ಐಪಿಎಲ್-2024: ಆರೆಂಜ್ ಕ್ಯಾಪ್ ಉಳಿಸಿಕೊಂಡ ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ| PC :PTI
ಹೊಸದಿಲ್ಲಿ : ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಈ ತನಕ 7 ಪಂದ್ಯಗಳನ್ನು ಆಡಿರುವ ವಿರಾಟ್ ಕೊಹ್ಲಿ ಒಟ್ಟು 361 ರನ್ ಗಳಿಸಿದ್ದಾರೆ. ಸೋಮವಾರ ರಾತ್ರಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಸೋತ ಪಂದ್ಯದಲ್ಲಿ 20 ಎಸೆತಗಳಲ್ಲಿ 42 ರನ್ ಗಳಿಸಿದ್ದ ಕೊಹ್ಲಿ ಗರಿಷ್ಠ ರನ್ ಸ್ಕೋರರ್ಗಳ ಪಟ್ಟಿಯಲ್ಲಿ ನಂ.1 ಸ್ಥಾನ ಕಾಯ್ದುಕೊಂಡು ಆರೆಂಜ್ ಕ್ಯಾಪ್ ತನ್ನಲ್ಲೇ ಉಳಿಸಿಕೊಂಡಿದ್ದಾರೆ.
ರಾಜಸ್ಥಾನ ರಾಯಲ್ಸ್ ತಂಡದ ರಿಯಾನ್ ಪರಾಗ್ ಒಟ್ಟು 318 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದು, ಕೊಹ್ಲಿಗೆ ಪೈಪೋಟಿ ನೀಡುತ್ತಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧ ಗುರುವಾರ 25 ಎಸೆತಗಳಲ್ಲಿ 36 ರನ್ ಗಳಿಸಿದ್ದ ರೋಹಿತ್ ಶರ್ಮಾ 297 ರನ್ ಗಳಿಸಿ ಮೂರನೇ ಸ್ಥಾನಕ್ಕೇರಿದ್ದಾರೆ. ರಾಜಸ್ಥಾನ ವಿರುದ್ಧ ಶತಕ ಗಳಿಸಿದ್ದ ಕೆಕೆಆರ್ ಬ್ಯಾಟರ್ ಸುನೀಲ್ ನರೇನ್ 6 ಪಂದ್ಯಗಳಲ್ಲಿ 276 ರನ್ ಕಲೆ ಹಾಕಿ 4ನೇ ಸ್ಥಾನದಲ್ಲಿದ್ದಾರೆ. ರಾಜಸ್ಥಾನ ತಂಡದ ನಾಯಕ ಸಂಜು ಸ್ಯಾಮ್ಸನ್ 276 ರನ್ ಗಳಿಸಿ ಅಗ್ರ-5ರಲ್ಲಿದ್ದಾರೆ.
ಗುಜರಾತ್ ಟೈಟಾನ್ಸ್ ನಾಯಕ ಶುಭಮನ್ ಗಿಲ್(263 ರನ್), ಸನ್ರೈಸರ್ಸ್ನ ಹೆನ್ರಿಕ್ ಕ್ಲಾಸೆನ್(253 ರನ್) ಹಾಗೂ ಕೆಕೆಆರ್ ವಿರುದ್ಧ ಮಂಗಳವಾರ ಶತಕ ಗಳಿಸಿ ರಾಜಸ್ಥಾನಕ್ಕೆ ಜಯ ತಂದುಕೊಟ್ಟಿರುವ ಜೋಸ್ ಬಟ್ಲರ್ ಕ್ರಮವಾಗಿ ಆರನೇ, 7ನೇ ಹಾಗೂ 8ನೇ ಸ್ಥಾನದಲ್ಲಿದ್ದಾರೆ.
ಬಟ್ಲರ್ ಈ ವರ್ಷ ಎರಡು ಶತಕ ಗಳಿಸಿದ್ದಾರೆ. ರೋಹಿತ್, ನರೇನ್, ಕೊಹ್ಲಿ ಹಾಗೂ ಟ್ರಾವಿಸ್ ಹೆಡ್ ತಲಾ ಒಂದು ಶತಕ ಗಳಿಸಿದ್ದಾರೆ. ಪರಾಗ್, ಸ್ಯಾಮ್ಸನ್ ಹಾಗೂ ಕ್ಲಾಸೆನ್ ಈ ವರ್ಷದ ಐಪಿಎಲ್ನಲ್ಲಿ ತಲಾ 3 ಅರ್ಧಶತಕ ಗಳಿಸಿದ್ದಾರೆ.
