ಐಪಿಎಲ್ ನಲ್ಲಿ ಮಿಂಚಿದ ಭಾರತದ ಅಗ್ರ ಐವರು ಯುವ ಕ್ರಿಕೆಟಿಗರು
Photo : iplt20.com
ಕೋಲ್ಕತಾ: ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ರವಿವಾರ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು 8 ವಿಕೆಟ್ ಗಳ ಅಂತರದಿಂದ ಮಣಿಸಿದ ಶ್ರೇಯಸ್ ಅಯ್ಯರ್ ನಾಯಕತ್ವದ ಕೋಲ್ಕತಾ ನೈಟ್ ರೈಡರ್ಸ್ ತಂಡ 17ನೇ ಆವೃತ್ತಿಯ ಐಪಿಎಲ್ನಲ್ಲಿ ಚಾಂಪಿಯನ್ ಕಿರೀಟವನ್ನು ಧರಿಸಿದೆ.
2024ರ ಆವೃತ್ತಿಯ ಐಪಿಎಲ್ ಹಲವು ಶ್ರೇಷ್ಠ ಪ್ರದರ್ಶನಗಳಿಗೆ ಸಾಕ್ಷಿಯಾಗಿದೆ. ಭಾರತೀಯ ಯುವ ಆಟಗಾರರು ಮಹತ್ವದ ವೇದಿಕೆಯಲ್ಲಿ ತಮ್ಮ ಪ್ರತಿಭೆಯನ್ನು ಹೊರಹಾಕಿದ್ದಾರೆ.
ಈ ಋತುವಿನ ಐಪಿಎಲ್ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಭಾರತದ ಅಗ್ರ ಐವರು ಯುವ ಆಟಗಾರರ ಪಟ್ಟಿ ಇಂತಿದೆ...
ರಿಯಾನ್ ಪರಾಗ್ (ರಾಜಸ್ಥಾನ ರಾಯಲ್ಸ್):
2024ರ ಐಪಿಎಲ್ ಋತು ರಿಯಾನ್ ಪರಾಗ್ ವೃತ್ತಿಜೀವನಕ್ಕೆ ಪುನಶ್ಚೇತನ ಒದಗಿಸಿದೆ. ಪರಾಗ್ ಈ ಬಾರಿ ರಾಜಸ್ಥಾನ ರಾಯಲ್ಸ್ ಪರ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ರಾಜಸ್ಥಾನ ತಂಡದ ಮಧ್ಯಮ ಸರದಿಯಲ್ಲಿ ಪ್ರಮುಖ ಆಟಗಾರನಾಗಿದ್ದ ಪರಾಗ್ 14 ಇನಿಂಗ್ಸ್ ಗಳಲ್ಲಿ ಒಟ್ಟು 573 ರನ್ ಗಳಿಸಿದ್ದು, ಈ ಋತುವಿನಲ್ಲಿ ತನ್ನ ತಂಡದ ಪರ ಗರಿಷ್ಠ ರನ್ ಸ್ಕೋರರ್ ಎನಿಸಿಕೊಂಡಿದ್ದರು.
22ರ ಹರೆಯದ ಪರಾಗ್ ಆರೆಂಜ್ ಕ್ಯಾಪ್ ಲಿಸ್ಟ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ವಿರಾಟ್ ಕೊಹ್ಲಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಋತುರಾಜ್ ಗಾಯಕ್ವಾಡ್ ನಂತರ 3ನೇ ಸ್ಥಾನ ಪಡೆದಿದ್ದರು.
ಈ ವರ್ಷ 50ಕ್ಕೂ ಅಧಿಕ ಸರಾಸರಿಯಲ್ಲಿ ಆಡಿದ್ದ ಪರಾಗ್ 33 ಸಿಕ್ಸರ್ ಗಳನ್ನು ಸಿಡಿಸಿದ್ದರು. ಈ ವರ್ಷದ ಐಪಿಎಲ್ ನಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. ಈ ವರ್ಷ 4 ಅರ್ಧಶತಕಗಳನ್ನು ಗಳಿಸಿದ್ದ ಪರಾಗ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗರಿಷ್ಠ (ಔಟಾಗದೆ 84) ರನ್ ಗಳಿಸಿದ್ದರು.
