ಐಪಿಎಲ್ | ಗುಜರಾತ್ ಟೈಟಾನ್ಸ್ ಬ್ಯಾಟಿಂಗ್ ಸಲಹೆಗಾರನಾಗಿ ಪಾರ್ಥಿವ್ ಪಟೇಲ್
ಪಾರ್ಥಿವ್ ಪಟೇಲ್ | PC : PTI
ಹೊಸದಿಲ್ಲಿ: ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ಋತುವಿನಲ್ಲಿ ಪಾರ್ಥಿವ್ ಪಟೇಲ್ ಅವರು ಗುಜರಾತ್ ಟೈಟಾನ್ಸ್ ತಂಡದ ಬ್ಯಾಟಿಂಗ್ ಮೆಂಟರ್ ಆಗಿ ಕಾರ್ಯನಿರ್ವಹಿಸಲು ಸಜ್ಜಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭಾರತದ ಮಾಜಿ ಕ್ರಿಕೆಟಿಗ ಆಶೀಶ್ ನೆಹ್ರಾ ನೇತೃತ್ವದ ಸಹಾಯಕ ಸಿಬ್ಬಂದಿ ವಿಭಾಗವನ್ನು ಪಟೇಲ್ ಸೇರಲಿದ್ದಾರೆ. ಪಟೇಲ್ ಅವರು ಗ್ಯಾರಿ ಕರ್ಸ್ಟನ್ರಿಂದ ತೆರವಾದ ಸ್ಥಾನ ತುಂಬಲಿದ್ದಾರೆ. ಕರ್ಸ್ಟನ್ ಈ ಹಿಂದೆ ಗುಜರಾತ್ನ ಬ್ಯಾಟಿಂಗ್ ಕೋಚ್ ಹಾಗೂ ಮೆಂಟರ್ ಆಗಿದ್ದರು. ಐಪಿಎಲ್ ಫ್ರಾಂಚೈಸಿಯನ್ನು ತೊರೆದಿರುವ ಕರ್ಸ್ಟನ್ ಪಾಕಿಸ್ತಾನದ ಕ್ರಿಕೆಟ್ ತಂಡದ ಸೀಮಿತ ಓವರ್ ತಂಡಕ್ಕೆ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ.
ವಿಕ್ರಂ ಸೋಳಂಕಿ ಗುಜರಾತ್ ತಂಡದ ಕ್ರಿಕೆಟ್ ನಿರ್ದೇಶಕರಾಗಿ ಮುಂದುವರಿಯಲಿದ್ದಾರೆ. ಪಾರ್ಥಿವ್ ಪಟೇಲ್ ಮುಂಬೈ ಇಂಡಿಯನ್ಸ್ ತಂಡದ ಪ್ರತಿಭಾನ್ವೇಷಣೆಯಲ್ಲಿ ತೊಡಗಿಸಿಕೊಂಡಿದ್ದರು. ದೇಶೀಯ ಕ್ರಿಕೆಟ್ ಪಂದ್ಯಗಳಲ್ಲಿ ನಿರಂತರವಾಗಿ ಹಾಜರಾಗಿದ್ದಾರೆ.
2020ರ ಡಿಸೆಂಬರ್ನಲ್ಲಿ ಎಲ್ಲ ಮಾದರಿಯ ಕ್ರಿಕೆಟ್ನಿಂದ ನಿವೃತ್ತಿ ಪ್ರಕಟಿಸಿದ ನಂತರ ವಿಕೆಟ್ಕೀಪರ್-ಬ್ಯಾಟರ್ ಪಟೇಲ್ ಅವರು ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡಿದ್ದರು. ಅನಂತರ ವೀಕ್ಷಕ ವಿವರಣೆ ನೀಡುತ್ತಿದ್ದರು.
ಗುಜರಾತ್ ತಂಡ ತನ್ನ ಮೊದಲ ಆವೃತ್ತಿಯಲ್ಲಿ ಚಾಂಪಿಯನ್ ಆಗಿತ್ತು. ಮರು ವರ್ಷ ರನ್ನರ್ಸ್ ಅಪ್ ಆಗಿತ್ತು. 2024ರ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿರಲಿಲ್ಲ.