ಪಂತ್ ಬಳಗಕ್ಕೆ 'ಲಕ್' ನೋ! ; ಮುಂಬೈ ಗೆ LSG ವಿರುದ್ಧ ಭರ್ಜರಿ ಜಯ

PC : @IPL
ಮುಂಬೈ: ರಿಕೆಲ್ಟನ್(58 ರನ್)ಹಾಗೂ ಸೂರ್ಯಕುಮಾರ್(54ರನ್)ಅರ್ಧಶತಕ, ಜಸ್ಪ್ರಿತ್ ಬುಮ್ರಾ (4-22) ನೇತೃತ್ವದಲ್ಲಿ ಬೌಲರ್ಗಳ ಶಿಸ್ತುಬದ್ಧ ಬೌಲಿಂಗ್ ದಾಳಿಯ ನೆರವಿನಿಂದ ಮುಂಬೈ ಇಂಡಿಯನ್ಸ್ ಕ್ರಿಕೆಟ್ ತಂಡವು ಲಕ್ನೊ ಸೂಪರ್ ಜಯಂಟ್ಸ್ ವಿರುದ್ಧದ ಐಪಿಎಲ್ನ 45ನೇ ಪಂದ್ಯದಲ್ಲಿ 54 ರನ್ ಅಂತರದಿಂದ ಜಯಶಾಲಿಯಾಗಿದೆ. ತಾನಾಡಿದ 10ನೇ ಪಂದ್ಯದಲ್ಲಿ 6ನೇ ಗೆಲುವು ದಾಖಲಿಸಿ 12 ಅಂಕ ಕಲೆ ಹಾಕಿರುವ ಮುಂಬೈ ತಂಡವು ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.
ಸತತ 5ನೇ ಗೆಲುವು ದಾಖಲಿಸಿರುವ ಹಾರ್ದಿಕ್ ಪಾಂಡ್ಯ ಬಳಗವು ಐಪಿಎಲ್ನಲ್ಲಿ 150ನೇ ಪಂದ್ಯ ಗೆದ್ದ ಮೊದಲ ತಂಡವೆಂಬ ಹಿರಿಮೆಗೆ ಪಾತ್ರವಾಗಿದೆ. ಸತತ 5 ಪಂದ್ಯಗಳ ಪೈಕಿ 4 ಪಂದ್ಯಗಳನ್ನು ತವರು ಮೈದಾನದಲ್ಲಿ ಗೆದ್ದುಕೊಂಡಿದೆ.
ವಾಂಖೆಡೆ ಸ್ಟೇಡಿಯಮ್ನಲ್ಲಿ ರವಿವಾರ ನಡೆದ ಪಂದ್ಯದಲ್ಲಿ ಗೆಲ್ಲಲು 216 ರನ್ ಗುರಿ ಪಡೆದ ಲಕ್ನೊ ತಂಡವು ವೇಗಿಗಳಾದ ಬುಮ್ರಾ, ಟ್ರೆಂಟ್ ಬೌಲ್ಟ್(3-20) ಹಾಗೂ ವಿಲ್ ಜಾಕ್ಸ್(2-18) ನಿಖರ ದಾಳಿಗೆ ನಿರುತ್ತರವಾಗಿ 20 ಓವರ್ಗಳಲ್ಲಿ 161 ರನ್ ಗಳಿಸುವಷ್ಟರಲ್ಲಿ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡಿತು.
ಲಕ್ನೊದ ಪರ ಆಯುಷ್ ಬದೋನಿ(35 ರನ್, 22 ಎಸೆತ)ಸರ್ವಾಧಿಕ ಸ್ಕೋರ್ ಗಳಿಸಿದರು. ಆರಂಭಿಕ ಬ್ಯಾಟರ್ ಮಿಚೆಲ್ ಮಾರ್ಷ್(34 ರನ್, 24 ಎಸೆತ), ನಿಕೊಲಸ್ ಪೂರನ್(27 ರನ್, 15 ಎಸೆತ), ಡೇವಿಡ್ ಮಿಲ್ಲರ್(24 ರನ್,16 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು.
