ಒಲಿಂಪಿಕ್ಸ್ ಇತಿಹಾಸದಲ್ಲಿ ಹೃದಯ ವಿದ್ರಾವಕ 4ನೇ ಸ್ಥಾನ ಪಡೆದ ಭಾರತೀಯರು
ರೋಮ್ ಒಲಿಂಪಿಕ್ಸ್ ನಲ್ಲಿ ತನ್ನ ಪ್ರತಿಸ್ಪರ್ಧಿ ಎಲ್ಲಿದ್ದಾರೆಂದು ತಿರುಗಿ ನೋಡಿ ಕಂಚು ಕಳೆದಕೊಂಡಿದ್ದ ಮಿಲ್ಖಾ ಸಿಂಗ್!
PC : Olympics.com
ಹೊಸದಿಲ್ಲಿ : ಒಲಿಂಪಿಕ್ಸ್ನಲ್ಲಿ ನಾಲ್ಕನೇ ಸ್ಥಾನ ಪಡೆಯುವುದು ಅತ್ಯಂತ ಹೃದಯವಿದ್ರಾವಕ ಕ್ಷಣವಾಗಿದೆ. ಸ್ಪರ್ಧೆಯೊಂದರಲ್ಲಿ ಕೊನೆಯ ಸ್ಥಾನ ಪಡೆಯುವುದು ಒಂದು ರೀತಿಯ ಮುಜುಗರವನ್ನು ಸೃಷ್ಟಿಸಿದರೆ, ನಾಲ್ಕನೇ ಸ್ಥಾನದಲ್ಲಿ ಸ್ಪರ್ಧೆಯನ್ನು ಮುಗಿಸುವುದು ‘ತೀರಾ ಹತ್ತಿರ ಬಂದರೂ, ತೀರಾ ದೂರದಲ್ಲಿರುವ’’ ಭಾವನೆಯನ್ನು ಮೂಡಿಸುತ್ತದೆ.
ಇದು ಓರ್ವ ಅಥ್ಲೀಟ್ನನ್ನು ಭವಿಷ್ಯದ ಯಶಸ್ಸಿಗೆ ಪ್ರೇರೇಪಿಸಬಹುದು ಅಥವಾ ಅವರ ಕ್ರೀಡಾ ಬದುಕನ್ನೇ ಧ್ವಂಸಗೊಳಿಸಬಹುದು. ಕ್ರೀಡೆಯ ಮಹೋನ್ನತ ವೇದಿಕೆಯಲ್ಲಿ, ಭಾರತವು ಸ್ವಲ್ಪದರಲ್ಲೇ ಕಳೆದುಕೊಂಡ ಯಶಸ್ಸಿಗೆ ದೀರ್ಘ ಇತಿಹಾಸವೇ ಇದೆ. ಇದು 1956ರಿಂದ ಆರಂಭಗೊಳ್ಳುತ್ತದೆ.
ಭಾರತೀಯ ಅಥ್ಲೀಟ್ಗಳು ಯಶಸ್ಸಿನ ಸನಿಹಕ್ಕೆ ಬಂದು ಸ್ವಲ್ಪದರಲ್ಲೇ ಪದಕಗಳನ್ನು ಕಳೆದುಕೊಂಡ ಸನ್ನಿವೇಶಗಳ ಪಟ್ಟಿಯನ್ನು ಇಲ್ಲಿ ಕೊಡಲಾಗಿದೆ.
► 1956, ಮೆಲ್ಬರ್ನ್ ಒಲಿಂಪಿಕ್ಸ್: ಭಾರತೀಯ ಫುಟ್ಬಾಲ್ ತಂಡವು ಕ್ವಾರ್ಟರ್ಫೈನಲ್ನಲ್ಲಿ ಆತಿಥೆಯ ಆಸ್ಟ್ರೇಲಿಯವನ್ನು 4-2 ಗೋಲುಗಳಿಂದ ಸೋಲಿಸಿ ಸೆಮಿಫೈನಲ್ ತಲುಪಿತು. ಒಲಿಂಪಿಕ್ಸ್ನಲ್ಲಿ ಹ್ಯಾಟ್ರಿಕ್ ಬಾರಿಸಿದ ಮೊದಲ ಏಶ್ಯನ್ ಆಗಿ ನೆವಿಲ್ ಡಿಸೋಜ ಹೊರಹೊಮ್ಮಿದರು.
