ಬಾರ್ಡರ್-ಗಾವಸ್ಕರ್ ಟ್ರೋಫಿ | ಆಸ್ಟ್ರೇಲಿಯ ವಿರುದ್ಧ ಭಾರತಕ್ಕೆ ಐತಿಹಾಸಿಕ ಗೆಲುವು
Photo:X/BCCI
ಪರ್ತ್: ಇಲ್ಲಿ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದ ನಾಲ್ಕನೆ ದಿನದಂದು ಭಾರತ ತಂಡವು ಆಸ್ಟ್ರೇಲಿಯ ತಂಡವನ್ನು 295 ರನ್ ಗಳ ಭಾರಿ ಅಂತರದಿಂದ ಪರಾಭವಗೊಳಿಸಿದೆ. ಈ ಪಂದ್ಯದ ಗೆಲುವಿನ ಮೂಲಕ ಆಸ್ಟ್ರೇಲಿಯ ವಿರುದ್ಧ ನಾಯಕತ್ವ ವಹಿಸಿದ ಪ್ರಥಮ ಪಂದ್ಯದಲ್ಲೇ ಗೆಲುವು ಸಾಧಿಸಿ ನಾಯಕ ಜಸ್ ಪ್ರೀತ್ ಬುಮ್ರಾ ಮಿಂಚಿದ್ದಾರೆ.
ಮೂರನೆಯ ದಿನದಾಟದ ಅಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 12 ರನ್ ಗಳಿಸಿದ್ದ ಆಸ್ಟ್ರೇಲಿಯ ತಂಡ, ಇಂದು 238 ರನ್ ಗಳಿಗೆ ಆಲೌಟ್ ಆಯಿತು. ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಗೆ ತುತ್ತಾಗಿದ್ದ ಆಸ್ಟ್ರೇಲಿಯ ತಂಡವು, ಟ್ರಾವಿಸ್ ಹೆಡ್ (89) ಹಾಗೂ ಮಿಚೆಲ್ ಮಾರ್ಷ್ (47) ನೀಡಿದ ಆಸರೆಯಿಂದ ಇನ್ನೂರು ರನ್ ಗಳ ಗಡಿ ದಾಟಿತು.
ಭಾರತ ತಂಡದ ಪರ ಮತ್ತೊಮ್ಮೆ ಮಾರಕ ಬೌಲಿಂಗ್ ದಾಳಿ ಪ್ರದರ್ಶಿಸಿದ ಜಸ್ ಪ್ರೀತ್ ಬುಮ್ರಾ ಹಾಗೂ ಮುಹಮ್ಮದ್ ಸಿರಾಜ್ ತಲಾ 3 ವಿಕೆಟ್ ಕಿತ್ತರು. ಹರ್ಷಿತ್ ರಾಣಾ ಹಾಗೂ ನಿತೀಶ್ ಕುಮಾರ್ ರೆಡ್ಡಿ ತಲಾ ಒಂದು ವಿಕೆಟ್ ಪಡೆದರೆ, ಸ್ಪಿನ್ನರ್ ವಾಷಿಂಗ್ಟನ್ ಸುಂದರ್ 2 ವಿಕೆಟ್ ಗಳಿಸಿದರು.
ಈ ಚೊಚ್ಚಲ ಪಂದ್ಯದ ಗೆಲುವಿನೊಂದಿಗೆ ಭಾರತ ತಂಡವು ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಡಿಸೆಂಬರ್ 6ರಿಂದ ಅಡಿಲೇಡ್ ನಲ್ಲಿ ಎರಡನೆ ಟೆಸ್ಟ್ ಪಂದ್ಯ ಪ್ರಾರಂಭಗೊಳ್ಳಲಿದೆ.