ಬಿ.ಸಾಯಿ ಸುದರ್ಶನ್ (ಗುಜರಾತ್ ಟೈಟಾನ್ಸ್):
ಪ್ರಸಕ್ತ ಐಪಿಎಲ್ ನಲ್ಲಿ ಬಿ.ಸಾಯಿ ಸುದರ್ಶನ್ ಗುಜರಾತ್ ಟೈಟಾನ್ಸ್ ಪರ ಉತ್ತಮ ಪ್ರದರ್ಶನ ನೀಡಿದ್ದಾರೆ. 2022ರಲ್ಲಿ ಐಪಿಎಲ್ ಗೆ ಸೇರ್ಪಡೆಯಾದ ನಂತರ ಮೊದಲೆರಡು ಋತುವಿನಲ್ಲಿ ಫೈನಲ್ ಗೆ ಲಗ್ಗೆ ಇಟ್ಟಿದ್ದ ಗುಜರಾತ್ ತಂಡ ಈ ಬಾರಿ ಮುಂಬೈ ಇಂಡಿಯನ್ಸ್ ನಂತರ ಪ್ಲೇ ಆಫ್ ಸ್ಪರ್ಧೆಯಿಂದ ಹೊರಬಿದ್ದ ಎರಡನೇ ತಂಡ ಎನಿಸಿಕೊಂಡಿತ್ತು.
ಸುದರ್ಶನ್ ಐಪಿಎಲ್-2024ರ ಗರಿಷ್ಠ ರನ್ ಸ್ಕೋರರ್ಗಳ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ. 22ರ ಹರೆಯದ ತಮಿಳುನಾಡಿನ ಬ್ಯಾಟರ್ ಕೇವಲ 12 ಪಂದ್ಯಗಳಲ್ಲಿ 47.90ರ ಸರಾಸರಿಯಲ್ಲಿ 527 ರನ್ ಗಳಿಸಿದ್ದರು. ಇದರಲ್ಲಿ ಎರಡು ಅರ್ಧಶತಕ ಹಾಗೂ ಒಂದು ಶತಕವಿದೆ.
ಈ ಋತುವಿನಲ್ಲಿ ಹೆಚ್ಚಿನ ಬಾರಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ಸುದರ್ಶನ್ ಖಾಯಂ ಆರಂಭಿಕ ಬ್ಯಾಟರ್ ವೃದ್ದಿಮಾನ್ ಸಹಾ ಬದಲಿಗೆ ಇನಿಂಗ್ಸ್ ಆರಂಭಿಸಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದದ ಪಂದ್ಯದಲ್ಲಿ ನಾಯಕ ಶುಭಮನ್ ಗಿಲ್ ಜೊತೆಗೆ 210 ರನ್ ಜೊತೆಯಾಟ ನಡೆಸಿದ್ದರು. ಇದು ಐಪಿಎಲ್ ಇತಿಹಾಸದಲ್ಲಿ ಮೊದಲ ವಿಕೆಟ್ನಲ್ಲಿ ದಾಖಲಾದ ಜಂಟಿ ಗರಿಷ್ಠ ಜೊತೆಯಾಟವಾಗಿದೆ.