ಆದರೆ, ಸೆಮಿಫೈನಲ್ನಲ್ಲಿ ಯುಗೋಸ್ಲಾವಿಯವು ಭಾರತವನ್ನು ಸೋಲಿಸಿತು. ಬಳಿಕ ನಡೆದ, ಕಂಚಿನ ಪದಕದ ಪಂದ್ಯದಲ್ಲಿ ಭಾರತವನ್ನು ಬಲ್ಗೇರಿಯ ತಂಡವು 3-0 ಗೋಲುಗಳಿಂದ ಸೋಲಿಸಿತು.
► 1960, ರೋಮ್ ಒಲಿಂಪಿಕ್ಸ್: 400 ಮೀಟರ್ ಓಟದಲ್ಲಿ ದಂತಕತೆ ಮಿಲ್ಖಾ ಸಿಂಗ್ ಕೂದಲೆಳೆಯ ಅಂತರದಿಂದ ಕಂಚಿನ ಪದಕವನ್ನು ಕಳೆದುಕೊಂಡರು.
400 ಮೀಟರ್ ಓಟದ ಫೈನಲ್ನಲ್ಲಿ ಸ್ಪರ್ಧಿಸಿದ ‘ಹಾರುವ ಸಿಖ್’ ಮಿಲ್ಖಾ ಸಿಂಗ್ ಪದಕ ಗೆಲ್ಲುವ ಆಕಾಂಕ್ಷಿಯಾಗಿದ್ದರು. ಆದರೆ, ಅವರು ಒಂದು ಸೆಕೆಂಡ್ನ ಹತ್ತನೇ ಒಂದು ಭಾಗದಿಂದ ಕಂಚಿನ ಪದಕದಿಂದ ವಂಚಿತರಾದರು. ತನ್ನ ಸಹ ಸ್ಪರ್ಧಿಗಳು ಎಲ್ಲಿದ್ದಾರೆ ಎಂದು ನೋಡುವುದಕ್ಕಾಗಿ ಒಂದು ಕ್ಷಣ ತಿರುಗಿದಾಗ ಅವರ ವೇಗ ಕಡಿಮೆಯಾಯಿತು ಹಾಗೂ ಅವರು ಪದಕವನ್ನು ಕಳೆದುಕೊಂಡರು. ಈ ತಪ್ಪಿಗಾಗಿ ಅವರು ಜೀವನವಿಡೀ ಮರುಗಿದರು.
► 1980, ಮಾಸ್ಕೋ ಒಲಿಂಪಿಕ್ಸ್: ಅಂದಿನ ಯುಎಸ್ಎಸ್ಆರ್ ಅಫ್ಘಾನಿಸ್ತಾನದ ಮೇಲೆ ನಡೆಸಿರುವ ದಾಳಿಯನ್ನು ವಿರೋಧಿಸಿ ಅದರ ರಾಜಧಾನಿ ಮಾಸ್ಕೋದಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟವನ್ನು ನೆದರ್ಲ್ಯಾಂಡ್ಸ್, ಆಸ್ಟ್ರೇಲಿಯ ಮತ್ತು ಗ್ರೇಟ್ ಬ್ರಿಟನ್ ಮುಂತಾದ ಬಲಿಷ್ಠ ಹಾಕಿ ದೇಶಗಳು ಬಹಿಷ್ಕರಿಸಿದ್ದವು. ಭಾರತೀಯ ಮಹಿಳಾ ಹಾಕಿ ತಂಡಕ್ಕೆ ಮೊದಲ ಪ್ರಯತ್ನದಲ್ಲೇ ಪದಕವೊಂದನ್ನು ಗೆಲ್ಲುವ ಅವಕಾಶ ಎದುರಾಗಿತ್ತು.
ಆದರೆ, ಭಾರತೀಯ ತಂಡವು ಸ್ವಲ್ಪದರಲ್ಲೇ ಪದಕ ವಂಚಿತವಾಯಿತು. ಅದು ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಯುಎಸ್ಎಸ್ಆರ್ ವಿರುದ್ಧ 1-3 ಅಂತರದ ಸೋಲನುಭವಿಸಿ ನಾಲ್ಕನೇ ಸ್ಥಾನ ಪಡೆಯಿತು. ಮೊದಲ ಮೂರು ಸ್ಥಾನಗಳನ್ನು ಕ್ರಮವಾಗಿ ಜಿಂಬಾಬ್ವೆ, ಝೆಕೊಸ್ಲೊವಾಕಿಯ ಮತ್ತು ಆತಿಥೇಯ ಯುಎಸ್ಎಸ್ಆರ್ ಗೆದ್ದುಕೊಂಡವು.
