ಚಿನ್ನ, ಪದಕ ಗಳಿಕೆಯಲ್ಲಿ ಇತಿಹಾಸ ಬರೆದ ಭಾರತ
Photo : PTI
ಹಾಂಗ್ ಝೌ : ಏಶ್ಯನ್ ಗೇಮ್ಸ್ ನಲ್ಲಿ ಅತ್ಲೆಟಿಕ್ಸ್ ಸ್ಪರ್ಧಾವಳಿಯಲ್ಲಿ ಬುಧವಾರ ಭಾರತೀಯ ಕ್ರೀಡಾಳುಗಳು ಪದಕದ ಬೇಟೆ ಮುಂದುವರಿಸಿದ್ದಾರೆ. ಒಂದೇ ದಿನ 12 ಪದಕಗಳನ್ನು ಸೂರೆಗೈದ ಭಾರತೀಯರು ಪದಕದ ಗಳಿಕೆಯನ್ನು 81ಕ್ಕೆ ಏರಿಸಿದ್ದಾರೆ. 100ರ ಗಡಿ ದಾಟುವತ್ತ ದಾಪುಗಾಲಿಟ್ಟಿದ್ದಾರೆ. ಈ ಮೂಲಕ ಚಿನ್ನ ಹಾಗೂ ಪದಕ ಗಳಿಕೆಯಲ್ಲಿ ಇತಿಹಾಸ ಬರೆದಿದ್ದಾರೆ. ಏಶ್ಯನ್ ಗೇಮ್ಸ್ ನಲ್ಲಿ ಭಾರತ ಇಂದು ಸರ್ವಶ್ರೇಷ್ಠ ಸಾಧನೆ ಮಾಡಿದೆ. ಏಶ್ಯನ್ ಗೇಮ್ಸ್ನ 72 ವರ್ಷಗಳ ಇತಿಹಾಸದಲ್ಲಿ 2018ರಲ್ಲಿ 70 ಪದಕಗಳನ್ನು ಗೆದ್ದಿರುವುದು ಭಾರತದ ಇದುವರೆಗಿನ ಶ್ರೇಷ್ಠ ಸಾಧನೆಯಾಗಿತ್ತು. ಭಾರತವು ಇದೀಗ ಒಟ್ಟು 18 ಚಿನ್ನದ ಪದಕಗಳನ್ನು ಜಯಿಸಿ ಬಂಗಾರದ ಬೇಟೆಯಲ್ಲ್ಲೂ ಇತಿಹಾಸ ಬರೆದಿದೆ. 2018ರ ಏಶ್ಯನ್ ಗೇಮ್ಸ್(16 ಚಿನ್ನ)ದಾಖಲೆಯನ್ನು ಮುರಿದು ಒಂದೇ ಏಶ್ಯನ್ ಗೇಮ್ಸ್ ನಲ್ಲಿ ಗರಿಷ್ಠ ಚಿನ್ನದ ಪದಕ ಜಯಿಸಿದ ಸಾಧನೆ ಮಾಡಿದೆ. ಗೋಲ್ಡನ್ ಬಾಯ್ ನೀರಜ್ ಚೋಪ್ರಾ(ಪುರುಷರ ಜಾವೆಲಿನ್ ಎಸೆತ), ಭಾರತದ ಓಟಗಾರರಾದ ಅನಸ್ ಮುಹಮ್ಮದ್, ಅಮೋಜ್ ಜೇಕಬ್, ಮುಹಮ್ಮದ್ ಅಜ್ಮಲ್ ಹಾಗೂ ರಾಜೇಶ್ ರಮೇಶ್ (ಪುರುಷರ 4-400 ಮೀ.ರಿಲೇ), ಆರ್ಚರಿ ಜೋಡಿ ಓಜಾಸ್ ಪ್ರವೀಣ್ ಹಾಗೂ ಜ್ಯೋತಿ ಸುರೇಖಾ (ಮಿಕ್ಸೆಡ್ ಮಿಕ್ಸೆಡ್ ಟೀಮ್ ಕಾಂಪೌಂಡ್) ಚಿನ್ನದ ಪದಕ ಜಯಿಸಿದರು.