ನಿತಿಶ್ ಕುಮಾರ್ ರೆಡ್ಡಿ (ಸನ್ರೈಸರ್ಸ್ ಹೈದರಾಬಾದ್):
ಈ ವರ್ಷದ ಐಪಿಎಲ್ ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿ ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಹೆನ್ರಿಕ್ ಕ್ಲಾಸೆನ್, ಹಾಗೂ ನಿತಿಶ್ ಕುಮಾರ್ ರೆಡ್ಡಿ ಅವರಂತಹ ಸ್ಟಾರ್ ಆಟಗಾರರ ದಂಡೇ ಇತ್ತು. 11 ಇನಿಂಗ್ಸ್ಗಳಲ್ಲಿ ಬ್ಯಾಟ್ ಮಾಡಿದ್ದ ರೆಡ್ಡಿ ಪ್ರತಿ ಇನಿಂಗ್ಸ್ನಲ್ಲಿ ಕನಿಷ್ಠ ಎರಡು ಸಿಕ್ಸರ್ಗಳ ಸಹಿತ ಒಟ್ಟು 21 ಸಿಕ್ಸರ್ಗಳನ್ನು ಸಿಡಿಸಿದ್ದರು. 140ಕ್ಕೂ ಅಧಿಕ ಸ್ಟ್ರೈಕ್ರೇಟ್ನಲ್ಲಿ 33.66ರ ಸರಾಸರಿಯಲ್ಲಿ ಒಟ್ಟು 303 ರನ್ ಗಳಿಸಿದ್ದರು.
ಈ ವರ್ಷ ರೆಡ್ಡಿ ಬೌಲಿಂಗ್ನಲ್ಲಿ ಹೆಚ್ಚು ಮಿಂಚಲಿಲ್ಲ. 7 ಇನಿಂಗ್ಸ್ಗಳಲ್ಲಿ ಕೇವಲ ಮೂರು ವಿಕೆಟ್ಗಳನ್ನು ಪಡೆದಿದ್ದರು. ಬ್ಯಾಟಿಂಗ್ ಹಾಗೂ ಬೌಲಿಂಗ್ ಅಲ್ಲದೆ , ಫೀಲ್ಡಿಂಗ್ನಲ್ಲೂ ತನ್ನ ಛಾಪು ಮೂಡಿಸಿದ್ದ ರೆಡ್ಡಿ ವರ್ಷದ ಉದಯೋನ್ಮುಖ ಪ್ರಶಸ್ತಿಗೆ ಆಯ್ಕೆಯಾದರು.
ಅಭಿಷೇಕ್ ಶರ್ಮಾ (ಸನ್ರೈಸರ್ಸ್ ಹೈದರಾಬಾದ್)
ಐಪಿಎಲ್-2024ರ ಅಭಿಯಾನದಲ್ಲಿ ಎಡಗೈ ಬ್ಯಾಟರ್ ಗಳ ಪೈಕಿ ಅಭಿಷೇಕ್ ಶರ್ಮಾ ಅತ್ಯುತ್ತಮ ಪ್ರದರ್ಶನದಿಂದ ಎಲ್ಲರ ಚಿತ್ತ ತನ್ನತ್ತ ಸೆಳೆದಿದ್ದಾರೆ. 23ರ ಹರೆಯದ ಪಂಜಾಬ್ ಬ್ಯಾಟರ್ ಶರ್ಮಾ ಸನ್ರೈಸರ್ಸ್ ಹೈದರಾಬಾದ್ ಪರ ಕೇವಲ 16 ಎಸೆತಗಳಲ್ಲಿ ವೇಗದ ಅರ್ಧಶತಕ ಸಿಡಿಸಿದ್ದರು. ಮುಂಬೈ ಇಂಡಿಯನ್ಸ್ ವಿರುದ್ಧ 16 ಎಸೆತಗಳಲ್ಲಿ 50 ರನ್ ಪೂರೈಸಿದ್ದ ಸಹ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಅವರ ದಾಖಲೆಯನ್ನು ಸರಿಗಟ್ಟಿದ್ದರು.