ಮಾರ್ಷ್ ಹಾಗೂ ಬದೋನಿ 4ನೇ ವಿಕೆಟ್ಗೆ 29 ಎಸೆತಗಳಲ್ಲಿ 46 ರನ್ ಸೇರಿಸಿದ್ದು, ಇದು ಲಕ್ನೊ ತಂಡದ ಗರಿಷ್ಠ ರನ್ ಜೊತೆಯಾಟವಾಗಿದೆ. ಇದಕ್ಕೂ ಮೊದಲು ಮಾರ್ಷ್ ಅವರು ಪೂರನ್ ಜೊತೆಗೆ 2ನೇ ವಿಕೆಟ್ಗೆ 42 ರನ್ ಸೇರಿಸಿದ್ದು, ತಂಡದ ಗೆಲುವಿಗಾಗಿ ಹೋರಾಟ ನೀಡಿದರು. ಆದರೆ ಮಾರ್ಷ್ ಹೊರತುಪಡಿಸಿ ಉಳಿದವರು ಬೇಜವಾಬ್ದಾರಿಯಿಂದ ಆಡಿದರು.
ನಾಯಕ ರಿಷಭ್ ಪಂತ್(4ರನ್)ರನ್ಗಾಗಿ ಪರದಾಟ ಮುಂದುವರಿಸಿದರು. ಮರ್ಕ್ರಮ್(9ರನ್), ಅಬ್ದುಲ್ ಸಮದ್(2ರನ್)ವಿಫಲರಾದರು.
ಮುಂಬೈ ಇಂಡಿಯನ್ಸ್ 215/7: ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಮುಂಬೈ ಇಂಡಿಯನ್ಸ್ ತಂಡವು ರಿಯಾನ್ ರಿಕೆಲ್ಟನ್(58 ರನ್, 32 ಎಸೆತ, 6 ಬೌಂಡರಿ, 4 ಸಿಕ್ಸರ್)ಹಾಗೂ ಸೂರ್ಯಕುಮಾರ್ ಯಾದವ್(54 ರನ್, 28 ಎಸೆತ, 4 ಬೌಂಡರಿ, 4 ಸಿಕ್ಸರ್) ಸಿಡಿಸಿದ ಅರ್ಧಶತಕದ ಕೊಡುಗೆಯ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ಗಳ ನಷ್ಟಕ್ಕೆ 215 ರನ್ ಗಳಿಸಿದೆ.
ಆರಂಭಿಕ ಬ್ಯಾಟರ್ ರಿಕೆಲ್ಟನ್ ಸ್ಪಿನ್ನರ್ ದಿಗ್ವೇಶ್ ಬೌಲಿಂಗ್ನಲ್ಲಿ 2 ಸಿಕ್ಸರ್ ಹಾಗೂ 1 ಬೌಂಡರಿ ಗಳಿಸಿ 25 ಎಸೆತಗಳಲ್ಲಿ ಈ ಬಾರಿಯ ಐಪಿಎಲ್ನಲ್ಲಿ ತನ್ನ 2ನೇ ಅರ್ಧಶತಕ ಗಳಿಸಿ ಮುಂಬೈಗೆ ಬಿರುಸಿನ ಆರಂಭ ಒದಗಿಸಿದರು. 28 ಎಸೆತಗಳಲ್ಲಿ 54 ರನ್ ಗಳಿಸಿದ ಸೂರ್ಯಕುಮಾರ್ ಮುಂಬೈ ಇನಿಂಗ್ಸ್ಗೆ ಚುರುಕು ಮುಟ್ಟಿಸಿದರು. 10 ಇನಿಂಗ್ಸ್ಗಳಲ್ಲಿ ಒಟ್ಟು 417 ರನ್ ಗಳಿಸಿ ಈವರ್ಷದ ಐಪಿಎಲ್ನಲ್ಲಿ ಗರಿಷ್ಠ ರನ್ ಸ್ಕೋರರ್ ಎನಿಸಿಕೊಂಡರು.
