ಆಸ್ಟ್ರೇಲಿಯ ಪಿಎಂ ಇಲೆವೆನ್ ವಿರುದ್ಧ ಭಾರತ ತಂಡದ ಅಭ್ಯಾಸ ಪಂದ್ಯ : ಮೊದಲ ದಿನ ಮಳೆಯಾಟ
PC : PTI
ಮೆಲ್ಬರ್ನ್ : ಕ್ಯಾನ್ಬೆರಾದಲ್ಲಿ ನಿರಂತರ ಮಳೆ ಸುರಿದ ಪರಿಣಾಮ ಭಾರತ ಕ್ರಿಕೆಟ್ ತಂಡ ಹಾಗೂ ಆಸ್ಟ್ರೇಲಿಯ ಪ್ರಧಾನಮಂತ್ರಿ ಇಲೆವೆನ್ ನಡುವಿನ ದ್ವಿದಿನ ಅಭ್ಯಾಸ ಪಂದ್ಯದ ಮೊದಲ ದಿನದಾಟವು ರದ್ದಾಗಿದೆ.
ಅಡಿಲೇಡ್ನಲ್ಲಿ ಹಗಲು-ರಾತ್ರಿ ನಡೆಯಲಿರುವ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಮುಂಚಿತವಾಗಿ ಮನುಕಾ ಓವಲ್ನಲ್ಲಿ ದ್ವಿದಿನ ಅಭ್ಯಾಸ ಪಂದ್ಯವು ಶನಿವಾರ ಆರಂಭವಾಗಬೇಕಾಗಿತ್ತು.
ಭಾರತಕ್ಕೆ ಬ್ಯಾಟಿಂಗ್ ಹಾಗೂ ಬೌಲಿಂಗ್ ಅಭ್ಯಾಸ ನಡೆಸಲು ಅನುಕೂಲವಾಗಲು ಎರಡನೇ ದಿನದಾಟವಾದ ರವಿವಾರ ಹವಾಮಾನ ತಿಳಿಯಾದರೆ 50 ಓವರ್ಗಳ ಪಂದ್ಯ ನಡೆಯಬಹುದು. ರವಿವಾರ ಕೂಡ ಮಳೆಯಾಗುವ ಸಾಧ್ಯತೆ ಶೇ.70ರಷ್ಟಿದೆ ಎಂದು ಹವಾಮಾನ ಮುನ್ಸೂಚನೆ ಲಭಿಸಿದೆ.
ಪಂದ್ಯದ ಟಾಸ್ ಅನ್ನು ಇನ್ನಷ್ಟೇ ಚಿಮ್ಮಬೇಕಾಗಿದೆ.
ಪಂದ್ಯದ ಸನ್ನಿವೇಶಕ್ಕೆ ಹೊಂದಿಕೊಳ್ಳಲು ನಾಯಕ ರೋಹಿತ್ ಶರ್ಮಾಗೆ ಅಭ್ಯಾಸ ಪಂದ್ಯವು ಮೊದಲ ಅವಕಾಶವಾಗಿತ್ತು. ವೈಯಕ್ತಿಕ ಕಾರಣದಿಂದಾಗಿ ರೋಹಿತ್ ಅವರು ಮೊದಲ ಟೆಸ್ಟ್ ಪಂದ್ಯಕ್ಕೆ ಲಭ್ಯವಿರಲಿಲ್ಲ. ಪರ್ತ್ ಪಂದ್ಯ ನಡೆಯುತ್ತಿದ್ದಾಗಲೇ ರೋಹಿತ್ ತಂಡವನ್ನು ಸೇರಿಕೊಂಡಿದ್ದಾರೆ.
ಆಸ್ಟ್ರೇಲಿಯದ ವಾತಾವರಣದಲ್ಲಿ ಪಿಂಕ್ ಬಾಲ್ನಲ್ಲಿ ಮೊದಲ ಬಾರಿ ಬೌಲಿಂಗ್ ಮಾಡಲು ಭಾರತದ ವೇಗಿಗಳಾದ ಪ್ರಸಿದ್ಧ ಕೃಷ್ಣ ಹಾಗೂ ಆಕಾಶ್ ದೀಪ್ಗೆ ಈ ಪಂದ್ಯವು ಒಂದು ವೇದಿಕೆಯಾಗಿತ್ತು.
ಅಂಪೈರ್ಗಳು ಮೈದಾನದ ಸಿಬ್ಬಂದಿಯೊಂದಿಗೆ ಚರ್ಚಿಸಿದ ನಂತರ ಮೊದಲ ದಿನದಾಟವನ್ನು ರದ್ದುಪಡಿಸಲು ನಿರ್ಧರಿಸಿದರು.
ಭಾರತ ತಂಡವು ಪರ್ತ್ನಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು 295 ರನ್ಗಳಿಂದ ಗೆದ್ದುಕೊಂಡು ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಭಾರತ ತಂಡವು 5 ಟೆಸ್ಟ್ ಪಂದ್ಯಗಳ ಪೈಕಿ ನಾಲ್ಕರಲ್ಲಿ ಜಯ ಸಾಧಿಸಿದರೆ ಮುಂದಿನ ವರ್ಷದ ಜೂನ್ನಲ್ಲಿ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ನೇರ ಪ್ರವೇಶ ಪಡೆಯಲಿದೆ.