ಪ್ಯಾರಿಸ್ ಪ್ಯಾರಾಲಿಂಪಿಕ್ಸ್: ಡೋಪಿಂಗ್ ನಿಯಮ ಉಲ್ಲಂಘಿಸಿದ್ದಕ್ಕೆ ಹಾಲಿ ಚಾಂಪಿಯನ್ ಪ್ರಮೋದ್ ಭಗತ್ 18 ತಿಂಗಳು ಅಮಾನತು
ಪ್ರಮೋದ್ ಭಗತ್ (Photo: PTI)
ಪ್ಯಾರಿಸ್: ಉದ್ದೀಪನ ಔಷಧ ನಿಯಮಗಳನ್ನು ಉಲ್ಲಂಘಿಸಿದ ಆರೋಪದಲ್ಲಿ 2020ರ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಜಯಿಸಿದ್ದ ಭಾರತದ ಪ್ರಮೋದ್ ಭಗತ್ ಅವರನ್ನು 18 ತಿಂಗಳ ಕಾಲ ಅಮಾನತುಗೊಳಿಸಲಾಗಿದೆ ಎಂದು ವಿಶ್ವ ಬ್ಯಾಡ್ಮಿಂಟನ್ ಒಕ್ಕೂಟ ಪ್ರಕಟಿಸಿದೆ. ಇದರ ಪರಿಣಾಮವಾಗಿ 2024ರ ಪ್ಯಾರಿಸ್ ಪ್ಯಾರಲಿಂಪಿಕ್ಸ್ ಕ್ರೀಡಾಕೂಟದಿಂದ ಪ್ರಮೋದ್ ಭಗತ್ ಹೊರಗುಳಿಯಲಿದ್ದಾರೆ.
“ಮಾರ್ಚ್ 1, 2024ರಂದು 12 ತಿಂಗಳಲ್ಲಿ ಉದ್ದೀಪನ ಔಷಧ ಸೇವನೆಯ ಪರೀಕ್ಷೆಯಲ್ಲಿ ಪ್ರಮೋದ್ ಭಗತ್ ಮೂರು ಬಾರಿ ವಿಫಲಗೊಂಡಿರುವುದನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದ ಉದ್ದೀಪನ ಔಷಧ ಸೇವನೆ ನಿಗ್ರಹ ವಿಭಾಗವು ಪತ್ತೆ ಹಚ್ಚಿದೆ. ಇದು ವಿಶ್ವ ಬ್ಯಾಡ್ಮಿಂಟನ್ ಒಕ್ಕೂಟದ ಉದ್ದೀಪನ ಔಷಧ ಸೇವನೆ ನಿಯಮಾವಳಿಗಳ ಉಲ್ಲಂಘನೆಯಾಗಿದೆ” ಎಂದು ವಿಶ್ವ ಬ್ಯಾಡ್ಮಿಂಟನ್ ಒಕ್ಕೂಟವು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
“ಎಸ್ಎಲ್3 ಅಥ್ಲೀಟ್ ಆದ ಭಗತ್ ಈ ನಿರ್ಧಾರವನ್ನು ಪ್ರಶ್ನಿಸಿ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದ ಮೇಲ್ಮನವಿ ವಿಭಾಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಜುಲೈ 29, 2024ರಂದು ಭಗತ್ ಅವರ ಮೇಲ್ಮನವಿಯನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದ ಮೇಲ್ಮನವಿ ವಿಭಾಗವು ತಳ್ಳಿ ಹಾಕಿದೆ ಹಾಗೂ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದ ಉದ್ದೀಪನ ಔಷಧ ನಿಗ್ರಹ ವಿಭಾಗದ ಮಾರ್ಚ್ 1, 2024ರ ನಿರ್ಧಾರವನ್ನು ದೃಢಪಡಿಸಿದೆ” ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಉದ್ದೀಪನ ಔಷಧ ಸೇವನೆ ಪರೀಕ್ಷೆಯಲ್ಲಿ ವಿಫಲಗೊಂಡಿರುವುದರಿಂದ ಪ್ಯಾರಾಲಿಂಪಿಕ್ಸ್ ನ ಎಸ್ಎಲ್3 ಚಾಂಪಿಯನ್ ಆದ ಪ್ರಮೋದ್ ಭಗತ್ 18 ತಿಂಗಳ ಅಮಾನತು ಶಿಕ್ಷೆಗೆ ಗುರಿಯಾಗಿದ್ದಾರೆ.
ಹೀಗಾಗಿ ಪ್ರಮೋದ್ ಭಗತ್ ಬದಲಿಗೆ ಕಳೆದ ಬಾರಿ ಪ್ಯಾರಾಲಿಂಪಿಕ್ಸ್ ನಲ್ಲಿ ಪಾಲ್ಗೊಂಡಿದ್ದ ಮನೋಜ್ ಸರ್ಕಾರ್ ಹಾಗೂ ಏಶಿಯನ್ ಪ್ಯಾರಾ ಗೇಮ್ಸ್ ನಲ್ಲಿ ಪಾಲ್ಗೊಂಡಿದ್ದ ನಿತೇಶ್ ಕುಮಾರ್ ಎಸ್ಎ ಲ್3ಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಟೊಕಿಯೊ ಪ್ಯಾರಾಲಿಂಪಿಕ್ಸ್ ನ ಎಸ್ಎಲ್3 ಪ್ರವರ್ಗದ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ನ ಡೇನಿಯಲ್ ಬೆಥೆಲ್ ಅವನ್ನು ಪರಾಭವಗೊಳಿಸಿದ್ದ ಪ್ರಮೋದ್ ಭಗತ್, ಚಿನ್ನದ ಪದಕ ಜಯಿಸಿದ್ದರು.