ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿ ಗೆದ್ದುಕೊಂಡ ಭಾರತ; 2ನೇ ಟೆಸ್ಟ್ ಮಳೆಗಾಹುತಿ, ರೋಹಿತ್ ಬಳಗದ ಕ್ಲೀನ್ ಸ್ವೀಪ್ ಕನಸು ಭಗ್ನ
ಹೊಸದಿಲ್ಲಿ, ಜು.25: ವೆಸ್ಟ್ ಇಂಡೀಸ್ ವಿರುದ್ಧ 2ನೇ ಟೆಸ್ಟ್ ನ ಕೊನೆಯ ದಿನದಾಟವಾದ ಸೋಮವಾರ ಗೆಲುವಿನ ನಿರೀಕ್ಷೆಯಲ್ಲಿತ್ತು. ಆದರೆ, ಭಾರೀ ಮಳೆಯಿಂದಾಗಿ 5ನೇ ದಿನದಾಟವು ಒಂದೂ ಎಸೆತ ಕಾಣದೆ ರದ್ದುಗೊಂಡಿತು. 2ನೇ ಪಂದ್ಯ ನೀರಸ ಡ್ರಾನಲ್ಲಿ ಕೊನೆಗೊಂಡ ಕಾರಣ ಭಾರತ 2 ಪಂದ್ಯಗಳ ಸರಣಿಯನ್ನು 1-0 ಅಂತರದಿಂದ ಗೆದ್ದುಕೊಂಡಿತು.
ಈ ಫಲಿತಾಂಶದಿಂದಾಗಿ ಅತಿಥೇಯ ವೆಸ್ಟ್ಇಂಡೀಸ್ ವಿರುದ್ಧದ ಎರಡನೇ ಹಾಗೂ ಕೊನೆಯ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಜಯ ದಾಖಲಿಸುವ ಮೂಲಕ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಭಾರತದ ಆಸೆ ಸೋಮವಾರ ಮಳೆಯಲ್ಲಿ ಕೊಚ್ಚಿಹೋಯಿತು. ಐದನೇ ದಿನದ ಆಟ ಸಂಪೂರ್ಣವಾಗಿ ಮಳೆಗೆ ಬಲಿಯಾಗಿದ್ದು, ವೆಸ್ಟ್ಇಂಡೀಸ್ ಗೆ ವರದಾನವಾಯಿತು.
ಗೆಲುವಿಗೆ 365 ರನ್ ಗಳ ಗುರಿ ಬೆನ್ನಟ್ಟಿದ್ದ ವಿಂಡೀಸ್ ರವಿವಾರ 2 ವಿಕೆಟ್ ನಷ್ಟಕ್ಕೆ 76 ರನ್ ಗಳಿಸಿತ್ತು. ಕೊನೆಯ ದಿನ ಮಳೆಯ ಆಟದಿಂದಾಗಿ ಪಂದ್ಯ ನೀರಸ ಡ್ರಾನಲ್ಲಿ ಮುಕ್ತಾಯಗೊಂಡಿತು. ಇದರೊಂದಿಗೆ 2023-25ನೇ ಟೆಸ್ಟ್ ಚಾಂಪಿಯನ್ ಶಿಪ್ ನ ಮೊದಲ ಪಂದ್ಯದಲ್ಲಿ ಸಂಪೂರ್ಣ 24 ಅಂಕಗಳನ್ನು ಗಳಿಸುವ ಭಾರತದ ಆಸೆ ನುಚ್ಚುನೂರಾಯಿತು. ಭಾರತ 1-0 ಅಂತರದ ಜಯಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಮೊದಲ ಟೆಸ್ಟ್ ನಲ್ಲಿ ಕೇವಲ ಮೂರೇ ದಿನಗಳಲ್ಲಿ ಜಯ ಸಾಧಿಸಿದ್ದ ಭಾರತ ಎರಡನೇ ಟೆಸ್ಟ್ ಪಂದ್ಯದ ನಿರ್ಣಾಯಕ ಐದನೇ ದಿನದಂದು ಜಯದ ಕನಸು ಕಾಣುತ್ತಿತ್ತು. ವೆಸ್ಟ್ ಇಂಡೀಸ್ ತಂಡ ಕೊನೆಯ ದಿನ ಗೆಲುವಿಗೆ ಉಳಿದ ಎಂಟು ವಿಕೆಟ್ ಗಳಿಂದ 289 ರನ್ ಗಳಿಸಬೇಕಿತ್ತು.
ಮುಂಜಾನೆ 9 ಗಂಟೆಗೆ ಆರಂಭವಾಗಬೇಕಿದ್ದ ಆಟವನ್ನು ಸ್ಥಳೀಯ ಕಾಲಮಾನದ ಪ್ರಕಾರ 13.15ಕ್ಕೆ ಆರಂಭಿಸಲು ನಿರ್ಧರಿಸಲಾಗಿತ್ತು. ಆದರೆ ಮಧ್ಯಾಹ್ನ ವ್ಯಾಪಕ ಮಳೆಯಾಗಿದ್ದರಿಂದ ಇಡೀ ದಿನದ ಆಟವನ್ನು ರದ್ದುಪಡಿಸಬೇಕಾಯಿತು. ಇದರಿಂದಾಗಿ ಎರಡನೇ ಟೆಸ್ಟ್ ನಲ್ಲಿ ಭಾರತ ಕೇವಲ ನಾಲ್ಕು ಅಂಕಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಮೊದಲ ಟೆಸ್ಟ್ ಗೆಲುವಿನೊಂದಿಗೆ 12 ಅಂಕ ಕಲೆ ಹಾಕಿದ್ದ ಭಾರತ ಅಗ್ರಸ್ಥಾನ ಗಳಿಸಿತ್ತು. ಈ ಸರಣಿ ಗೆಲುವಿನೊಂದಿಗೆ ಭಾರತ ಕೆರಿಬಿಯನ್ ರಾಷ್ಟ್ರದಲ್ಲಿ ಸತತ ಐದು ಸರಣಿಗಳನ್ನು ಗೆದ್ದಂತಾಗಿದೆ. ಭಾರತ ತಂಡ ದಕ್ಷಿಣ ಆಫ್ರಿಕಾ ಹಾಗೂ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಸೆಣೆಸಲಿದೆ. ಬಳಿಕ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಸರಣಿ ಎದುರಿಸಲಿದೆ.