ಐಪಿಎಲ್ ಹರಾಜು | ಮುಹಮ್ಮದ್ ಶಮಿಗಿಂತ ಹೆಚ್ಚು ಮೊತ್ತಕ್ಕೆ ಹರಾಜಾದ ಭುವನೇಶ್ವರ ಕುಮಾರ್
ರಣಜಿಯಲ್ಲಿ 10 ವಿಕೆಟ್ ಗೊಂಚಲು ಪಡೆದಿದ್ದ ಅಂಶುಲ್ 3.40 ಕೋಟಿ ರೂ.ಗೆ ಸಿಎಸ್‌ಕೆ ತೆಕ್ಕೆಗೆ
ಜಿದ್ದಾ: ಸೌದಿ ಅರೇಬಿಯದಲ್ಲಿ ಸೋಮವಾರ ಎರಡನೇ ದಿನದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಭುವನೇಶ್ವರ ಕುಮಾರ್ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದು, 10.75 ಕೋಟಿ ರೂ.ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ತೆಕ್ಕೆಗೆ ಸೇರಿದರು. ಈ ಮೂಲಕ ಮುಹಮ್ಮದ್ ಶಮಿಗಿಂತ ಹೆಚ್ಚು ಬೆಲೆಗೆ ಹರಾಜಾದರು. 2 ಕೋಟಿ ರೂ. ಮೂಲ ಬೆಲೆ ಹೊಂದಿದ್ದ ಶಮಿ ಅವರು ರವಿವಾರ ಮೊದಲ ದಿನದ ಹರಾಜಿನಲ್ಲಿ 10 ಕೋಟಿ ರೂ.ಗೆ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಸೇರಿದ್ದರು.
ದೀಪಕ್ ಚಹಾರ್, ಆಕಾಶ್ ದೀಪ್, ಮುಕೇಶ್ ಕುಮಾರ್ ಹಾಗೂ ಮಾರ್ಕೊ ಜಾನ್ಸನ್ ಕೂಡ ಉತ್ತಮ ಮೊತ್ತಕ್ಕೆ ಹರಾಜಾದರು.
ಆಲ್‌ರೌಂಡರ್ ಜಾನ್ಸನ್ ಅವರು 7 ಕೋಟಿ ರೂ.ಗೆ ಪಂಜಾಬ್ ಕಿಂಗ್ಸ್ ಪಾಲಾದರು. ಕೃನಾಲ್ ಪಾಂಡ್ಯರನ್ನು 5.75 ಕೋಟಿ ರೂ.ಗೆ ಆರ್‌ಸಿಬಿ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. ನಿತಿಶ್ ರಾಣಾ 4.20 ಕೋಟಿ ರೂ.ಗೆ ರಾಜಸ್ಥಾನ ತಂಡವನ್ನು ಸೇರಿದರು.
ಇತ್ತೀಚೆಗೆ ಹರ್ಯಾಣದ ಪರ ರಣಜಿ ಟ್ರೋಫಿ ಪಂದ್ಯದಲ್ಲಿ 10 ವಿಕೆಟ್ ಗೊಂಚಲು ಪಡೆದಿದ್ದ ಅಂಶುಲ್ ಕಾಂಬೋಜ್ ಅವರು 3.40 ಕೋಟಿ ರೂ.ಗೆ ಸಿಎಸ್‌ಕೆ ತಂಡ ಸೇರಿಕೊಂಡರು. ರಣಜಿ ಇತಿಹಾಸದಲ್ಲಿ ಇನಿಂಗ್ಸ್‌ನಲ್ಲಿ 10 ವಿಕೆಟ್ ಪಡೆದ 3ನೇ ಬೌಲರ್ ಆಗಿರುವ ಕಾಂಬೋಜ್ 30 ಲಕ್ಷ ರೂ. ಮೂಲ ಬೆಲೆ ಹೊಂದಿದ್ದರು.
