ಗಾಯಾಳು ಶ್ರೇಯಸ್ ಅಯ್ಯರ್ ಇಂಗ್ಲೆಂಡ್ ವಿರುದ್ಧ ಕೊನೆಯ 3 ಟೆಸ್ಟ್ ನಿಂದ ಹೊರಕ್ಕೆ: ವರದಿ

ಶ್ರೇಯಸ್ ಅಯ್ಯರ್ | Photo: PTI
ಹೊಸದಿಲ್ಲಿ : ಭಾರತೀಯ ಕ್ರಿಕೆಟ್ ತಂಡಕ್ಕೆ ಮತ್ತೊಂದು ಗಾಯಾಳು ಸಮಸ್ಯೆ ಕಾಡುತ್ತಿದೆ. ತಂಡದ ಪ್ರಮುಖ ಬ್ಯಾಟರ್ ಶ್ರೇಯಸ್ ಅಯ್ಯರ್ ಬೆನ್ನುನೋವಿನಿಂದ ಬಳಲುತ್ತಿದ್ದು ಇಂಗ್ಲೆಂಡ್ ವಿರುದ್ಧ ಸ್ವದೇಶದಲ್ಲಿ ನಡೆಯುತ್ತಿರುವ 5 ಪಂದ್ಯಗಳ ಸರಣಿಯ ಇನ್ನುಳಿದ ಮೂರು ಟೆಸ್ಟ್ ಪಂದ್ಯಗಳಿಂದ ತಂಡದಲ್ಲಿರುವ ಸಾಧ್ಯತೆ ಇಲ್ಲ ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಅಯ್ಯರ್ ಅವರ ಕ್ರಿಕೆಟ್ ಸಲಕರಣೆಗಳು ಮೂರನೇ ಟೆಸ್ಟ್ ಪಂದ್ಯನಡೆಯುವ ರಾಜ್ಕೋಟ್ ಬದಲಿಗೆ ಅವರ ತವರು ಪಟ್ಟಣ ಮುಂಬೈಗೆ ಸಾಗಿಸಲಾಗಿದೆ. ಇದು ಅವರು ಆಯ್ಕೆಗೆ ಲಭ್ಯವಿಲ್ಲದಿರುವುದನ್ನು ದೃಢಪಡಿಸುತ್ತದೆ ಎಂದು ವರದಿ ತಿಳಿಸಿದೆ.
ಟೆಸ್ಟ್ ಸರಣಿಯ ಕೊನೆಯ 3 ಪಂದ್ಯಗಳಿಗೆ ಬಿಸಿಸಿಐ ಆಯ್ಕೆ ಸಮಿತಿಯು ಶುಕ್ರವಾರ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ.
ಅಯ್ಯರ್ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆಯನ್ನು ಪಡೆಯಲಿದ್ದು, ಐಪಿಎಲ್ ಋತುವಿನ ವೇಳೆಗೆ ಚೇತರಿಸಿಕೊಳ್ಳುವ ಭರವಸೆಯಲ್ಲಿದ್ದಾರೆ. ಅಯ್ಯರ್ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ರನ್ ಗಳಿಸಲು ಪರದಾಟ ನಡೆಸಿದ್ದರು.
ಎರಡನೇ ಟೆಸ್ಟ್ ನಿಂದ ಹೊರಗುಳಿದಿದ್ದ ಕೆ.ಎಲ್.ರಾಹುಲ್ ಹಾಗೂ ರವೀಂದ್ರ ಜಡೇಜ ತಂಡಕ್ಕೆ ವಾಪಸಾಗುವ ನಿರೀಕ್ಷೆ ಇದೆ.
ಇಂಗ್ಲೆಂಡ್ ಸರಣಿಯ ಮೊದಲ ಪಂದ್ಯವನ್ನು ಜಯಿಸಿತ್ತು. ಎರಡನೇ ಪಂದ್ಯವನ್ನು ಜಯಿಸಿ ತಿರುಗೇಟು ನೀಡಿದ್ದ ಭಾರತ ಪ್ರಸಕ್ತ ಸರಣಿಯನ್ನು 1-1ರಿಂದ ಸಮಬಲಗೊಳಿಸಿದೆ.