ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಇತಿಹಾಸ ನಿರ್ಮಿಸಿದ ಭಾರತದ ಸ್ಟಾರ್ ಶೂಟರ್ ಮನು ಭಾಕರ್
ಹಲವು ಕ್ರೀಡೆಗಳಲ್ಲಿ ಆಸಕ್ತಿ ಹೊಂದಿದ್ದ ಹರ್ಯಾಣದ ಅತ್ಲೀಟ್ ಗೆ ಒಲಿದ ಶೂಟಿಂಗ್ ಸ್ಪರ್ಧೆ
ಮನು ಭಾಕರ್ | PTI
ಪ್ಯಾರಿಸ್ : ಕ್ರೀಡೆಗಳ ವಿಚಾರಕ್ಕೆ ಬಂದಾಗ ಅದರಲ್ಲೂ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಹರ್ಯಾಣ ರಾಜ್ಯವು ಬಾಕ್ಸರ್ ಗಳು ಹಾಗೂ ಕುಸ್ತಿಪಟುಗಳ ರೂಪದಲ್ಲಿ ದೇಶಕ್ಕೆ ಹಲವು ಉತ್ತಮ ಕ್ರೀಡಾಪಟುಗಳನ್ನು ನೀಡಿದೆ.
ಶಾಲಾದಿನಗಳಲ್ಲಿ ಟೆನಿಸ್, ಸ್ಕೇಟಿಂಗ್ ಹಾಗೂ ಬಾಕ್ಸಿಂಗ್ ಕ್ರೀಡೆಗಳಲ್ಲಿ ಪಳಗಲು ಪ್ರಯತ್ನಿಸಿದ್ದ ಹರ್ಯಾಣದ ಮನು ಭಾಕರ್ ಶೂಟಿಂಗ್ ನಲ್ಲಿ ತನ್ನ ಭವಿಷ್ಯ ಕಂಡುಕೊಂಡರು.
ಕ್ರೀಡೆ ಎಂದರೆ ಮನುಗೆ ಪಂಚಪ್ರಾಣ. ಆಕೆ ಥಾಂಗ್ ತಾ ಎಂದು ಕರೆಯುವ ಮಾರ್ಷಲ್ ಆರ್ಟ್ಸ್ ನಲ್ಲಿ ಪಳಗಿದ್ದರು. ರಾಷ್ಟ್ರೀಯ ಮಟ್ಟದಲ್ಲಿ ಹಲವು ಪದಕಗಳನ್ನು ಜಯಿಸಿದ್ದರು. ಮನು ಶೂಟಿಂಗ್ ಕ್ರೀಡೆಯನ್ನು ಆಯ್ದುಕೊಂಡಾಗ ನೀರಿನಿಂದ ಹೊರ ತೆಗೆದ ಮೀನಿನಂತಾಗಿದ್ದರು. 2024ರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಐತಿಹಾಸಿಕ ಕಂಚಿನ ಪದಕ ಜಯಿಸುವ ಮೂಲಕ ಮನು ಅವರ ಪಯಣ ಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾಗಿದೆ.
ಮನು ಅವರು 2016ರ ರಿಯೋ ಒಲಿಂಪಿಕ್ಸ್ ಮುಗಿದ ನಂತರ ಕೇವಲ 14 ರ ವಯಸ್ಸಿನಲ್ಲಿ ಶೂಟಿಂಗ್ನಲ್ಲಿ ಕೈಚಳಕ ತೋರಿಸಲು ಪ್ರಯತ್ನಿಸಿದರು. ಹಲವಾರು ಕ್ರೀಡೆಗಳಲ್ಲಿ ಆಸಕ್ತಿ ಹೊಂದಿದ್ದ ಮನು ಅಂತಿಮವಾಗಿ ಶೂಟಿಂಗ್ ಕ್ರೀಡೆಯ ಮೋಹಕ್ಕೆ ಒಳಗಾದರು. ತನ್ನ ತಂದೆಯ ಬಳಿ ಸ್ಪೋರ್ಟ್ ಶೂಟಿಂಗ್ ಪಿಸ್ತೂಲ್ ಗೆ ಬೇಡಿಕೆ ಇಟ್ಟ ಮನು ಭಾಕರ್ ಈ ಕ್ರೀಡೆಯನ್ನು ವೃತ್ತಿಪರವಾಗಿ ಸ್ವೀಕರಿಸಲು ಬಯಸಿದರು.
ಮನು ಭಾಕರ್ ವೃತ್ತಿಜೀವನದುದ್ದಕ್ಕೂ ಆಕೆಯ ತಂದೆ ರಾಮ್ ಕಿಶನ್ ಭಾಕರ್ ಬೆಂಬಲಕ್ಕೆ ನಿಂತರು. ಆನಂತರದ ಬೆಳವಣಿಗೆ ಈಗ ಇತಿಹಾಸವಾಗಿದೆ.