ಕಿಶೋರ್ ಜೆನಾ(ಪುರುಷರ ಜಾವೆಲಿನ್ ಎಸೆತ), ಹರ್ಮಿಲನ್ ಬೈನ್ಸ್(ಮಹಿಳೆಯರ 800 ಮೀ. ಓಟ), ಅವಿನಾಶ್ ಸಾಬ್ಳೆ(ಪುರುಷರ 5,000 ಮೀ. ಓಟ), ವಿದ್ಯಾ ರಾಮರಾಜ್, ಐಶ್ವರ್ಯಾ ಮಿಶ್ರಾ, ಪ್ರಾಚಿ ಹಾಗೂ ಶುಭಾ ವೆಂಕಟೇಶನ್ (ಮಹಿಳೆಯರ 4-400 ಮೀ.ರಿಲೇಯಲ್ಲಿ )ಹಾಗೂ ಲವ್ಲೀನಾ ಬೋರ್ಗೊಹೈನ್(ಬಾಕ್ಸಿಂಗ್)ಬೆಳ್ಳಿ ಬಾಚಿಕೊಂಡರು. ಸುಶೀಲ್ ಕುಮಾರ್(ಗ್ರೀಕೊ-ರೋಮನ್ ಕುಸ್ತಿ), ಅಭಯ್ಸಿಂಗ್/ಅನಾಹತ್ ಸಿಂಗ್(ಮಿಕ್ಸೆಡ್ ಟೀಮ್ ಸ್ಕ್ವಾಷ್), ರಾಮ್ ಬಾಬೂ/ಮನು ರಾಣಿ(35 ಕಿ.ಮೀ. ರೇಸ್ ವಾಕ್ ಮಿಕ್ಸೆಡ್ ಟೀಮ್) ಹಾಗೂ ಪರ್ವೀನ್ ಹೂಡಾ(ಮಹಿಳೆಯರ ಬಾಕ್ಸಿಂಗ್ 57 ಕೆಜಿ)ಕಂಚಿನ ಪದಕಕ್ಕೆ ಕೊರಳೊಡ್ಡಿದರು.
ಬಾಕ್ಸರ್ ಲವ್ಲೀನಾ ಬಾರ್ಗೊಹೈನ್ ಗೆ ಬೆಳ್ಳಿ, ಪ್ರವೀಣ್ ಹೂಡಾಗೆ ಕಂಚು
ಹಾಂಗ್ ಝೌ : ಏಶ್ಯನ್ ಗೇಮ್ಸ್ ನಲ್ಲಿ ಭಾರತದ ಬಾಕ್ಸಿಂಗ್ ತಂಡ ಗಮನಾರ್ಹ ಪ್ರದರ್ಶನ ನೀಡಿದ್ದು, ಹಾಲಿ ಏಶ್ಯನ್ ಚಾಂಪಿಯನ್ ಲವ್ಲೀನಾ ಬೋರ್ಗೊಹೈನ್ ಬುಧವಾರ 75 ಕೆಜಿ ವಿಭಾಗದಲ್ಲಿ ಬೆಳ್ಳಿ ಗೆದ್ದಿದ್ದಾರೆ.
ಬಹು ನಿರೀಕ್ಷಿತ ಫೈನಲ್ ಸ್ಪರ್ಧೆಯಲ್ಲಿ ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತೆ ಚೀನಾದ ಲಿ ಕ್ವಿಯಾನ್ರನ್ನು ಎದುರಿಸಿದ ಲವ್ಲೀನಾ ಸೋಲುಂಡರು.ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ್ದ ಲವ್ಲೀನಾ ಏಕಪಕ್ಷೀಯವಾಗಿ ಸಾಗಿದ ಫೈನಲ್ ನಲ್ಲಿ ಎಡವಿದರು.
ಭಾರತದ ಇನ್ನೋರ್ವ ಬಾಕ್ಸರ್ ಪರ್ವೀನ್ ಹೂಡಾ ಮಹಿಳೆಯರ 54 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದರು. 2022ರಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್ ಶಿಪ್ ನಲ್ಲಿ63 ಕೆಜಿ ವಿಭಾಗದಲ್ಲಿ ಹೂಡಾ ಕಂಚಿನ ಪದಕ ಜಯಿಸಿದ್ದರು. ಹೂಡಾ ಅವರು 2 ಬಾರಿಯ ವಿಶ್ವ ಚಾಂಪಿಯನ್ ಚೈನೀಸ್ ತೈಪೆಯ ಲಿನ್ ಯು ಟಿಂಗ್ ವಿರುದ್ಧ 0-5 ಅಂತರದಿಂದ ಸೋತಿದ್ದಾರೆ.
