ಐಪಿಎಲ್ 2025ರ ಮೆಗಾ ಹರಾಜು | ಆಟಗಾರರು ಸಜ್ಜು
PC : @IPL
ಹೊಸದಿಲ್ಲಿ : ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)-2025ರ ಆಟಗಾರರ ಮೆಗಾ ಹರಾಜಿಗೆ 1,574 ಆಟಗಾರರು ನೋಂದಾಯಿಸಿಕೊಂಡಿದ್ದಾರೆ. ಹರಾಜು ಪ್ರಕ್ರಿಯೆ ಸೌದಿ ಅರೇಬಿಯದ ಜಿದ್ದಾದಲ್ಲಿ ನವೆಂಬರ್ 24 ಹಾಗೂ 25ರಂದು ನಡೆಯಲಿದೆ. ಮುಂದಿನ ಮೂರು ವರ್ಷಗಳಿಗೆ ಐಪಿಎಲ್ ತಂಡಗಳು ತಮ್ಮ ನೆಚ್ಚಿನ ಆಟಗಾರರನ್ನು ತಮ್ಮ ತೆಕ್ಕೆಗೆ ಸೇರಿಸಿಕೊಳ್ಳಲಿವೆ.
10 ಐಪಿಎಲ್ ಫ್ರಾಂಚೈಸಿಗಳಲ್ಲಿ ಒಟ್ಟು 204 ಸ್ಥಾನಗಳು ಲಭ್ಯವಿದ್ದು, ಪ್ರತಿ ತಂಡಗಳು ಗರಿಷ್ಠ 25 ಆಟಗಾರರನ್ನು ಹೊಂದಲು ಅವಕಾಶವಿದೆ. ನೋಂದಣಿ ಪಟ್ಟಿಯಲ್ಲಿ ಭಾರತೀಯ ಆಟಗಾರರು ಪ್ರಾಬಲ್ಯ ಸಾಧಿಸಿದ್ದು, 1,165 ಆಟಗಾರರು ಸಹಿ ಹಾಕಿದ್ದಾರೆ. 409 ವಿದೇಶಿ ಆಟಗಾರರು ಐಪಿಎಲ್ ಒಪ್ಪಂದಕ್ಕೆ ಸಹಿ ಹಾಕುವ ವಿಶ್ವಾಸದಲ್ಲಿದ್ದಾರೆ.
ದಕ್ಷಿಣ ಆಫ್ರಿಕಾದಿಂದ ಗರಿಷ್ಠ ಆಟಗಾರರು(91)ಹರಾಜಿನ ಕಣದಲ್ಲಿದ್ದಾರೆ. ಆ ನಂತರ ಆಸ್ಟ್ರೇಲಿಯ (76), ಇಂಗ್ಲೆಂಡ್(52) ದೇಶದ ಆಟಗಾರರಿದ್ದಾರೆ. ಹರಾಜಿನ ಪಟ್ಟಿಯಲ್ಲಿ ನ್ಯೂಝಿಲ್ಯಾಂಡ್, ವೆಸ್ಟ್ಇಂಡೀಸ್, ಅಫ್ಘಾನಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಐರ್ಲ್ಯಾಂಡ್, ಕೆನಡಾ, ನೆದರ್ಲ್ಯಾಂಡ್ಸ್, ಝಿಂಬಾಬ್ವೆ, ಸ್ಕಾಟ್ಲ್ಯಾಂಡ್, ಯುಎಇ, ಅಮೆರಿಕ ಹಾಗೂ ಇಟಲಿ ದೇಶಗಳ ಆಟಗಾರರಿದ್ದಾರೆ.