ಮನು ತನ್ನ ಕಿರಿಯ ವಯಸ್ಸಿನಲ್ಲಿ ರಾಷ್ಟ್ರ ಹಾಗೂ ಜಾಗತಿಕ ಸ್ಪರ್ಧೆಗಳಲ್ಲಿ ತ್ರಿವರ್ಣ ಧ್ವಜವನ್ನು ಮುಗಿಲೆತ್ತರಕ್ಕೆ ಹಾರಿಸಿದ್ದರು. 2017ರ ನ್ಯಾಶನಲ್ ಶೂಟಿಂಗ್ ಚಾಂಪಿಯನ್ಶಿಪ್ ನಲ್ಲಿ ಒಲಿಂಪಿಯನ್ ಹಾಗೂ ಮಾಜಿ ವಿಶ್ವದ ನಂ.1 ಹೀನಾ ಸಿಧು ಅವರನ್ನು ಸೋಲಿಸಿ ಬೆಳಕಿಗೆ ಬಂದಿದ್ದರು.
2017ರ ಏಶ್ಯನ್ ಜೂನಿಯರ್ ಚಾಂಪಿಯನ್ಶಿಪ್ ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಮನು 2018ರಲ್ಲಿ ಮೆಕ್ಸಿಕೊದಲ್ಲಿ ಇಂಟರ್ನ್ಯಾಶನಲ್ ಸ್ಪೋರ್ಟ್ ಶೂಟಿಂಗ್ ಫೆಡರೇಶನ್(ಐಎಸ್ಎಸ್ಎಫ್)ವರ್ಲ್ಡ್ ಕಪ್ನಲ್ಲಿ ಚೊಚ್ಚಲ ಪಂದ್ಯವನ್ನು ಆಡಿ ಇಡೀ ವಿಶ್ವಕ್ಕೆ ತನ್ನ ಆಗಮನ ಸಾರಿದ್ದರು. ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ ಜೂನಿಯರ್ ವಿಶ್ವ ದಾಖಲೆಯನ್ನು ಮುರಿದಿದ್ದರು.
ಕೇವಲ 16ರ ವಯಸ್ಸಿನಲ್ಲಿ ಮನು ಅವರು ಐಎಸ್ಎಸ್ಎಫ್ ವಿಶ್ವಕಪ್ನಲ್ಲಿ ಚಿನ್ನದ ಪದಕ ಜಯಿಸಿದ ಭಾರತದ ಯುವ ಶೂಟರ್ ಎನಿಸಿಕೊಂಡಿದ್ದರು. ಮನು 10 ಮೀ.ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ವೈಯಕ್ತಿಕ ಹಾಗೂ ಮಿಕ್ಸೆಡ್ ಟೀಮ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದರು.
2018ರಲ್ಲಿ ಆಸ್ಟ್ರೇಲಿಯದ ಗೋಲ್ಡ್ಕೋಸ್ಟ್ ನಲ್ಲಿ ನಡೆದಿದ್ದ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಮನು ಭಾಕರ್ ಇತಿಹಾಸದ ಪುಸ್ತಕಗಳಲ್ಲಿ ತನ್ನ ಹೆಸರು ದಾಖಲಿಸಿದರು. ಮಹಿಳೆಯರ 10 ಮೀ. ಏರ್ ಪಿಸ್ತೂಲ್ ನಲ್ಲಿ ಚಿನ್ನದ ಪದಕ ಬಾಚಿಕೊಂಡು ಗೇಮ್ಸ್ ನಲ್ಲಿ ಹೊಸ ದಾಖಲೆ ಬರೆದರು.
2019ರ ಮ್ಯೂನಿಚ್ ಐಎಸ್ಎಸ್ಎಫ್ ವರ್ಲ್ಡ್ ಕಪ್ ನಲ್ಲಿ 4ನೇ ಸ್ಥಾನ ಪಡೆಯುವ ಮೂಲಕ ಮನು ಭಾಕರ್ ಟೋಕಿಯೊ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿದ್ದರು. 2021ರಲ್ಲಿ ಹೊಸದಿಲ್ಲಿ ಐಎಸ್ಎಸ್ಎಫ್ ವಿಶ್ವಕಪ್ ನಲ್ಲಿ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕ ಜಯಿಸಿದ್ದರು. ಟೋಕಿಯೊ ಒಲಿಂಪಿಕ್ ಗೇಮ್ಸ್ ನಲ್ಲಿ ದೇಶದ ಪದಕದ ವಿಶ್ವಾಸವನ್ನು ಹೆಚ್ಚಿಸಿದ್ದರು. ಆದರೆ, ಪಿಸ್ತೂಲ್ ದೋಷದಿಂದಾಗಿ ಮನು ಭಾಕರ್ ಅರ್ಹತಾ ಸುತ್ತಿನ ಸ್ಪರ್ಧೆಯಿಂದ ಹಿಂದೆ ಸರಿದರು.
