ಒತ್ತಡವನ್ನು ನಿಭಾಯಿಸಲು ಧೋನಿ, ಜೊಕೊವಿಕ್ರಿಂದ ಪ್ರೇರಣೆ ಪಡೆದಿದ್ದೇನೆ : ಕ್ಯಾಂಡಿಡೇಟ್ಸ್ ಚೆಸ್ ಪ್ರಶಸ್ತಿ ವಿಜೇತ ಗುಕೇಶ್
ಗುಕೇಶ್ , ಧೋನಿ, ಜೊಕೊವಿಕ್ | PC : PTI
ಚೆನ್ನೈ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ಮತ್ತು ಟೆನಿಸ್ ದೈತ್ಯ ನೊವಾಕ್ ಜೊಕೊವಿಕ್ ಅಗಾಧ ಒತ್ತಡವನ್ನು ನಿಭಾಯಿಸಿ ಆಡುವ ರೀತಿಯಿಂದ ನಾನು ಪ್ರಭಾವಿತನಾಗಿದ್ದೇನೆ ಎಂದು ಭಾರತದ ಹೊಸ ಚೆಸ್ ಪ್ರತಿಭೆ ಡಿ. ಗುಕೇಶ್ ಹೇಳಿದ್ದಾರೆ.
ಇತ್ತೀಚೆಗೆ ಟೊರಾಂಟೊದಲ್ಲಿ ನಡೆದ ಕ್ಯಾಂಡಿಡೇಟ್ಸ್ ಚೆಸ್ ಪಂದ್ಯಾವಳಿಯಲ್ಲಿ ತಮಿಳುನಾಡಿನ 17 ವರ್ಷದ ಗುಕೇಶ್ ಪ್ರಶಸ್ತಿ ಜಯಿಸಿದ್ದಾರೆ. ಅದೇ ವೇಳೆ, ಈ ಪ್ರಶಸ್ತಿ ಗೆದ್ದ ಅತ್ಯಂತ ಕಿರಿಯ ಆಟಗಾರನಾಗಿ ಅವರು ಇತಿಹಾಸ ಸೃಷ್ಟಿಸಿದ್ದಾರೆ. ಈ ಮೂಲಕ, 40 ವರ್ಷಗಳ ಹಿಂದೆ ಗ್ಯಾರಿ ಕ್ಯಾಸ್ಪರೊವ್ ನಿರ್ಮಿಸಿದ್ದ ದಾಖಲೆಯನ್ನು ಮುರಿದಿದ್ದಾರೆ.
ಕ್ಯಾಸ್ಪರೊವ್ 1984ರಲ್ಲಿ ಈ ಪ್ರಶಸ್ತಿಯನ್ನು ಗೆದ್ದಾಗ ಅವರಿಗೆ 22 ವರ್ಷ ವಯಸ್ಸಾಗಿತ್ತು.
“ಅಗಾಧ ಒತ್ತಡವನ್ನು ಧೋನಿ ಮತ್ತು ಟೆನಿಸ್ ದೈತ್ಯ ನೊವಾಕ್ ಜೊಕೊವಿಕ್ ಲೀಲಾಜಾಲವಾಗಿ ನಿಭಾಯಿಸುತ್ತಾರೆ ಮತ್ತು ತಮ್ಮ ಶ್ರೇಷ್ಠ ನಿರ್ವಹಣೆಯನ್ನು ನೀಡುತ್ತಾರೆ. ಹಾಗಾಗಿಯೇ ಅವರು ಯಾವಾಗಲೂ ಇತರರಿಗಿಂತ ಮುಂದಿರುತ್ತಾರೆ. ಅದಕ್ಕಾಗಿಯೇ ನಾನು ಅವರತ್ತ ಆಕರ್ಷಿತನಾಗಿದ್ದೇನೆ’’ ಎಂದು ಪಂದ್ಯಾವಳಿಯಿಂದ ಮರಳಿದ ಬಳಿಕ ಪಿಟಿಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತಾ ಗುಕೇಶ್ ಹೇಳಿದರು.
ಧೋನಿ ಭಾರತೀಯ ಕ್ರಿಕೆಟ್ ತಂಡದ ನಾಯಕರಾಗಿ ಎರಡು ವಿಶ್ವಕಪ್ಗಳನ್ನು ಗೆದ್ದಿದ್ದಾರೆ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಐದು ಬಾರಿ ಪ್ರಶಸ್ತಿಯತ್ತ ಮುನ್ನಡೆಸಿದ್ದಾರೆ.
ಸರ್ಬಿಯದ ಜೊಕೊವಿಕ್ ದಾಖಲೆಯ 24 ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ ಮತ್ತು ಇನ್ನಷ್ಟು ಪ್ರಶಸ್ತಿಗಳನ್ನು ಗೆಲ್ಲುವ ಲಕ್ಷಣಗಳನ್ನು ತೋರ್ಪಡಿಸಿದ್ದಾರೆ.