ಐಪಿಎಲ್-2024ರ ಪರ್ಪಲ್ ಕ್ಯಾಪ್ ಯಾರಿಗೆ?
ಪಂಜಾಬ್ ಕಿಂಗ್ಸ್ ವಿರುದ್ಧ ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ 26 ರನ್ಗೆ 3 ವಿಕೆಟ್ ಗಳನ್ನು ಕಬಳಿಸಿದ್ದ ಮುಂಬೈ ಇಂಡಿಯನ್ಸ್ ವೇಗಿ ಜಸ್ಪ್ರೀತ್ ಬುಮ್ರಾ ಟಿ-20 ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಬುಮ್ರಾ 5.96ರ ಇಕಾನಮಿ ರೇಟ್ನಲ್ಲಿ ಒಟ್ಟು 13 ವಿಕೆಟ್ ಗಳನ್ನು ಉರುಳಿಸಿದ್ದಾರೆ.
ರಾಜಸ್ಥಾನ ರಾಯಲ್ಸ್ ತಂಡದ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಾಲ್ 7 ಪಂದ್ಯಗಳಲ್ಲಿ 12 ವಿಕೆಟ್ ಗಳನ್ನು ಪಡೆದು 2ನೇ ಸ್ಥಾನದಲ್ಲಿದ್ದಾರೆ. ಮುಂಬೈ ಇಂಡಿಯನ್ಸ್ ವೇಗಿ ಜೆರಾಲ್ಡ್ ಕೊಯೆಟ್ಜಿ ಕೂಡ 12 ವಿಕೆಟ್ ಗಳನ್ನು ಉರುಳಿಸಿದ್ದಾರೆ.
10 ವಿಕೆಟ್ ಗಳನ್ನು ಪಡೆದಿರುವ ಐವರು ವೇಗದ ಬೌಲರ್ಗಳೆಂದರೆ: ಚೆನ್ನೈ ಸೂಪರ್ ಕಿಂಗ್ಸ್ನ ಮುಸ್ತಫಿಝುರ್ರಹ್ಮಾನ್, ಡೆಲ್ಲಿ ಕ್ಯಾಪಿಟಲ್ಸ್ನ ಖಲೀಲ್ ಅಹ್ಮದ್, ಪಂಜಾಬ್ ಕಿಂಗ್ಸ್ನ ಸ್ಯಾಮ್ ಕರ್ರನ್, ಕಾಗಿಸೊ ರಬಾಡ ಹಾಗೂ ಹರ್ಷಲ್ ಪಟೇಲ್. ಸನ್ರೈಸರ್ಸ್ ನಾಯಕ ಪ್ಯಾಟ್ ಕಮಿನ್ಸ್, ಪಂಜಾಬ್ ವೇಗಿ ಅರ್ಷದೀಪ್ ಸಿಂಗ್ ತಲಾ 9 ವಿಕೆಟ್ ಗಳನ್ನು ಪಡೆದಿದ್ದಾರೆ.
ಬುಮ್ರಾ ಹಾಗೂ ಲಕ್ನೊ ಸೂಪರ್ ಜಯಂಟ್ಸ್ನ ಯಶ್ ಠಾಕೂರ್ ಈ ವರ್ಷದ ಐಪಿಎಲ್ನಲ್ಲಿ ಐದು ವಿಕೆಟ್ ಗೊಂಚಲು ಪಡೆದ ಇಬ್ಬರು ಬೌಲರ್ಗಳಾಗಿದ್ದಾರೆ. ಈ ವರ್ಷದ ಐಪಿಎಲ್ನ ಟಾಪ್-10 ಅತ್ಯಂತ ಯಶಸ್ವಿ ಬೌಲರ್ಗಳಲ್ಲಿ ಚಹಾಲ್ ಮಾತ್ರ ಸ್ಪಿನ್ ಬೌಲರ್ ಆಗಿದ್ದಾರೆ.
ಸಿಎಸ್ಕೆ ಬೌಲರ್ ಮಥೀಶ ಪಥಿರನ, ಮುಸ್ತಫಿಝರ್ರಹ್ಮಾನ್, ಅರ್ಷದೀಪ್ ಹಾಗೂ ಕೊಯೆಟ್ಝಿ ಇನಿಂಗ್ಸ್ವೊಂದರಲ್ಲಿ 4 ವಿಕೆಟ್ ಗಳನ್ನು ಉರುಳಿಸಿದ್ದಾರೆ.