ಐಪಿಎಲ್ 2024 | ನಾಳೆ ಆರ್ ಸಿ ಬಿ Vs ರಾಜಸ್ಥಾನ ರಾಯಲ್ಸ್ ; 2ನೇ ಪ್ಲೇ ಆಫ್ ಪಂದ್ಯ
PC : X \ @RCBTweets
ಅಹ್ಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಎರಡನೇ ಪ್ಲೇಆಫ್ ಪಂದ್ಯದಲ್ಲಿ ಬುಧವಾರ ಪುಟಿದೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿ ಬಿ ) ತಂಡವು ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ.
ಆರ್ ಸಿ ಬಿ ಯು ಈ ಪಂದ್ಯಾವಳಿಯಲ್ಲಿ ಒಂದು ಹಂತದಲ್ಲಿ ಹೊರಬೀಳುವುದರಲ್ಲಿತ್ತು. ಅದು ಈ ಋತುವಿನಲ್ಲಿ ತನ್ನ ಮೊದಲ ಎಂಟು ಪಂದ್ಯಗಳ ಪೈಕಿ ಏಳು ಪಂದ್ಯಗಳನ್ನು ಸೋತಿತ್ತು. ಆದರೆ, ಅಲ್ಲಿಂದ ಪುಟಿದೆದ್ದ ಫಫ್ ಡು ಪ್ಲೆಸಿಸ್ ನೇತೃತ್ವದ ತಂಡವು ನಿರಂತರವಾಗಿ ಆರು ಪಂದ್ಯಗಳನ್ನು ಜಯಿಸಿ ಪ್ಲೇ ಆಫ್ ತಲುಪಿದೆ. ರವಿವಾರ ವಾಸ್ತವಿಕ ಕ್ವಾರ್ಟರ್ ಫೈನಲ್ ನಂತೆ ಕಂಡುಬಂದ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಆರ್ ಸಿ ಬಿ ಯು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡವನ್ನು ಸೋಲಿಸಿ ಪ್ಲೇ ಆಫ್ ಗೇರಿತು.
ನಿರಂತರವಾಗಿ ಗೆಲ್ಲುತ್ತಾ ಬಂದಿದ್ದ ರಾಜಸ್ಥಾನ ರಾಯಲ್ಸ್ ಕೊನೆಯಲ್ಲಿ ನಿರಂತರ ಸೋಲು ಅನುಭವಿಸುತ್ತಾ ಬಂದಿತ್ತು. ಒಂದು ಹಂತದಲ್ಲಿ ಅದು ಲೀಗ್ನಲ್ಲಿ ಅಗ್ರ ಸ್ಥಾನಕ್ಕೇರುವ ಭರವಸೆಯನ್ನೂ ಹುಟ್ಟುಹಾಕಿತ್ತು. ಬಳಿಕ ಅದು ನಿರಂತರವಾಗಿ ನಾಲ್ಕು ಪಂದ್ಯಗಳನ್ನು ಸೋತಿತು ಮತ್ತು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಅದರ ಕೊನೆಯ ಪಂದ್ಯ ಮಳೆಯಿಂದಾಗಿ ರದ್ದಾಯಿತು. ಹಾಗಾಗಿ, ಸಂಜು ಸ್ಯಾಮ್ಸನ್ ನೇತೃತ್ವದ ತಂಡವು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆಯಿತು.
ರಾಜಸ್ಥಾನ ರಾಯಲ್ಸ್ ತಂಡವು ನಿರಂತರ ನಾಲ್ಕು ಸೋಲುಗಳು ಮತ್ತು ರದ್ದುಗೊಂಡ ಪಂದ್ಯದ ಬಳಿಕ ಪ್ಲೇ ಆಫ್ ನಲ್ಲಿ ಆಡುತ್ತಿದ್ದರೆ, ಆರ್ ಸಿ ಬಿ ಯು ನಿರಂತರ ಆರು ಪಂದ್ಯಗಳನ್ನು ಗೆದ್ದು ಬೀಗುತ್ತಿದೆ. ಖಂಡಿತವಾಗಿಯೂ ಇದು ಆರ್ ಸಿ ಬಿ ಗೆ ಪೂರಕವಾಗಿರುವ ಅಂಶವಾಗಿದೆ.