ರಿಕೆಲ್ಟನ್ ಇನಿಂಗ್ಸ್ನ 2ನೇ ಓವರ್ನಲ್ಲಿ ಅಬ್ಬರದ ಬ್ಯಾಟಿಂಗ್ಗೆ ಮುಂದಾದರು. ಕೇವಲ 25 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಮುಂಬೈ ತಂಡದ ಪರ ಈ ವರ್ಷದ ಐಪಿಎಲ್ನಲ್ಲಿ ವೇಗದ ಅರ್ಧಶತಕ ಗಳಿಸಿದ ಸಾಧನೆ ಮಾಡಿದರು.
ಇದೇ ವೇಳೆ ಸೂರ್ಯಕುಮಾರ್ ಅವರು ಐಪಿಎಲ್ನಲ್ಲಿ ಎಸೆತಗಳ ಆಧಾರದಲ್ಲಿ ವೇಗವಾಗಿ 4,000 ರನ್ ಪೂರೈಸಿದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ವಿಲ್ ಜಾಕ್ಸ್(29 ರನ್, 21 ಎಸೆತ), ನಮನ್ ಧೀರ್(ಔಟಾಗದೆ 25, 11 ಎಸೆತ) ಹಾಗೂ ಕಾರ್ಬಿನ್ ಬಾಷ್(20 ರನ್)ಎರಡಂಕೆಯ ಸ್ಕೋರ್ ಗಳಿಸಿ ಇನಿಂಗ್ಸ್ಗೆ ಬಲ ತುಂಬಿದರು.
ಲಕ್ನೊದ ಪರ ಮಯಾಂಕ್ ಯಾದವ್(2-40) ಹಾಗೂ ಆವೇಶ್ ಖಾನ್(2-42)ತಲಾ ಎರಡು ವಿಕೆಟ್ಗಳನ್ನು ಉರುಳಿಸಿದರು. ಪ್ರಿನ್ಸ್ ಯಾದವ್, ದಿಗ್ವೇಶ್ ರಥಿ ಹಾಗೂ ರವಿ ಬಿಷ್ಣೋಯಿ ತಲಾ 1 ವಿಕೆಟ್ ಪಡೆದರು.
ಆಲ್ರೌಂಡ್ ಪ್ರದರ್ಶನ ನೀಡಿದ ವಿಲ್ ಜಾಕ್ಸ್(29 ರನ್, 2-18)ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಸಂಕ್ಷಿಪ್ತ ಸ್ಕೋರ್
ಮುಂಬೈ ಇಂಡಿಯನ್ಸ್: 20 ಓವರ್ಗಳಲ್ಲಿ 215/7
(ರಿಯಾನ್ ರಿಕೆಲ್ಟನ್ 58, ಸೂರ್ಯಕುಮಾರ್ 54, ವಿಲ್ ಜಾಕ್ಸ್ 29, ನಮನ್ ಧೀರ್ ಔಟಾಗದೆ 25, ಕಾರ್ಬಿನ್ ಬಾಷ್ 20, ಮಯಾಂಕ್ ಯಾದವ್ 2-40, ಆವೇಶ್ ಖಾನ್ 2-42)
ಲಕ್ನೊ ಸೂಪರ್ ಜಯಂಟ್ಸ್: 20 ಓವರ್ಗಳಲ್ಲಿ 161 ರನ್ಗೆ ಆಲೌಟ್
(ಆಯುಷ್ ಬದೋನಿ 35, ಮಿಚೆಲ್ ಮಾರ್ಷ್ 34, ನಿಕೊಲಸ್ ಪೂರನ್ 27, ಮಿಲ್ಲರ್ 24, ಜಸ್ಪ್ರಿತ್ ಬುಮ್ರಾ 4-22, ಟ್ರೆಂಟ್ ಬೌಲ್ಟ್ 3-20, ವಿಲ್ ಜಾಕ್ಸ್ 2-18)
ಪಂದ್ಯಶ್ರೇಷ್ಠ: ವಿಲ್ ಜಾಕ್ಸ್.