► 1984, ಲಾಸ್ ಏಂಜಲಿಸ್ ಒಲಿಂಪಿಕ್ಸ್: ರೋಮ್ ಒಲಿಂಪಿಕ್ಸ್ನಲ್ಲಿ ಮಿಲ್ಖಾ ಸಿಂಗ್ಗೆ ಆದ ಅನುಭವವು 1984 ಲಾಸ್ ಏಂಜಲಿಸ್ ಒಲಿಂಪಿಕ್ಸ್ನಲ್ಲಿ ಭಾರತೀಯ ಓಟದ ರಾಣಿ ಪಿ.ಟಿ. ಉಷಾರಿಗೆ ಆಯಿತು. ಅವರು 400 ಮೀಟರ್ ಹರ್ಡಲ್ಸ್ನಲ್ಲಿ ಕಂಚಿನ ಪದಕದಿಂದ ಸೆಕೆಂಡ್ನ 100ನೇ ಒಂದು ಭಾಗದಿಂದ ವಂಚಿತರಾದರು. ಇದು ಯಾವುದೇ ಸ್ಪರ್ಧೆಯಲ್ಲಿ ಭಾರತೀಯ ಅತ್ಲೀಟ್ ಒಬ್ಬರು ಪದಕವೊಂದನ್ನು ಕಳೆದುಕೊಂಡ ಅತ್ಯಂತ ಕನಿಷ್ಠ ಅಂತರವಾಯಿತು.
‘ಪಯ್ಯೋಳಿ ಎಕ್ಸ್ಪ್ರೆಸ್’ ಎಂಬ ಹೆಸರಿನಿಂದ ಪ್ರಸಿದ್ಧರಾಗಿರುವ ಅವರು ನಾಲ್ಕನೇ ಸ್ಥಾನ ಪಡೆದರು. ಆದರೆ, ಅವರ ಆ ಧೀರೋದಾತ್ತ ಪ್ರಯತ್ನ ಜನರ ಮನದಲ್ಲಿ ಅಚ್ಚಳಿಯದೆ ಉಳಿಯಿತು. ಅವರು ಭಾರತದಲ್ಲಿ ಮನೆಮಾತಾದರು.
► 2004, ಅಥೆನ್ಸ್ ಒಲಿಂಪಿಕ್ಸ್: ಇಪ್ಪತ್ತು ಸುದೀರ್ಘ ವರ್ಷಗಳ ಬಳಿಕ, ನಾಲ್ಕನೇ ಸ್ಥಾನದ ಭೂತ ಮತ್ತೆ ಭಾರತೀಯ ಪಾಳಯವನ್ನು ಕಾಡಿತು. ಅಥೆನ್ಸ್ ಒಲಿಂಪಿಕ್ಸ್ನಲ್ಲಿ, ಟೆನಿಸ್ ಪುರುಷರ ಡಬಲ್ಸ್ನಲ್ಲಿ ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ಪದಕವೊಂದರಿಂದ ಸ್ವಲ್ಪದರಲ್ಲೇ ವಂಚಿತರಾದರು.
ಕಂಚಿನ ಪದಕಕ್ಕಾಗಿ ನಡೆದ ಸುದೀರ್ಘ ಪಂದ್ಯದಲ್ಲಿ, ಭಾರತೀಯ ಜೋಡಿಯನ್ನು ಕ್ರೊಯೇಶಿಯದ ಮರಿಯೊ ಆನ್ಸಿಕ್ ಮತ್ತು ಇವಾನ್ ಲ್ಯುಬಿಸಿಕ್ 7-6, 4-6, 16-14 ಸೆಟ್ಗಳಿಂದ ಸೋಲಿಸಿದರು. ಇದರೊಂದಿಗೆ ಪೇಸ್-ಭೂಪತಿ ಜೋಡಿ ನಾಲ್ಕನೇ ಸ್ಥಾನ ಪಡೆಯಿತು.
ಅದಕ್ಕೂ ಮೊದಲು, ಭಾರತೀಯ ಜೋಡಿಯು ಚಿನ್ನ ಗೆಲ್ಲುವ ನೆಚ್ಚಿನ ಜೋಡಿಯಾಗಿ ಸೆಮಿಫೈನಲ್ ತಲುಪಿತ್ತು. ಆದರೆ ಸೆಮಿಫೈನಲ್ನಲ್ಲಿ ನಿಕೊಲಸ್ ಕೈಫರ್ ಮತ್ತು ರೈನರ್ ಶಟ್ಲರ್ ಜೋಡಿಯ ವಿರುದ್ಧ 2-6, 3-6 ನೇರ ಸೆಟ್ಗಳ ಸೋಲನುಭವಿಸಿತು.
