ಒಲಿಂಪಿಕ್ಸಲ್ಲಿ 52 ವರ್ಷಗಳ ನಂತರ ಆಸ್ಟ್ರೇಲಿಯವನ್ನು ಮಣಿಸಿದ ಭಾರತದ ಹಾಕಿ ತಂಡ
PC : PTI
ಪ್ಯಾರಿಸ್ : ಭಾರತದ ಪುರುಷರ ಹಾಕಿ ತಂಡ ಟೋಕಿಯೊ ಗೇಮ್ಸ್ ನಲ್ಲಿ ಬೆಳ್ಳಿ ಪದಕ ವಿಜೇತ ಆಸ್ಟ್ರೇಲಿಯ ತಂಡವನ್ನು ತನ್ನ ಅಂತಿಮ ʼಬಿʼ ಗುಂಪಿನ ಪಂದ್ಯದಲ್ಲಿ 3-2 ಗೋಲುಗಳ ಅಂತರದಿಂದ ರೋಚಕವಾಗಿ ಮಣಿಸಿದೆ.
ಬಿ ಗುಂಪಿನಿಂದ ಈಗಾಗಲೇ ಕ್ವಾರ್ಟರ್ ಫೈನಲ್ ಪ್ರವೇಶಿಸಿರುವ ಭಾರತವು ಗ್ರೂಪ್ ಹಂತವನ್ನು ಸಕಾರಾತ್ಮಕವಾಗಿ ಅಂತ್ಯಗೊಳಿಸಿದೆ.
ಶುಕ್ರವಾರ ನಡೆದ ಪಂದ್ಯದಲ್ಲಿ ಭಾರತದ ಪರ ನಾಯಕ ಹರ್ಮನ್ಪ್ರೀತ್ ಸಿಂಗ್ (13ನೇ ನಿಮಿಷ, 32ನೇ ನಿಮಿಷ) ಅವಳಿ ಗೋಲು ಗಳಿಸಿದರು. ಪಂದ್ಯಾವಳಿಯಲ್ಲಿ ಹರ್ಮನ್ಪ್ರೀತ್ ಗಳಿಸಿದ ಆರನೇ ಗೋಲು ಇದಾಗಿದೆ. , ಅಭಿಷೇಕ್ 12ನೇ ನಿಮಿಷದಲ್ಲಿ ಗೋಲು ಗಳಿಸಿ ಭಾರತಕ್ಕೆ ಆರಂಭಿಕ ಮುನ್ನಡೆ ಒದಗಿಸಿಕೊಟ್ಟರು.
ಆಸ್ಟ್ರೇಲಿಯದ ಪರ ಥಾಮಸ್ ಕ್ರೆಗ್ (25ನೇ ನಿಮಿಷ) ಹಾಗೂ ಬ್ಲೇಕ್ ಗ್ರೊವರ್ಸ್ (55ನೇ ನಿಮಿಷ) ತಲಾ ಒಂದು ಗೋಲು ಗಳಿಸಿದರು.
2ನೇ ಕ್ವಾರ್ಟರ್ ನಲ್ಲಿ 2-0 ಮುನ್ನಡೆ ಪಡೆದಿದ್ದ ಭಾರತವು ಉತ್ತಮ ಆರಂಭ ಪಡೆಯಿತು. ಅಭಿಷೇಕ್ 12ನೇ ನಿಮಿಷದಲ್ಲಿ ಗೋಲು ಗಳಿಸಿ ಟೂರ್ನಿಯಲ್ಲಿ ಆಡಿರುವ 2ನೇ ಪಂದ್ಯದಲ್ಲಿ ಎರಡನೇ ಗೋಲು ದಾಖಲಿಸಿದರು. ನಾಯಕ ಹರ್ಮನ್ಪ್ರೀತ್ 13ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರನ್ನು ಗೋಲಾಗಿ ಪರಿವರ್ತಿಸಿದರು.
25ನೇ ನಿಮಿಷದಲ್ಲಿ ಗೋಲು ಗಳಿಸಿದ ಥಾಮಸ್ ಕ್ರೆಗ್ ಮೊದಲಾರ್ಧದ ಅಂತ್ಯಕ್ಕೆ ಆಸ್ಟ್ರೇಲಿಯದ ಹಿನ್ನಡೆಯನ್ನು ತಗ್ಗಿಸಿದರು. ಹರ್ಮನ್ಪ್ರೀತ್ ಯಶಸ್ವಿ ವೀಡಿಯೊ ರೆಫರಲ್ ಮೂಲಕ 32ನೇ ನಿಮಿಷದಲ್ಲಿ ಪೆನಾಲ್ಟಿ ಸ್ಟ್ರೋಕನ್ನು ಗೋಲಾಗಿ ಪರಿವರ್ತಿಸಿ ಭಾರತದ ಮುನ್ನಡೆಯನ್ನು 3-1ಕ್ಕೆ ಏರಿಸಿದರು.
ಆಸ್ಟ್ರೇಲಿಯವು ಕೊನೆಯ ಕ್ವಾರ್ಟರ್ನಲ್ಲಿ ಕಠಿಣ ಹೋರಾಟ ನೀಡಿತು. ಬ್ಲೇಕ್ ಗೋವರ್ಸ್ 55ನೇ ನಿಮಿಷದಲ್ಲಿ ಪೆನಾಲ್ಟಿ ಸ್ಟ್ರೋಕ್ ನಲ್ಲಿ ಗೋಲು ಗಳಿಸಿದಾಗ ಭಾರತಕ್ಕೆ ಭೀತಿ ಕಾಡಿತ್ತು. ಆದರೆ, ಅಂತಿಮವಾಗಿ 3-2ರಿಂದ ಜಯ ಸಾಧಿಸಿ ಗ್ರೂಪ್ ಹಂತವನ್ನು ಗೆಲುವಿನೊಂದಿಗೆ ಕೊನೆಗೊಳಿಸಿತು.
ಐರ್ಲ್ಯಾಂಡ್ ಹಾಗೂ ನ್ಯೂಝಿಲ್ಯಾಂಡ್ ವಿರುದ್ಧ ಜಯ ಹಾಗೂ 2016ರ ಚಾಂಪಿಯನ್ ಅರ್ಜೆಂಟೀನದ ವಿರುದ್ಧ ಡ್ರಾ ಸಾಧಿಸುವ ಮೂಲಕ ಭಾರತದ ಹಾಕಿ ತಂಡವು ಈಗಾಗಲೇ ಕ್ವಾರ್ಟರ್ ಫೈನಲ್ ಸ್ಥಾನ ಖಚಿತಪಡಿಸಿದೆ.
ಭಾರತದ ಹಾಕಿ ತಂಡವು ಒಲಿಂಪಿಕ್ಸ್ ನಲ್ಲಿ 52 ವರ್ಷಗಳ ನಂತರ ಆಸ್ಟ್ರೇಲಿಯವನ್ನು ಸದೆ ಬಡಿದಿದೆ. 1972ರ ಮ್ಯೂನಿಚ್ ಗೇಮ್ಸ್ ನಲ್ಲಿ ಕೊನೆಯ ಬಾರಿ ಭಾರತ ತಂಡವು ಆಸ್ಟ್ರೇಲಿಯವನ್ನು 3-1 ಅಂತರದಿಂದ ಮಣಿಸಿತ್ತು.