ಏಶ್ಯನ್ ಗೇಮ್ಸ್ ನಲ್ಲಿ ಭಾರತದ ಬಾಕ್ಸಿಂಗ್ ಅಭಿಯಾನ ಇಂದು ಅಂತ್ಯವಾಗಿದ್ದು, ಬಾಕ್ಸರ್ ಗಳು ಒಂದು ಬೆಳ್ಳಿ ಹಾಗೂ 4 ಕಂಚು ಸಹಿತ ಒಟ್ಟು 5 ಪದಕಗಳನ್ನು ಜಯಿಸಿದ್ದಾರೆ.
ಬಾಕ್ಸಿಂಗ್ ನಲ್ಲಿ ಲವ್ಲೀನಾ ಬೆಳ್ಳಿ ಜಯಿಸಿದರೆ, ಪರ್ವೀನ್, ನಿಖಾತ್ ಝರೀನಾ,ಪ್ರೀತಿ ಪವಾರ್ ಹಾಗೂ ನರೇಂದರ್ ಬೆರ್ವಾಲ್ ಕೂಡ ಕಂಚು ಜಯಿಸಿದ್ದಾರೆ.
ಪುರುಷರ ಹಾಕಿ: ಭಾರತ ಫೈನಲ್ ಗೆ, ಒಲಿಂಪಿಕ್ಸ್ ಸ್ಥಾನ ಖಚಿತ
ಹಾಂಗ್ ಝೌ : ಏಶ್ಯನ್ ಗೇಮ್ಸ್ ನ ಸೆಮಿ ಫೈನಲ್ ಪಂದ್ಯದಲ್ಲಿ ಭಾರತದ ಪುರುಷರ ಹಾಕಿ ತಂಡ ದಕ್ಷಿಣ ಕೊರಿಯಾ ವಿರುದ್ಧ 5-3 ಅಂತರದಿಂದ ಜಯ ದಾಖಲಿಸಿದೆ. ಈ ಮೂಲಕ ಫೈನಲ್ ಗೆ ಪ್ರವೇಶಿಸಿದೆ. ಮಾತ್ರವಲ್ಲ 2024ರ ಪ್ಯಾರಿಸ್ ಒಲಿಂಪಿಕ್ ಗೆ ನೇರ ಪ್ರವೇಶವನ್ನು ದೃಢಪಡಿಸಿದೆ.
ಗ್ರೂಪ್ ಹಂತದಲ್ಲಿ ಪ್ರಾಬಲ್ಯ ಸಾಧಿಸಿದ್ದ ಭಾರತವು ಬುಧವಾರ ನಡೆದ ಸೆಮಿ ಫೈನಲ್ ನಲ್ಲಿ ಮೊದಲ ಕ್ವಾರ್ಟರ್ನಲ್ಲಿ 3-0 ಮುನ್ನಡೆ ಸಾಧಿಸಿದ್ದರೂ ಕೊರಿಯಾ ತಂಡದಿಂದ ಕಠಿಣ ಸವಾಲು ಎದುರಿಸಿತು.
ಭಾರತವು 2014ರ ಏಶ್ಯನ್ ಗೇಮ್ಸ್ ಪ್ರದರ್ಶನ ಪುನರಾವರ್ತಿಸುವ ಗುರಿ ಇಟ್ಟಿಕೊಂಡಿದೆ. ಭಾರತವು ಚಿನ್ನದ ಪದಕ ಜಯಿಸಿತ್ತು.