2008ರ ಪ್ರಶಸ್ತಿ ವಿಜೇತ ತಂಡವಾಗಿರುವ ರಾಜಸ್ಥಾನ ರಾಯಲ್ಸ್ ಎರಡು ವಾರಗಳ ಹಿಂದೆ ಪ್ರಶಸ್ತಿ ಗೆಲ್ಲುವ ಫೇವರಿಟ್ ಆಗಿದ್ದರೆ, ಈಗ ‘ಅಂಡರ್ಡಾಗ್’ (ಅವಕಾಶ ಸಿಕ್ಕಿದರೆ ಪ್ರಶಸ್ತಿ ಗೆಲ್ಲಲೂ ಬಹುದು) ಸ್ಥಿತಿಗೆ ತಲುಪಿದೆ.
ಇದೇ ಋತುವಿನಲ್ಲಿ, ತನ್ನ ಉತ್ತುಂಗದ ಅವಧಿಯಲ್ಲಿ ರಾಜಸ್ಥಾನ ರಾಯಲ್ಸ್ ಅಜೇಯ ತಂಡವೆಂಬಂತೆ ಅನಿಸಿತ್ತು. ಆದರೆ, ಅದರ ಕೊನೆಯ ನಾಲ್ಕು ಪಂದ್ಯಗಳು ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿರುವ ದೌರ್ಬಲ್ಯಗಳನ್ನು ಬಿಚ್ಚಿಟ್ಟಿವೆ.
ಜೋಸ್ ಬಟ್ಲರ್ ನಿರ್ಗಮನವು ತಂಡದಿಂದ ಸ್ಫೋಟಕತೆಯನ್ನು ಸಾಕಷ್ಟು ಪ್ರಮಾಣದಲ್ಲಿ ಕಸಿದುಕೊಂಡಿದೆ. ಈಗ ತಂಡವು ಯಶಸ್ವಿ ಜೈಸ್ವಾಲ್, ನಾಯಕ ಸ್ಯಾಮ್ಸನ್ ಮತ್ತು ರಿಯಾನ್ ಪರಾಗ್ರ ಬ್ಯಾಟಿಂಗನ್ನು ಅವಲಂಬಿಸಿದೆ.
ರಾಜಸ್ಥಾನ ರಾಯಲ್ಸ್ಗೆ ಸ್ಯಾಮ್ಸನ್ ಮತ್ತು ಪರಾಗ್ ಮತ್ತೊಮ್ಮೆ ಬೆನ್ನೆಲುಬಾಗುವ ನಿರೀಕ್ಷೆಯಿದೆ. ಆರಂಭಿಕನಾಗಿ ಇಂಗ್ಲೆಂಡ್ನ ಟಾಮ್ ಕೊಹ್ಲರ್ ಕ್ಯಾಡ್ಮೋರ್ ಜೈಸ್ವಾಲ್ಗೆ ಜೊತೆ ನೀಡುವ ನಿರೀಕ್ಷೆಯಿದೆ. ಆದರೆ, ಈ ಆರಂಭಿಕ ಭಾಗೀದಾರಿಕೆ ಎಷ್ಟು ಪರಿಣಾಮಕಾರಿ ಎನ್ನುವುದನ್ನು ಕಾದುನೋಡಬೇಕಾಗಿದೆ.
ಈ ಪಂದ್ಯಕ್ಕೆ ಶಿಮ್ರಾನ್ ಹೆಟ್ಮಯರ್ ಲಭ್ಯರಾಗುವ ನಿರೀಕ್ಷೆಯಿದೆ. ಹಾಗಾಗಿ, ಕೆಳ ಕ್ರಮಾಂಕದಲ್ಲಿ ಅವರು ತಂಡಕ್ಕೆ ಆಸರೆಯಾಗಬಲ್ಲರು.
ರಾಜಸ್ಥಾನ ರಾಯಲ್ಸ್ನ ಬೌಲರ್ ಗಳು ತಂಡಕ್ಕೆ ಉಪಯುಕ್ತ ದೇಣಿಗೆ ನೀಡಬಲ್ಲರು ಎನ್ನಲಾಗಿದೆ. ಯಾಕೆಂದರೆ ಅಹ್ಮದಾಬಾದ್ನ ನರೇಂದ್ರ ಮೋದಿ ಮೈದಾನವು ಇತರ ಮೈದಾನಗಳಂತೆ ಬ್ಯಾಟಿಂಗ್ ಸ್ವರ್ಗವೇನೂ ಅಲ್ಲ. ಇಲ್ಲಿ ಈ ಋತುವಿನಲ್ಲಿ ಈವರೆಗೆ ಆಡಲಾಗಿರುವ 12 ಇನಿಂಗ್ಸ್ಗಳಲ್ಲಿ ಎರಡು ಬಾರಿ ಮಾತ್ರ ತಂಡವೊಂದರ ಮೊತ್ತವು 200ರ ಗಡಿಯನ್ನು ದಾಟಿದೆ.