ಅಭಿಷೇಕ್ ಈ ವರ್ಷದ ಐಪಿಎಲ್ನಲ್ಲಿ ಗರಿಷ್ಠ ಸಿಕ್ಸರ್(42)ಸಿಡಿಸಿದ ಸಾಧನೆ ಮಾಡಿದ್ದಾರೆ. 100ಕ್ಕೂ ಅಧಿಕ ಎಸೆತಗಳನ್ನು ಎದುರಿಸಿದ ಬ್ಯಾಟರ್ ಪೈಕಿ ಜೇಕ್ ಫ್ರೆಸರ್ ಮೆಕ್ಬರ್ಕ್ ಹಾಗೂ ಎಂ.ಎಸ್. ಧೋನಿ ನಂತರ ಮೂರನೇ ಶ್ರೇಷ್ಠ ಸ್ಟ್ರೈಕ್ರೇಟ್(204.21)ನಲ್ಲಿ ಬ್ಯಾಟ್ ಮಾಡಿದ್ದಾರೆ.
ಅಭಿಷೇಕ್ 16 ಇನಿಂಗ್ಸ್ ಗಳಲ್ಲಿ ಮೂರು ಅರ್ಧಶತಕಗಳ ಸಹಿತ ಒಟ್ಟು 484 ರನ್ ಗಳಿಸಿದ್ದರು. ಲಕ್ನೊ ಸೂಪರ್ ಜಯಂಟ್ಸ್ ಪರ ಗರಿಷ್ಠ ವೈಯಕ್ತಿಕ ಸ್ಕೋರ್(ಔಟಾಗದೆ 75)ಗಳಿಸಿದ್ದರು.
ಹರ್ಷಿತ್ ರಾಣಾ (ಕೆಕೆಆರ್)
ತನ್ನ ಫ್ಲೈಯಿಂಗ್ ಕಿಸ್ ಸಂಭ್ರಮಾಚರಣೆಗೆ ಟೀಕೆಯನ್ನು ಎದುರಿಸಿದ್ದಲ್ಲದೆ ಪದೇ ಪದೇ ಐಪಿಎಲ್ ನೀತಿ ಸಂಹಿತೆ ಉಲ್ಲಂಘನೆಗೆ ಒಂದು ಪಂದ್ಯದಿಂದ ನಿಷೇಧ ಹಾಗೂ ತನ್ನ ಪಂದ್ಯಶುಲ್ಕದಲ್ಲಿ ಶೇ.100ರಷ್ಟು ದಂಡ ಪಾವತಿಸಿದ್ದ ಹರ್ಷಿತ್ ರಾಣಾ ಆ ನಂತರ ಬೌಲಿಂಗ್ನಲ್ಲಿ ಅಮೋಘ ಪ್ರದರ್ಶನ ನೀಡಿ ಎಲ್ಲರ ಬಾಯಿ ಮುಚ್ಚಿಸಿದ್ದಾರೆ.
ಹರ್ಷಿತ್ ಕೇವಲ 11 ಇನಿಂಗ್ಸ್ಗಳಲ್ಲಿ ಒಟ್ಟು 19 ವಿಕೆಟ್ಗಳನ್ನು ಕಬಳಿಸಿದ್ದಾರೆ. ತನ್ನ ಸಹ ಆಟಗಾರ ಆಂಡ್ರೆ ರಸೆಲ್ ಜೊತೆ ಗರಿಷ್ಠ ವಿಕೆಟ್ ಪಡೆದವರ ಪಟ್ಟಿಯಲ್ಲಿ 4ನೇ ಸ್ಥಾನ ಹಂಚಿಕೊಂಡಿದ್ದಾರೆ.
ಚೆನ್ನೈನಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ 4 ಓವರ್ಗಳಲ್ಲಿ 1 ಮೇಡನ್ ಸಹಿತ 24 ರನ್ಗೆ 2 ವಿಕೆಟ್ ಪಡೆದಿದ್ದ ಹರ್ಷಿತ್ ಕೆಕೆಆರ್ ತಂಡ ಎಸ್ಆರ್ಎಚ್ ತಂಡವನ್ನು ಕೇವಲ 113 ರನ್ಗೆ ಆಲೌಟ್ ಮಾಡಲು ಮುಖ್ಯ ಪಾತ್ರವಹಿಸಿದ್ದರು.