ಭಾರತದ ಅತ್ಯಂತ ಹಿರಿಯ ಕ್ರಿಕೆಟಿಗ ದತ್ತಾಜಿರಾವ್ ಗಾಯಕ್ವಾಡ್ ನಿಧನ

ದತ್ತಾಜಿರಾವ್ ಗಾಯಕ್ವಾಡ್ | Photo: mint.com
ಹೊಸದಿಲ್ಲಿ: ಭಾರತದ ಅತ್ಯಂತ ಹಿರಿಯ ಟೆಸ್ಟ್ ಕ್ರಿಕೆಟಿಗ ಹಾಗೂ ಮಾಜಿ ನಾಯಕ ದತ್ತಾಜಿರಾವ್ ಗಾಯಕ್ವಾಡ್ ಮಂಗಳವಾರ ವಯೋಸಹಜ ಸಮಸ್ಯೆಗಳಿಂದಾಗಿ ನಿಧನರಾಗಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು. ಭಾರತದ ಮಾಜಿ ಆರಂಭಿಕ ಬ್ಯಾಟರ್ ದತ್ತಾಜಿರಾವ್ ಅವರು ಪುತ್ರ, ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ಅಂಶುಮಾನ್ ಗಾಯಕ್ವಾಡ್ ಅವರನ್ನು ಅಗಲಿದ್ದಾರೆ.
ಬರೋಡಾ ಆಸ್ಪತ್ರೆಯಲ್ಲಿ ಕಳೆದ 12 ದಿನಗಳಿಂದ ತೀವ್ರ ನಿಗಾ ಘಟಕದಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದ ಗಾಯಕ್ವಾಡ್ ಇಂದು ಬೆಳಗ್ಗಿನ ಜಾವ ನಿಧನರಾದರು ಎಂದು ಕುಟುಂಬ ಮೂಲಗಳು ಪಿಟಿಐಗೆ ತಿಳಿಸಿವೆ.
1952 ಹಾಗೂ 1961ರ ಮಧ್ಯೆ ಭಾರತದ ಪರ 11 ಟೆಸ್ಟ್ ಪಂದ್ಯಗಳನ್ನು ಆಡಿದ್ದ ಗಾಯಕ್ವಾಡ್ 1959ರಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತದ ನಾಯಕತ್ವ ವಹಿಸಿದ್ದರು.
1952ರಲ್ಲಿ ಲೀಡ್ಸ್ ನಲ್ಲಿ ಇಂಗ್ಲೆಂಡ್ ವಿರುದ್ಧ ಚೊಚ್ಚಲ ಪಂದ್ಯವನ್ನಾಡಿದ್ದ ಬಲಗೈ ಬ್ಯಾಟರ್ ಗಾಯಕ್ವಾಡ್ 1961ರಲ್ಲಿ ಚೆನ್ನೈನಲ್ಲಿ ಪಾಕಿಸ್ತಾನದ ವಿರುದ್ಧ ಕೊನೆಯ ಅಂತರ್ರಾಷ್ಟ್ರೀಯ ಪಂದ್ಯವನ್ನಾಡಿದ್ದರು. 18.42ರ ಸರಾಸರಿಯಲ್ಲಿ 350 ಟೆಸ್ಟ್ ರನ್ ಗಳಿಸಿದ್ದರು. 1959ರಲ್ಲಿ ಹೊಸದಿಲ್ಲಿಯಲ್ಲಿ ವೆಸ್ಟ್ಇಂಡೀಸ್ ವಿರುದ್ಧ ಗರಿಷ್ಠ ಸ್ಕೋರ್(52) ಗಳಿಸಿದ್ದರು.
ಗಾಯಕ್ವಾಡ್ ಅವರು 1947 ಹಾಗೂ 1961ರ ನಡುವೆ ರಣಜಿ ಟ್ರೋಫಿಯಲ್ಲಿ ಬರೋಡಾದ ಪರ ಆಡಿದ್ದರು. 47.56ರ ಸರಾಸರಿಯಲ್ಲಿ 14 ಶತಕಗಳ ಸಹಿತ 3,139 ರನ್ ಗಳಿಸಿದ್ದಾರೆ. 1959-60ರ ಋತುವಿನಲ್ಲಿ ಮಹಾರಾಷ್ಟ್ರದ ವಿರುದ್ಧ ಗರಿಷ್ಠ ವೈಯಕ್ತಿಕ ಸ್ಕೋರ್ ಔಟಾಗದೆ 249 ಗಳಿಸಿದ್ದರು.
ಎಲ್ಲ ಪ್ರಥಮ ದರ್ಜೆ ಪಂದ್ಯಗಳಲ್ಲಿ 17 ಶತಕ ಸಹಿತ 36ರ ಸರಾಸರಿಯಲ್ಲಿ ಒಟ್ಟು 5,788 ರನ್ ಗಳಿಸಿದ್ದರು.
ಮಾಜಿ ಹಿಟ್ಟರ್ ದೀಪಕ್ ಶೋಧನ್ 2016ರಲ್ಲಿ ಅಹ್ಮದಾಬಾದ್ ನಲ್ಲಿ ತನ್ನ 87ನೇ ವಯಸ್ಸಿನಲ್ಲಿ ನಿಧನರಾದ ನಂತರ ಗಾಯಕ್ವಾಡ್ ಅವರು ಭಾರತದಲ್ಲಿ ವಾಸವಿದ್ದ್ದ ಅತ್ಯಂತ ಹಿರಿಯ ಟೆಸ್ಟ್ ಕ್ರಿಕೆಟ್ ಆಟಗಾರನಾಗಿದ್ದರು.
ಈಗ ಭಾರತದಲ್ಲಿ ವಾಸವಿರುವ ಅತ್ಯಂತ ಹಿರಿಯ ಟೆಸ್ಟ್ ಕ್ರಿಕೆಟಿಗರೆಂದರೆ ಚಿಂಗಲ್ಪುಟ್ ಗೋಪಿನಾಥ್. ಮದ್ರಾಸ್ ಕ್ರಿಕೆಟಿಗರಾದ ಗೋಪಿನಾಥ್ ಗೆ ಈಗ 93ರ ವಯಸ್ಸು.