ಬೆಂಗಳೂರು ತಂಡದಲ್ಲಿ ವಿರಾಟ್ ಕೊಹ್ಲಿ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ಅವರು ಈ ಐಪಿಎಲ್ನ ಈ ಋತುವಿನಲ್ಲಿ ಗರಿಷ್ಠ ರನ್ ಗಳಿಕೆದಾರ ಆಗಿದ್ದಾರೆ. ಅವರು 14 ಪಂದ್ಯಗಳಿಂದ 708 ರನ್ಗಳನ್ನು ಕಲೆ ಹಾಕಿದ್ದಾರೆ.
ಆರಂಭಿಕ ವೈಫಲ್ಯಗಳ ಬಳಿಕ, ನಾಯಕ ಫಫ್ ಡು ಪ್ಲೆಸಿಸ್ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಈ ಋತುವಿನಲ್ಲಿ ಐದು ಅರ್ಧ ಶತಕಗಳನ್ನು ದಾಖಲಿಸಿರುವ ರಜತ್ ಪಾಟಿದಾರ್ ಕೂಡ ಅಗ್ರ ಕ್ರಮಾಂಕದಲ್ಲಿ ಮಿಂಚಿದ್ದಾರೆ.
ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಕೆಳ ಕ್ರಮಾಂಕದಲ್ಲಿ 195ಕ್ಕೂ ಅಧಿಕ ಸ್ಟ್ರೈಕ್ ರೇಟ್ನೊಂದಿಗೆ ಸ್ಫೋಟಕ ಬ್ಯಾಟಿಂಗನ್ನು ಮುಂದುವರಿಸಿದ್ದಾರೆ.
ತಂಡಗಳು
ರಾಜಸ್ಥಾನ ರಾಯಲ್ಸ್: ಸಂಜು ಸ್ಯಾಮ್ಸನ್ (ನಾಯಕ-ವಿಕೆಟ್ ಕೀಪರ್), ಆಬಿದ್ ಮುಶ್ತಾಕ್, ಆವೇಶ್ ಖಾನ್, ಧ್ರುವ ಜೂರೆಲ್, ಡೋನೊವನ್ ಫೆರೇರ, ಕುಲದೀಪ್ ಸೇನ್, ಕುನಾಲ್ ಸಿಂಗ್ ರಾಥೋಡ್, ನ್ಯಾಂಡ್ರಿ ಬರ್ಗರ್, ನವದೀಪ್ ಸೈನಿ, ರವಿಚಂದ್ರನ್ ಅಶ್ವಿನ್, ರಿಯಾನ್ ಪರಾಗ್, ಸಂದೀಪ್ ಶರ್ಮ, ಶಿಮ್ರಾನ್ ಹೆಟ್ಮಯರ್, ಶುಭಮ್ ದುಬೆ, ರೊವ್ಮನ್ ಪವೆಲ್, ಟಾಮ್ ಕೊಹ್ಲರ್-ಕ್ಯಾಡ್ಮೋರ್, ಟ್ರೆಂಟ್ ಬೋಲ್ಟ್, ಯಶಸ್ವಿ ಜೈಸ್ವಾಲ್, ಯುಝ್ವೇಂದ್ರ ಚಾಹಲ್, ತನುಶ್ ಕೋಟ್ಯಾನ್.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಸುಯಸ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊಮ್ರೊರ್, ಕರಣ್ ಶರ್ಮ, ಮನೋಜ್ ಭಂಡಾಗೆ, ಮಯಾಂಕ್ ಡಗರ್, ವಿಜಯಕುಮಾರ್ ವೈಶಾಖ್, ಆಕಾಶ್ ದೀಪ್, ಮುಹಮ್ಮದ್ ಸಿರಾಜ್, ರೀಸ್ ಟಾಪ್ಲೆ, ಹಿಮಾಂಶು ಶರ್ಮ, ರಾಜನ್ ಕುಮಾರ್, ಕ್ಯಾಮರಾನ್ ಗ್ರೀನ್, ಅಲ್ಝಾರಿ ಜೋಸೆಫ್, ಯಶ್ ದಯಾಳ್ ಟಾಮ್ ಕರನ್, ಲಾಕೀ ಫಗ್ರ್ಯೂಸನ್, ಸ್ಪಪ್ನಿಲ್ ಸಿಂಗ್ ಮತ್ತು ಸೌರವ್ ಚೌಹಾಣ್.
ಪಂದ್ಯ ಆರಂಭ: ಸಂಜೆ 7:30