ಮೊದಲ ದಿನದ ಹರಾಜಿನಲ್ಲಿ 10 ಐಪಿಎಲ್ ಫ್ರಾಂಚೈಸಿಗಳು 72 ಆಟಗಾರರ ಮೇಲೆ 467.95 ಕೋ.ರೂ. ವ್ಯಯಿಸಿವೆ. ರಿಷಭ್ ಪಂತ್ ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ಮೊತ್ತಕ್ಕೆ(27 ಕೋ.ರೂ.)ಲಕ್ನೊ ಸೂಪರ್ ಜಯಂಟ್ಸ್ ಪಾಲಾಗಿದ್ದರು.
ವೇಗದ ಬೌಲರ್‌ಗಳಿಗೆ ಹೆಚ್ಚು ಬೇಡಿಕೆ ವ್ಯಕ್ತವಾಗಿದ್ದು, ದೀಪಕ್ ಚಹಾರ್ ಮುಂಬೈ ಇಂಡಿಯನ್ಸ್‌ಗೆ 9.25 ಕೋ.ರೂ.ಗೆ ಹರಾಜಾದರು. ಆಕಾಶ್ ದೀಪ್ ಅವರು ಲಕ್ನೊ ತಂಡಕ್ಕೆ ಹಾಗೂ ಮುಕೇಶ್ ಕುಮಾರ್ ಡೆಲ್ಲಿ ಕ್ಯಾಪಿಟಲ್ಸ್‌ಗೆ ತಲಾ 8 ಕೋ.ರೂ.ಗೆ ಮಾರಾಟವಾದರು.
ತುಷಾರ್ ದೇಶಪಾಂಡೆ ರಾಜಸ್ಥಾನ ರಾಯಲ್ಸ್‌ಗೆ 6.50 ಕೋಟಿ ರೂ.ಗೆ ಹರಾಜಾದರು.
ಆರಂಭಿಕ ಬಿಡ್‌ನಲ್ಲಿ ಸಾಕಷ್ಟು ಆಟಗಾರರು ಮಾರಾಟವಾಗಲಿಲ್ಲ. ಈ ಪೈಕಿ ಶಾರ್ದೂಲ್ ಠಾಕೂರ್, ಕೇನ್ ವಿಲಿಯಮ್ಸನ್ ಹಾಗೂ ಅಜಿಂಕ್ಯ ರಹಾನೆ ಪ್ರಮುಖರಾಗಿದ್ದಾರೆ. ಕೇವಲ 75 ಲಕ್ಷ ರೂ. ಮೂಲ ಬೆಲೆ ಹೊಂದಿದ್ದರೂ ಪೃಥ್ವಿ ಶಾರನ್ನು ಯಾರೂ ಖರೀದಿಸಲಿಲ್ಲ.
ಜಯದೇವ್ ಉನದ್ಕಟ್ 1 ಕೋ.ರೂ. ಮೂಲ ಬೆಲೆಗೆ ಸನ್‌ರೈಸರ್ಸ್ ಹೈದರಾಬಾದ್‌ಗೆ ಸೇರಿದರು. ಐಪಿಎಲ್‌ನಲ್ಲಿ 7 ವಿವಿಧ ಫ್ರಾಂಚೈಸಿಗಳಲ್ಲಿ ಆಡಲಿರುವ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ.
ಆಲ್‌ರೌಂಡರ್ ರೊಮಾರಿಯೊ ಶೆಫರ್ಡ್ ಈ ವರ್ಷ ಆರ್‌ಸಿಬಿ ಪರ ಆಡಲಿದ್ದಾರೆ. ಶೆಫರ್ಡ್ 1.50 ಕೋಟಿ ರೂ.ಗೆ ಆರ್‌ಸಿಬಿ ಪಾಲಾದರು.
ಅಫ್ಘಾನಿಸ್ತಾನದ ಆಲ್‌ರೌಂಡರ್ ಅಝ್ಮತುಲ್ಲಾ ಉಮರ್ಝೈ 2.40 ಕೋಟಿ ರೂ.ಗೆ ಪಂಜಾಬ್ ಕಿಂಗ್ಸ್ ತಂಡಕ್ಕೆ ಸೇರಿದರು. 1.50 ಕೋಟಿ ರೂ. ಮೂಲೆ ಬೆಲೆ ಹೊಂದಿದ್ದ ಉಮರ್ಝೈ ಚೆನ್ನೈ ಹಾಗೂ ಪಂಜಾಬ್ ಸಹಿತ ಹಲವು ಫ್ರಾಂಚೈಸಿಗಳ ಗಮನ ಸೆಳೆದರು. ಪಂಜಾಬ್ 2.40 ಕೋಟಿ ರೂ.ಗೆ ಯಶಸ್ವಿ ಬಿಡ್ ಸಲ್ಲಿಸಿ ಜಯಶಾಲಿಯಾಯಿತು.
ಇಂಗ್ಲೆಂಡ್‌ನ ಸ್ಪೋಟಕ ಆರಂಭಿಕ ಬ್ಯಾಟರ್ ವಿಲ್ ಜಾಕ್ಸ್ ಮುಂಬರುವ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಲಿದ್ದಾರೆ. ಮುಂಬೈ ತಂಡ 5.25 ಕೋಟಿ ರೂ.ಗೆ ಜಾಕ್ಸ್‌ರನ್ನು ತನ್ನ ಬಲೆಗೆ ಬೀಳಿಸಿದೆ. ಕಳೆದ ಋತುವಿನಲ್ಲಿ ಆರ್‌ಸಿಬಿ ಪರ ಆಡಿದ್ದ ಜಾಕ್ಸ್ 2 ಕೋಟಿ ರೂ. ಮೂಲ ಬೆಲೆ ಹೊಂದಿದ್ದರು.
ಪ್ರತಿಭಾವಂತ ಆಲ್‌ರೌಂಡರ್ ದೀಪಕ್ ಹೂಡಾ ಅವರು 1.70 ಕೋಟಿ ರೂ.ಗೆ ಚೆನ್ನೈ ಕಿಂಗ್ಸ್‌ಗೆ ಸೇರಿದರು.
ಆಸ್ಟ್ರೇಲಿಯದ ಆಟಗಾರ ಟಿಮ್ ಡೇವಿಡ್‌ರನ್ನು ಆರ್‌ಸಿಬಿ ತಂಡ 3 ಕೋಟಿ ರೂ. ಗೆ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. ಆಲ್‌ರೌಂಡರ್ ಶಹಬಾಝ್ ಅಹ್ಮದ್‌ರನ್ನು ಲಕ್ನೊ ತಂಡವು 2.40 ಕೋಟಿ ರೂ.ಗೆ ತನ್ನ ಬಲೆಗೆ ಬೀಳಿಸಿಕೊಂಡಿದೆ.
ಹಿರಿಯ ಬ್ಯಾಟರ್ ಮನೀಶ್ ಪಾಂಡೆ ಮೂಲ ಬೆಲೆ 75 ಲಕ್ಷ ರೂ.ಗೆ ಕೆಕೆಆರ್ ತಂಡಕ್ಕೆ ವಾಪಸಾಗಿದ್ದಾರೆ. ಹಿಂದೆ ಹಲವಾರು ಫ್ರಾಂಚೈಸಿಗಳ ಪ್ರಮುಖ ಆಟಗಾರನಾಗಿದ್ದ ಪಾಂಡೆ ಉತ್ತಮ ರನ್ ಸ್ಕೋರರ್ ಜೊತೆಗೆ ಶ್ರೇಷ್ಠ ಫೀಲ್ಡರ್ ಕೂಡ ಆಗಿದ್ದಾರೆ.