ಅದೇ ಒಲಿಂಪಿಕ್ಸ್ನಲ್ಲಿ, ಮಹಿಳೆಯರ 48 ಕೆಜಿ ವಿಭಾಗದ ವೇಟ್ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತದ ಕುಂಜರಾಣಿ ದೇವಿ ಕೂಡ ನಾಲ್ಕನೇ ಸ್ಥಾನ ಪಡೆದರು. ಆದರೆ, ಅವರು ವಾಸ್ತವಿಕವಾಗಿ ಪದಕದ ಬೇಟೆಯಲ್ಲಿರಲಿಲ್ಲ. ಕಂಚಿನ ಪದಕ ಗೆದ್ದ ಥಾಯ್ಲೆಂಡ್ನ ಅರೀ ವಿರಾಟ್ತವೊರ್ನ್ ಕಂಚಿನ ಪದಕ ಗೆದ್ದರು. ಕಂಚಿನ ಪದಕದ ಸ್ಪರ್ಧೆಯಲ್ಲಿ ಕುಂಜರಾಣಿ ಒಟ್ಟು 190 ಕೆಜಿ ಭಾರ ಎತ್ತಿದರು. ಇದು ಅವರ ಎದುರಾಳಿಗಿಂತ 10 ಕೆಜಿ ಕಡಿಮೆಯಾಗಿದೆ.
► 2012, ಲಂಡನ್ ಒಲಿಂಪಿಕ್ಸ್: ಈ ಒಲಿಂಪಿಕ್ಸ್ನಲ್ಲಿ ಶೂಟರ್ ಜೋಯ್ದೀಪ್ ಕರ್ಮಾಕರ್ 50 ಮೀಟರ್ ರೈಫಲ್ ಪ್ರೋನ್ ವಿಭಾಗದಲ್ಲಿ ನಾಲ್ಕನೇ ಸ್ಥಾನ ಪಡೆದ ಪದಕದಿಂದ ವಂಚಿತರಾದರು.
ಪುರುಷರ 50 ಮೀಟರ್ ರೈಫಲ್ ಪ್ರೋನ್ ಸ್ಪರ್ಧೆಯಲ್ಲಿ, ಅರ್ಹತಾ ಸುತ್ತಿನಲ್ಲಿ ಕರ್ಮಾಕರ್ ಏಳನೇ ಸ್ಥಾನ ಪಡೆದಿದ್ದರು. ಆದರೆ, ಫೈನಲ್ನಲ್ಲಿ, ಅವರು ಕಂಚಿನ ಪದಕ ವಿಜೇತನಿಗಿಂತ ಕೇವಲ 1.9 ಅಂಕದಿಂದ ಹಿಂದಿದ್ದರು.
► 2016, ರಿಯೋ ಡಿ ಜನೈರೊ ಒಲಿಂಪಿಕ್ಸ್: ರಿಯೋ ಡಿ ಜನೈರೊ ಒಲಿಂಪಿಕ್ಸ್ನಲ್ಲಿ ಭಾಗವಹಿಸಿದ ದೀಪಾ ಕರ್ಮಾಕರ್, ಒಲಿಂಪಿಕ್ಸ್ನಲ್ಲಿ ಭಾಗವಹಿಸಿದ ಮೊದಲ ಮಹಿಳಾ ಜಿಮ್ನಾಸ್ಟ್ ಆದರು. ಮಹಿಳೆಯರ ವಾಲ್ಟ್ ಸ್ಪರ್ಧೆಯಲ್ಲಿ ಅವರು 15.066 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದರು. ಅದರೊಂದಿಗೆ, ಕಂಚಿನ ಪದಕವನ್ನು 0.150 ಅಂಕದಿಂದ ಕಳೆದುಕೊಂಡರು.