ಐದು ಬಾರಿಯ ವಿಶ್ವ ಚಾಂಪಿಯನ್, ನಾರ್ವೆಯ ಚೆಸ್ ಮಾಂತ್ರಿಕ ಮ್ಯಾಗ್ನಸ್ ಕಾರ್ಲ್ಸನ್, ಗುಕೇಶ್ರ ಮಾದರಿ ಆಟಗಾರರ ಪೈಕಿ ಒಬ್ಬರು. ಈ ಬಾರಿಯ ಕ್ಯಾಂಡಿಡೇಟ್ಸ್ ಚೆಸ್ ಪಂದ್ಯಾವಳಿಯಿಂದ ಅವರು ಹಿಂದೆ ಸರಿದಿದ್ದರು.
“ಕಾರ್ಲ್ಸನ್ರಿಂದ ಕಲಿಯಬಹುದಾದ ಹಲವು ಸಂಗತಿಗಳು ಇವೆ. ಚೆಸ್ ಮಾತ್ರವಲ್ಲ, ಮಾನಸಿಕ ಪ್ರವೃತ್ತಿ ಕೂಡ. ಜಗತ್ತಿನ ಯಾವುದೇ ಕ್ರೀಡೆಯಲ್ಲಿ ಶ್ರೇಷ್ಠ ಮಾನಸಿಕ ಪ್ರವೃತ್ತಿಗಳನ್ನು ಹೊಂದಿರುವ ಆಟಗಾರರ ಪೈಕಿ ಅವರೂ ಒಬ್ಬರು ಎಂದು ನಾನು ಹೇಳಲು ಬಯಸುತ್ತೇನೆ’’ ಎಂದರು. ತಮ್ಮ ಕ್ರೀಡಾ ಬದುಕಿನಲ್ಲಿ ಎಲ್ಲಾ ಚೆಸ್ ಆಟಗಾರರು ಒಂದಲ್ಲ ಒಂದು ಸಮಯದಲ್ಲಿ ಮಾನಸಿಕ ದೃಢತೆಯನ್ನು ಕಳೆದುಕೊಂಡಿರಬಹುದು. ಆದರೆ, ಅನುಭವದ ಮೂಲಕ ಅವರು ಒತ್ತಡವನ್ನು ನಿಭಾಯಿಸಲು ಕಲಿಯುತ್ತಾರೆ’’ ಎಂದು ಗುಕೇಶ್ ಅಭಿಪ್ರಾಯಪಟ್ಟರು.
ವಿಶ್ವನಾಥನ್ ಆನಂದ್ರ ಅಕಾಡೆಮಿಯಿಂದ ತುಂಬಾ ಪ್ರಯೋಜನ ಪಡೆದಿದ್ದೇನೆ
ನನ್ನ ಕ್ರೀಡಾ ಜೀವನವನ್ನು ರೂಪಿಸುವಲ್ಲಿ ಚೆಸ್ ದಂತಕತೆ ವಿಶ್ವನಾಥನ್ ಆನಂದ್ ದೊಡ್ಡ ಪಾತ್ರ ವಹಿಸಿದ್ದಾರೆ ಎಂದು ಭಾರತೀಯ ಚೆಸ್ ಪ್ರತಿಭೆ ಡಿ. ಗುಕೇಶ್ ಗುರುವಾರ ಹೇಳಿದ್ದಾರೆ.
“ವಿಶಿ ಸರ್ ನನಗೆ ದೊಡ್ಡ ಪ್ರೇರಣೆಯಾಗಿದ್ದಾರೆ. ಅವರ ಅಕಾಡೆಮಿಯಿಂದ ನಾನು ತುಂಬಾ ಪ್ರಯೋಜನವನ್ನು ಪಡೆದಿದ್ದೇನೆ. ನಾನು ಅವರಿಗೆ ಆಭಾರಿಯಾಗಿದ್ದೇನೆ. ಅವರಲ್ಲದಿದ್ದರೆ ನಾನು ಈಗ ಏನಾಗಿದ್ದೇನೋ ಅದರ ಸಮೀಪವೂ ಹೋಗಲು ಸಾಧ್ಯವಾಗುತ್ತಿರಲಿಲ್ಲ’’ ಎಂದು ಚೆನ್ನೈನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗುಕೇಶ್ ಹೇಳಿದರು.
2020ರಲ್ಲಿ ಅಸ್ತಿತ್ವಕ್ಕೆ ಬಂದ ವೆಸ್ಟ್ ಬ್ರಿಜ್-ಆನಂದ್ ಚೆಸ್ ಅಕಾಡೆಮಿಯಲ್ಲಿ ಗುಕೇಶ್ ತರಬೇತಿ ಪಡೆದಿದ್ದಾರೆ. ಗುಕೇಶ್ಗಿಂತ ಮೊದಲು, ಕ್ಯಾಂಡಿಡೇಟ್ಸ್ ಚೆಸ್ ಪ್ರಶಸ್ತಿಯನ್ನು ಗೆದ್ದ ಏಕೈಕ ಭಾರತೀಯ ಆನಂದ್ ಆಗಿದ್ದಾರೆ. ಅವರು 2014ರಲಿ ಈ ಪ್ರಶಸ್ತಿ ಗೆದ್ದಿದ್ದರು.