ಸ್ಪಿನ್ನರ್ ಮಹೀಶ್ ತೀಕ್ಷಣಗೆ ಗಾಯದ ಸಮಸ್ಯೆ: ವಿಶ್ವಕಪ್ಗಿಂತ ಮೊದಲು ಶ್ರೀಲಂಕಾಗೆ ಮತ್ತೊಂದು ಹಿನ್ನಡೆ
Photo: twitter/toisports
ಹೊಸದಿಲ್ಲಿ: ಸ್ಪಿನ್ನರ್ ಮಹೀಶ್ ತೀಕ್ಷಣ ಬಲಮಂಡಿರಜ್ಜು ಗಾಯದಿಂದ ಬಳಲುತ್ತಿದ್ದು ಏಶ್ಯಕಪ್ ಫೈನಲ್ ಹಾಗೂ ವಿಶ್ವಕಪ್ಗೆ ತಯಾರಿ ನಡೆಸುತ್ತಿರುವ ಶ್ರೀಲಂಕಾ ಕ್ರಿಕೆಟ್ ತಂಡ ತೀವ್ರ ಹಿನ್ನಡೆ ಅನುಭವಿಸಿದೆ.
ಈಗಾಗಲೇ ಪ್ರಮುಖ ಆಟಗಾರರಾದ ದುಶ್ಮಂತ ಚಾಮೀರ ಹಾಗೂ ವನಿಂದು ಹಸರಂಗ ಅನುಪಸ್ಥಿತಿಯಲ್ಲಿ ಪರದಾಡುತ್ತಿರುವ ಶ್ರೀಲಂಕಾದ ಪಾಲಿಗೆ ಈ ಬೆಳವಣಿಗೆ ಮತ್ತೊಂದು ಹಿನ್ನಡೆಯಾಗಿ ಪರಿಣಮಿಸಿದೆ.
ಪಾಕಿಸ್ತಾನ ವಿರುದ್ಧ ಗುರುವಾರ ನಡೆದ ಏಶ್ಯಕಪ್ನ ಸೂಪರ್-4 ಪಂದ್ಯದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದಾಗ ತೀಕ್ಷಣ ಗಾಯದ ಸಮಸ್ಯೆಗೆ ಒಳಗಾಗಿದ್ದರು. ಶ್ರೀಲಂಕಾದ ಸ್ಪಿನ್ ದಾಳಿಯ ನೇತೃತ್ವ ವಹಿಸಿದ್ದ ಮಹೀಶ್ ತನ್ನ ಮೊದಲ 5 ಓವರ್ಗಳಲ್ಲಿ ಕೇವಲ 14 ರನ್ ನೀಡಿದ್ದರು. 35ನೇ ಓವರ್ನಲ್ಲಿ ಮೈದಾನಕ್ಕೆ ವಾಪಸಾದಾಗ ಅವರಿಗೆ ನೋವು ಕಾಣಿಸಿಕೊಂಡಿತ್ತು. 39ನೇ ಓವರ್ ಆರಂಭವಾಗುವಾಗ ಅವರು ಮೈದಾನವನ್ನು ತೊರೆದಿದ್ದರು.
ಶ್ರೀಲಂಕಾದ ಏಕದಿನ ಕ್ರಿಕೆಟ್ ತಯಾರಿಗೆ ಸ್ಪಿನ್ನರ್ ಮಹೀಶ್ ತೀಕ್ಷಣ ನಿರ್ಣಾಯಕವಾಗಿದ್ದು ಅವರು ಈ ವರ್ಷ 15 ಪಂದ್ಯಗಳಲ್ಲಿ 31 ವಿಕೆಟ್ಗಳನ್ನು ಕಬಳಿಸಿ ಗರಿಷ್ಠ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಮಹೀಶ್ ಅವರ ಗಾಯದ ಸಮಸ್ಯೆಯು ಮುಂಬರುವ ಪುರುಷರ ಕ್ರಿಕೆಟ್ ವಿಶ್ವಕಪ್ನಲ್ಲಿ ಅವರ ಲಭ್ಯತೆಯ ಕುರಿತು ಕಳವಳ ಮೂಡಿಸಿದೆ. ಟೂರ್ನಿಯಲ್ಲಿ ಭಾಗವಹಿಸುವ ಇತರ ತಂಡಗಳಂತೆಯೇ ಶ್ರೀಲಂಕಾ ತಂಡವು ಸೆಪ್ಟಂಬರ್ 28ಕ್ಕಿಂತ ಮೊದಲು ತನ್ನ ಅಂತಿಮ ಟೀಮ್ ಪಟ್ಟಿಯನ್ನು ಸಲ್ಲಿಸಬೇಕಾಗಿದೆ.