ಅದೇ ಒಲಿಂಪಿಕ್ಸ್ನಲ್ಲಿ, ಅಭಿನವ್ ಬಿಂದ್ರಾರ ಭವ್ಯ ವೃತ್ತಿಜೀವನವು ವೈಭವದೊಂದಿಗೆ ಕೊನೆಗೊಳ್ಳುವ ಹಂತವನ್ನು ತಲುಪಿತ್ತು. ಆದರೆ, ಈ ನಾಲ್ಕನೇ ಸ್ಥಾನದ ಶಾಪ ಅವರನ್ನೂ ಬಿಡಲಿಲ್ಲ. ಅವರು ಕೂದಲೆಳೆಯ ಅಂತರದಿಂದ ಕಂಚಿನ ಪದಕವನ್ನು ಕಳೆದುಕೊಂಡರು. ಅದಕ್ಕಿಂತ ಎಂಟು ವರ್ಷಗಳ ಮೊದಲು ಬೀಜಿಂಗ್ ಒಲಿಂಪಿಕ್ಸ್ನಲ್ಲಿ ಅವರು ಐತಿಹಾಸಿಕ ಚಿನ್ನದ ಪದಕವನ್ನು ಗೆದ್ದಿದ್ದರು.
► 2020, ಟೋಕಿಯೊ ಒಲಿಂಪಿಕ್ಸ್: 1980ರ ಮಾಸ್ಕೋ ಒಲಿಂಪಿಕ್ ಗೇಮ್ಸ್ನ ನಾಲ್ಕು ದಶಕಗಳ ಬಳಿಕ, ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾರತೀಯ ಮಹಿಳಾ ಹಾಕಿ ತಂಡಕ್ಕೆ ಇನ್ನೊಂದು ನಾಲ್ಕನೇ ಸ್ಥಾನದ ದುರಾದೃಷ್ಟ ಕಾದಿತ್ತು. ಭಾರತೀಯ ತಂಡವು ಸಾಮರ್ಥ್ಯ ಮೀರಿದ ಪ್ರದರ್ಶನವನ್ನು ನೀಡಿ ಮೂರು ಬಾರಿಯ ಒಲಿಂಪಿಕ್ ಚಾಂಪಿಯನ್ ಆಸ್ಟ್ರೇಲಿಯವನ್ನು ಸೋಲಿಸಿ ಸೆಮಿಫೈನಲ್ ತಲುಪಿತು. ಆದರೆ, ಸೆಮಿಫೈನಲ್ನಲ್ಲಿ ಭಾರತವನ್ನು ಅರ್ಜೆಂಟೀನ ತಂಡವು 1-0 ಅಂತರದಿಂದ ಸೋಲಿಸಿತು. ಆದರೆ, ಕಂಚಿನ ಪದಕವನ್ನು ಗೆಲ್ಲುವ ಅವಕಾಶ ಅದಕ್ಕೆ ಆಗಲೂ ಮುಕ್ತವಾಗಿತ್ತು. ಮರೀಚಿಕೆಯಾಗಿರುವ ಪದಕವೊಂದನ್ನು ಗೆಲ್ಲುವ ಭರವಸೆಯನ್ನು ರಾಣಿ ರಾಂಪಾಲ್ ನೇತೃತ್ವದ ತಂಡವು ನೀಡಿತ್ತು. ಗ್ರೇಟ್ ಬ್ರಿಟನ್ ವಿರುದ್ಧದ ಆ ಪಂದ್ಯದಲಿ ಅದು ಒಂದು ಹಂತದಲ್ಲಿ 3-2ರ ಮುನ್ನಡೆಯನ್ನೂ ಹೊಂದಿತ್ತು.
ಆದರೆ, ಬಳಿಕ ಬ್ರಿಟನ್ ಎರಡು ಗೋಲುಗಳನ್ನು ಬಾರಿಸಿ ಅಂಕಪಟ್ಟಿಯನ್ನು 4-3ಕ್ಕೆ ಏರಿಸಿತು ಹಾಗೂ ಕಂಚಿನ ಪದಕವನ್ನು ಗೆದ್ದಿತು.
ಅದೇ ಒಲಿಂಪಿಕ್ಸ್ನಲ್ಲಿ, ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಕೂಡ ಪದಕದಿಂದ ಸ್ವಲ್ಪದರಲ್ಲೇ ವಂಚಿತರಾದರು.
200ನೇ ವಿಶ್ವ ರ್ಯಾಂಕಿಂಗ್ ಹೊಂದಿದ್ದ 26 ವರ್ಷದ ಅದಿತಿ, ವಿಶ್ವದ ಶ್ರೇಷ್ಠ ಗಾಲ್ಫ್ ಆಟಗಾರರಿಗೆ ತೀವ್ರ ಸ್ಪರ್ಧೆಯನ್ನು ನೀಡಿದ್ದರು. ಆದರೆ, ಅಂತಿಮವಾಗಿ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಡೆದರು.