ಐಪಿಎಲ್ ಹರಾಜು: ಫ್ರಾಂಚೈಸಿಗಳಿಂದ 182 ಆಟಗಾರರಿಗೆ 639.15 ಕೋಟಿ ವೆಚ್ಚ
Photo : PTI
2025ನೇ ಸಾಲಿನ ಐಪಿಎಲ್ ಗಾಗಿ ಮೆಗಾ ಹರಾಜು ಮುಕ್ತಾಯವಾಗಿದೆ. 10 ಫ್ರಾಂಚೈಸಿಗಳು ಒಟ್ಟು 182 ಆಟಗಾರರಿಗೆ ಎರಡು ದಿನಗಳ ಅವಧಿಯಲ್ಲಿ 639.15 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿದ್ದಾರೆ. ರಿಷಭ್ ಪಂತ್ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದು, ಲಕ್ನೋ ಸೂಪರ್ ಜೈಂಟ್ಸ್ ಇವರನ್ನು 27 ಕೋಟಿ ರೂಪಾಯಿಗೆ ಖರೀದಿಸಿದೆ. ಶ್ರೇಯಸ್ ಅಯ್ಯರ್ (26.75 ಕೋಟಿ, ಪಿಬಿಕೆಎಸ್) ಮತ್ತು ವೆಂಕಟೇಶ ಅಯ್ಯರ್ (23.75 ಕೋಟಿ, ಕೆಕೆಆರ್) ಇತರ ಅತ್ಯಂತ ದುಬಾರಿ ಆಟಗಾರರು.
ಕೇವಲ 13 ವರ್ಷ ವಯಸ್ಸಿನ ವೈಭವ್ ಸೂರ್ಯವಂಶಿ ಐಪಿಎಲ್ ಹರಾಜಿನಲ್ಲಿ ಆಯ್ಕೆಯಾದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದು, ಇವರನ್ನು 1.1 ಕೋಟಿ ರೂಪಾಯಿಗೆ ಖರೀದಿಸಲಾಗಿದೆ. ಯಜುವೇಂದ್ರ ಚಾಹಲ್ (18 ಕೋಟಿ, ಪಿಬಿಕೆಎಸ್) ಭಾರತದ ಅತ್ಯಂತ ದುಬಾರಿ ಸ್ಪಿನ್ನರ್ ಎನಿಸಿಕೊಂಡಿದ್ದಾರೆ.
ಎರಡನೇ ದಿನ ಭಾರತೀಯ ಆಟಗಾರರು ಪ್ರಮುಖವಾಗಿ ಗಮನ ಸೆಳೆದರು. ಭುವನೇಶ್ವರ ಕುಮಾರ್ (ಆರ್ಸಿಬಿ 10.75 ಕೋಟಿ), ಆಕಾಶ್ ದೀಪ್ (ಎಲ್ಎಸ್ಜಿ, 8 ಕೋಟಿ), ದೀಪಕ್ ಚಹಾರ್ (ಎಂಐ, 9.25 ಕೋಟಿ), ಮುಕೇಶ್ ಕುಮಾರ್ (ಡಿಸಿ, 8 ಕೋಟಿ), ತುಷಾರ್ ದೇಶಪಾಂಡೆ (ಆರ್ಆರ್ 6.5 ಕೋಟಿ) ಅವರನ್ನು ಫ್ರಾಂಚೈಸಿಗಳು ಉತ್ತಮ ಬೆಲೆಗೆ ಖರೀದಿಸಿದರು.
ಚೆನ್ನೈ ಸೂಪರ್ ಕಿಂಗ್ಸ್ ಗೆ ನೂರ್ ಅಹ್ಮದ್ (10 ಕೋಟಿ), ಡೆಕ್ಕನ್ ಚಾರ್ಜರ್ಸ್ ಗೆ ಕೆ.ಎಲ್.ರಾಹುಲ್ (14 ಕೋಟಿ), ಗುಜರಾತ್ ಟೈಟನ್ಸ್ ಗೆ ಜೋಸ್ ಬಟ್ಲರ್ (15.75 ಕೋಟಿ), ಲಕ್ನೋ ಸೂಪರ್ ಜೈಂಟ್ಸ್ ಗೆ ರಿಷಬ್ ಪಂತ್ (27 ಕೋಟಿ), ಕೆಕೆಆರ್ ಗೆ ವೆಂಕಟೇಶ ಅಯ್ಯರ್ (23.75 ಕೋಟಿ), ಮುಂಬೈ ಇಂಡಿಯನ್ಸ್ ಗೆ ಟ್ರೆಂಟ್ ಬೋಲ್ಟ್ (12.5 ಕೋಟಿ), ಕಿಂಗ್ಸ್ ಪಂಜಾಂಬ್ ತಂಡಕ್ಕೆ ಶ್ರೇಯಸ್ ಅಯ್ಯರ್ (26.75 ಕೋಟಿ), ರಾಜಸ್ಥಾನ ರಾಯಲ್ಸ್ ಗೆ ಜೋಫ್ರಾ ಆರ್ಚರ್ (12.5 ಕೋಟಿ), ಆರ್ ಸಿಬಿಗೆ ಜೋಶ್ ಹೆಸಲ್ ವುಡ್ (12.5 ಕೋಟಿ) ಮತ್ತು ಸನ್ ರೈಸರ್ಸ್ ಹೈದ್ರಾಬಾದ್ ತಂಡಕ್ಕೆ ಇಶಾನ್ ಕಿಶನ್ (11.25 ಕೋಟಿ) ದುಬಾರಿ ಆಟಗಾರರು.