭದ ಬಳಿಕ ಇಶಾನ್ ಕಿಶನ್ (34 ಎಸೆತಗಳಲ್ಲಿ ಅಜೇಯ 52) ಹಾಗೂ ಶುಭಮನ್ ಗಿಲ್ (37 ಎಸೆತಗಳಲ್ಲಿ 29) ಟಿ-20 ಕ್ರಿಕೆಟ್ ನ ಮೆರುಗು ನೀಡಿದರು.