ಭಾರತದ ಪರ ಹಾರ್ದಿಕ್ ಸಿಂಗ್(5ನೇ ನಿಮಿಷ), ಮನ್ದೀಪ್ ಸಿಂಗ್(11ನೇ ನಿಮಿಷ), ಲಲಿತ್ ಉಪಾಧ್ಯಾಯ(15ನೇ ನಿಮಿಷ), ಅಮಿತ್ ರೋಹಿದಾಸ್(24ನೇ ನಿಮಿಷ) ಹಾಗೂ ಅಭಿಷೇಕ್(54ನೇ ನಿಮಿಷ)ತಲಾ ಒಂದು ಗೋಲು ಗಳಿಸಿದರು. ಮತ್ತೊಂದೆಡೆ ಕೊರಿಯಾದ ಪರ ಮಂಜೆ ಜಂಗ್ ಹ್ಯಾಟ್ರಿಕ್ ಗೋಲು(17ನೇ, 20ನೇ, 42ನೆ ನಿಮಿಷ)ಗಳಿಸಿದರು. ಆದಾಗ್ಯೂ ಗೆಲುವು ದಕ್ಕಲಿಲ್ಲ.
ಭಾರತವು ಶನಿವಾರ ಚಿನ್ನದ ಪದಕಕ್ಕಾಗಿ ನಡೆಯುವ ಫೈನಲ್ ಪಂದ್ಯದಲ್ಲಿ ಮತ್ತೊಂದು ಸೆಮಿ ಫೈನಲ್ ನ ಲ್ಲಿ ಜಯಶಾಲಿಯಾಗುವ ಹಾಲಿ ಚಾಂಪಿಯನ್ ಜಪಾನ್ ಅಥವಾ ಚೀನಾ ತಂಡವನ್ನು ಎದುರಿಸಲಿದೆ.
4-400 ಮೀ. ರಿಲೇ: ಭಾರತದ ಪುರುಷರ ತಂಡಕ್ಕೆ ಚಿನ್ನ
► ಬೆಳ್ಳಿ ಗೆದ್ದ ವನಿತೆಯರು
ಹಾಂಗ್ ಝೌ : ಮುಹಮ್ಮದ್ ಅನಸ್, ಅಮೋಜ್ ಜೇಕಬ್, ಮುಹಮ್ಮದ್ ಅಜ್ಮಲ್ ಹಾಗೂ ರಾಜೇಶ್ ರಮೇಶ್ ಅವರನ್ನೊಳಗೊಂಡ ಪುರುಷರ 4-400 ಮೀ. ರಿಲೇ ತಂಡ ರಾಷ್ಟ್ರೀಯ ದಾಖಲೆಯನ್ನು ಮುರಿದು ಏಶ್ಯನ್ ಗೇಮ್ಸ್ ನಲ್ಲಿ ಭಾರತಕ್ಕೆ 18ನೇ ಚಿನ್ನದ ಪದಕ ಗೆದ್ದುಕೊಟ್ಟರು.
ಭಾರತೀಯ ತಂಡವು 3:01.58 ಸೆಕೆಂಡ್ನಲ್ಲಿ ಗುರಿ ತಲುಪಿತು. ಖತರ್(3:02.05 ಸೆ.)2ನೇ ಸ್ಥಾನ ಪಡೆಯಿತು. ಶ್ರೀಲಂಕಾ(3:02.55 ಸೆ.)ಕಂಚಿನ ಪದಕ ಜಯಿಸಿತು.
ವಿದ್ಯಾ ರಾಮರಾಜ್, ಐಶ್ವರ್ಯಾ ಮಿಶ್ರಾ ಹಾಗೂ ಶುಭಾ ವೆಂಕಟೇಶನ್ ಅವರನ್ನೊಳಗೊಂಡ ಭಾರತೀಯ ಮಹಿಳೆಯರ 4-400 ಮೀ.ರಿಲೇ ತಂಡ ಬುಧವಾರ ಬೆಳ್ಳಿ ಜಯಿಸಿದೆ. 2014ರ ಏಶ್ಯನ್ ಗೇಮ್ಸ್ ದಾಖಲೆಯನ್ನು (3:28.68)ದಾಖಲೆಯನ್ನು ಮುರಿದರೂ ಬಹರೈನ್ ವಿರುದ್ಧ (3:27.65)ಸೋಲನುಭವಿಸಿ 2ನೇ ಸ್ಥಾನ ಪಡೆಯಿತು. ಶ್ರೀಲಂಕಾ ಕಂಚು ಜಯಿಸಿತು.