ಆಟಗಾರರು ಮೂಲ ಬೆಲೆಯೊಂದಿಗೆ ಐಪಿಎಲ್-2025ರ ಮೆಗಾ ಹರಾಜಿಗೆ ಪ್ರವೇಶಿಸುತ್ತಾರೆ. ತಂಡಗಳು ಆಟಗಾರರ ಸೇವೆ ಪಡೆಯಲು ಮೂಲ ಬೆಲೆಗೆ ಬಿಡ್ ಮಾಡಬಹುದು ಅಥವಾ ಆಫರ್ ಅನ್ನು ಹೆಚ್ಚಿಸಬಹುದು. 2024ರ ಐಪಿಎಲ್ನಲ್ಲಿ ತಮ್ಮೊಂದಿಗೆ ಕೆಲಸ ಮಾಡಿದ್ದ ಆಟಗಾರರನ್ನು ತಂಡಗಳು ರೈಟ್ ಟು ಮ್ಯಾಚ್(ಆರ್ಟಿಎಂ)ಕಾರ್ಡ್ಗಳನ್ನು ಬಳಸಿ ತನ್ನಲ್ಲೇ ಉಳಿಸಿಕೊಳ್ಳಬಹುದು.
►ನೋಂದಣಿ ಮಾಡಿಸಿಕೊಂಡಿರುವ ಆಟಗಾರರಲ್ಲಿ ಅನುಭವಿ ಹಾಗೂ ಹೊಸ ಪ್ರತಿಭೆಗಳು ಒಳಗೊಂಡಿದ್ದಾರೆ.
►320 ಆಟಗಾರರು ತಮ್ಮ ದೇಶದ ತಂಡಗಳನ್ನು ಪ್ರತಿಧಿಸುತ್ತಿದ್ದು, ಇದರಲ್ಲಿ 48 ಆಟಗಾರರು ಭಾರತೀಯರು, 272 ಅಂತರ್ರಾಷ್ಟ್ರೀಯ ಆಟಗಾರರಿದ್ದಾರೆ.
►1,224 ಹೊಸ ಆಟಗಾರರಾಗಿದ್ದು, ಭಾರತದ 965 ಹಾಗೂ ವಿದೇಶದ 104 ಆಟಗಾರರಿದ್ದಾರೆ.
►ಈ ಹಿಂದಿನ ಐಪಿಎಲ್ ಋತುಗಳಲ್ಲಿ ಭಾರತದ 152 ಹೊಸ ಆಟಗಾರರಿದ್ದರು. 3 ಹೊಸ ವಿದೇಶಿ ಆಟಗಾರರಿದ್ದರು.
►ಅಸೋಸಿಯೇಟ್ ದೇಶಗಳ 30 ಆಟಗಾರರಿದ್ದಾರೆ.
2 ಕೋಟಿ ರೂ. ಮೂಲ ಬೆಲೆ ಹೊಂದಿರುವ ಭಾರತೀಯ ಆಟಗಾರರ ಪಟ್ಟಿ
ರಿಷಭ್ ಪಂತ್, ಕೆ.ಎಲ್.ರಾಹುಲ್, ಶ್ರೇಯಸ್ ಅಯ್ಯರ್, ಆರ್.ಅಶ್ವಿನ್, ಯಜುವೇಂದ್ರ ಚಹಾಲ್, ಮುಹಮ್ಮದ್ ಶಮಿ, ಖಲೀಲ್ ಅಹ್ಮದ್, ದೀಪಕ್ ಚಹಾರ್, ವೆಂಕಟೇಶ್ ಅಯ್ಯರ್, ಅವೇಶ್ ಖಾನ್, ಇಶಾನ್ ಕಿಶನ್, ಮುಕೇಶ್ ಕುಮಾರ್, ಭುವನೇಶ್ವರ ಕುಮಾರ್, ಪ್ರಸಿದ್ಧ ಕೃಷ್ಣ, ಟಿ. ನಟರಾಜನ್, ದೇವದತ್ತ ಪಡಿಕ್ಕಲ್, ಕೃನಾಲ್ ಪಾಂಡ್ಯ, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್, ವಾಶಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಮುಹಮ್ಮದ್ ಸಿರಾಜ್ ಹಾಗೂ ಉಮೇಶ್ ಯಾದವ್.