ಟೋಕಿಯೊ ಒಲಿಂಪಿಕ್ಸ್ ನಂತರ ಲಿಮಾದಲ್ಲಿ ನಡೆದ ಮಹಿಳೆಯರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಜೂನಿಯರ್ ವಿಶ್ವ ಚಾಂಪಿಯನ್ ಎನಿಸಿಕೊಂಡರು. ಆನಂತರ ನಿರಂತರವಾಗಿ ಜೂನಿಯರ್ ಮಟ್ಟದಲ್ಲಿ ಪದಕ ಜಯಿಸುತ್ತಾ ಬಂದಿದ್ದಾರೆ. ಆದರೆ 2021ರ ನಂತರ ಸೀನಿಯರ್ ಸ್ಪರ್ಧಾವಳಿಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲ.
2022ರ ಕೈರೊ ವಿಶ್ವ ಚಾಂಪಿಯನ್ಶಿಪ್ ನಲ್ಲಿ ಮಹಿಳೆಯರ 25 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದಿದ್ದ ಮನು 2023ರ ಏಶ್ಯನ್ ಗೇಮ್ಸ್ ನಲ್ಲಿ ಇದೇ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದರು. ಆದರೆ ಅವರು ಸೀನಿಯರ್ ಮಟ್ಟದಲ್ಲಿ ಮಹಿಳೆಯರ 25 ಮೀ. ಪಿಸ್ತೂಲ್ ಸ್ಪರ್ಧೆಯ ವೈಯಕ್ತಿಕ ವಿಭಾಗದಲ್ಲಿ 2023ರಲ್ಲಿ ಭೋಪಾಲ್ ನಲ್ಲಿ ನಡೆದಿದ್ದ ಐಎಸ್ಎಸ್ಎಫ್ ವಿಶ್ವಕಪ್ ಸರಣಿಯಲ್ಲಿ ಕಂಚಿಗೆ ತೃಪ್ತಿಪಟ್ಟಿದ್ದರು. 2023ರಲ್ಲಿ ಚಾಂಗ್ವಾನ್ನಲ್ಲಿ ನಡೆದಿದ್ದ ಏಶ್ಯನ್ ಶೂಟಿಂಗ್ ಚಾಂಪಿಯನ್ಶಿಪ್ ನಲ್ಲಿ ಮಹಿಳೆಯರ 25 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ 5ನೇ ಸ್ಥಾನ ಪಡೆದು ಪ್ಯಾರಿಸ್ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿದ್ದರು.
ಕಂಚು ಜಯಿಸಿ ಇತಿಹಾಸ ನಿರ್ಮಿಸಿರುವ ಭಾಕರ್ ಮುಂದಿನ ದಿನಗಳಲ್ಲಿ ಮಿಶ್ರ ಟೀಮ್ 10 ಮೀ. ಏರ್ ಪಿಸ್ತೂಲ್ ಹಾಗೂ 25 ಮೀ. ಸ್ಪೋರ್ಟ್ಸ್ ಪಿಸ್ತೂಲ್ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ.
ಟೋಕಿಯೊ ಒಲಿಂಪಿಕ್ಸ್ ನಂತರ ನಾನು ತುಂಬಾ ನಿರಾಶೆಗೊಂಡಿದ್ದೆ. ಅದರಿಂದ ಹೊರ ಬರಲು ನನಗೆ ಸಾಕಷ್ಟು ಸಮಯ ಹಿಡಿಯಿತು. ಇಂದು ನನಗೆ ಆಗುತ್ತಿರುವ ಖುಷಿಯನ್ನು ವಿವರಿಸಲು ಸಾಧ್ಯವಾಗುತ್ತಿಲ್ಲ. ನನ್ನಲ್ಲಿರುವ ಎಲ್ಲ ಶಕ್ತಿಯಿಂದ ಹೋರಾಡಿದ್ದೇನೆ. ಕಂಚು ಗೆದ್ದಿರುವುದಕ್ಕೆ ನಿಜವಾಗಿಯೂ ಕೃತಜ್ಞನಾಗಿದ್ದೇನೆ. ನಾನು ಭಗವದ್ಗೀತೆಯನ್ನು ಓದುತ್ತೇನೆ. ಯಾವಾಗಲೂ ನಾನು ಮಾಡಬೇಕಾದುದ್ದನ್ನು ಮಾಡಲು ಪ್ರಯತ್ನಿಸುವೆ ಎಂದು ಮನು ಬಾಕರ್ ಹೇಳಿದ್ದಾರೆ.