800 ಮೀ. ಫೈನಲ್: ಹರ್ಮಿಲನ್ ಬೈನ್ಸ್
ಹಾಂಗ್ ಝೌ : ಭಾರತದ ರನ್ನರ್ ಹರ್ಮಿಲನ್ ಬೈನ್ಸ್ ಅತ್ಲೆಟಿಕ್ಸ್ ನಲ್ಲಿ ಮತ್ತೊಂದು ಬೆಳ್ಳಿ ಪದಕ ಗೆದ್ದುಕೊಂಡರು. ಬುಧವಾರ ನಡೆದ 800 ಮೀ. ಓಟದಲ್ಲಿ ಚೀನಾದ ಜೋಡಿ ಚುನ್ಯು ವಾಂಗ್ ಹಾಗೂ ರಾವೊರನ್ನು ಹಿಂದಿಕ್ಕಿ 2:03.75 ಸೆಕೆಂಡ್ನಲ್ಲಿ ಗುರಿ ತಲುಪಿ 2ನೇ ಸ್ಥಾನ ಪಡೆದರು. ಶ್ರೀಲಂಕಾದ ತುರುಷಿ(2:03.20)ಮೊದಲ ಸ್ಥಾನ ಪಡೆದರು.
ಹರ್ಮಿಲನ್ ಈ ವಾರ ಮಹಿಳೆಯರ 1500 ಮೀ. ಫೈನಲ್ ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಹರ್ಮಿಲನ್ ಅವರ ತಾಯಿ ಮಾಧುರಿ ಸಕ್ಸೇನ 2002ರ ಏಶ್ಯನ್ ಗೇಮ್ಸ್ ನಲ್ಲಿ 800 ಮೀ. ಓಟದಲ್ಲಿ ಬೆಳ್ಳಿ ಜಯಿಸಿದ್ದರು.
ಸ್ಕ್ವಾಷ್: ದೀಪಿಕಾ-ಹರಿಂದರ್ ಸಿಂಗ್ ಫೈನಲಿಗೆ, ಬೆಳ್ಳಿ ಖಚಿತ
ಅಭಯ್, ಅನಾಹತ್ ಗೆ ಕಂಚು
ಹಾಂಗ್ ಝೌ : ಏಶ್ಯನ್ ಗೇಮ್ಸ್ ನಲ್ಲಿ ಬುಧವಾರ ಸ್ಕ್ವಾಷ್ ನ ಮಿಶ್ರ ಡಬಲ್ಸ್ ಪಂದ್ಯದಲ್ಲಿ ದೀಪಿಕಾ ಪಲ್ಲಿಕಲ್ ಹಾಗೂ ಹರಿಂದರ್ ಪಾಲ್ ಸಿಂಗ್ ಹಾಂಕಾಂಗಿನ ಕಾ ಯಿ ಲೀ ಹಾಗೂ ಚಿ ಹಿಮ್ ವಾಂಗ್ರನ್ನು 38 ನಿಮಿಷಗಳ ಹೋರಾಟದಲ್ಲಿ 7-11, 11-7, 11-9 ಅಂತರದಿಂದ ಮಣಿಸಿ ಫೈನಲ್ ಪ್ರವೇಶಿಸಿದರು. ಈ ಮೂಲಕ ಕನಿಷ್ಠ ಬೆಳ್ಳಿ ಪದಕ ಖಚಿತಪಡಿಸಿದರು.
ಭಾರತದ ಇನ್ನೊಂದು ಮಿಶ್ರ ಡಬಲ್ಸ್ ಜೋಡಿ ಅನಾಹತ್ ಸಿಂಗ್ ಹಾಗೂ ಅಭಯ್ ಸಿಂಗ್ ಸೆಮಿ ಫೈನಲಿನಲ್ಲಿ ಮಲೇಶ್ಯ ಆಟಗಾರರ ವಿರುದ್ಧ 11-8, 2-11, 9-11 ಅಂತರದಿಂದ ಸೋಲನುಭವಿಸಿ ಕಂಚಿನ ಪದಕ ಜಯಿಸಿದೆ. ಗೇಮ್ಸ್ ನಲ್ಲಿ ಪುರುಷರ ತಂಡವು ಈಗಾಗಲೇ ಚಿನ್ನದ ಪದಕ ಜಯಿಸಿದರೆ, ಮಹಿಳಾ ತಂಡ ಕಂಚು ಜಯಿಸಿದೆ