ಐಪಿಎಲ್ ಹರಾಜು | ಕೋಟ್ಯಧಿಪತಿಯಾದ ದಿಲ್ಲಿಯ ಆರಂಭಿಕ ಬ್ಯಾಟರ್ ಪ್ರಿಯಾಂಶ್ ಆರ್ಯ
ಪ್ರಿಯಾಂಶ್ ಆರ್ಯ | PC : X
ಜಿದ್ದಾ: ದಿಲ್ಲಿಯ ಉದಯೋನ್ಮುಖ ತಾರೆ ಪ್ರಿಯಾಂಶ್ ಆರ್ಯ ಸೋಮವಾರ ನಡೆದ ಐಪಿಎಲ್ ಹರಾಜಿನ ವೇಳೆ ಕೋಟ್ಯಧಿಪತಿಯಾದರು. ಡೆಲ್ಲಿ ಕ್ಯಾಪಿಟಲ್ಸ್,ಮುಂಬೈ ಇಂಡಿಯನ್ಸ್ ಹಾಗೂ ಆರ್ಸಿಬಿಯನ್ನು ಬಿಡ್ನಲ್ಲಿ ಸೋಲಿಸಿದ ಪಂಜಾಬ್ ಕಿಂಗ್ಸ್ ತಂಡವು 3.80 ಕೋಟಿ ರೂ.ಗೆ ಪ್ರಿಯಾಂಶ್ರನ್ನು ತನ್ನತ್ತ ಸೆಳೆದುಕೊಂಡಿದೆ.
30 ಲಕ್ಷ ರೂ. ಮೂಲ ಬೆಲೆಯೊಂದಿಗೆ ಐಪಿಎಲ್-2025ಕ್ಕೆ ಪ್ರವೇಶಿಸಿದ್ದ ಪ್ರಿಯಾಂಶ್ ಸುಮಾರು 13 ಪಟ್ಟು ಹೆಚ್ಚಿನ ಬೆಲೆಗೆ ಹರಾಜಾಗಿ ಗಮನ ಸೆಳೆದರು.
ಡೆಲ್ಲಿ ಹಾಗೂ ಮುಂಬೈ ತಂಡಗಳು ಆರಂಭದಲ್ಲಿ ಪ್ರಿಯಾಂಶ್ ಮೇಲೆ ಆಸಕ್ತಿ ತೋರಿದವು. ಆ ನಂತರ ಪಂಜಾಬ್ ಹಾಗೂ ಆರ್ಸಿಬಿ ತಂಡಗಳ ನಡುವೆ ತೀವ್ರ ಪೈಪೋಟಿ ಕಂಡು ಬಂದಿತು. ಅಂತಿಮವಾಗಿ ಪಂಜಾಬ್ ತಂಡವು 3.80 ಕೋಟಿ ರೂ.ಗೆ ಪ್ರಿಯಾಂಶ್ರನ್ನು ತನ್ನತ್ತ ಸೆಳೆದುಕೊಂಡಿತು.
ಪ್ರಿಯಾಂಶ್ ದಿಲ್ಲಿಯ ಎಡಗೈ ಬ್ಯಾಟರ್ ಆಗಿದ್ದು, ಮೊದಲ ಆವೃತ್ತಿಯ ಡೆಲ್ಲ್ ಪ್ರೀಮಿಯರ್ ಲೀಗ್ನಲ್ಲಿ ತನ್ನ ಅದ್ಭುತ ಪ್ರದರ್ಶನದಿಂದ ಗಮನ ಸೆಳೆದಿದ್ದಾರೆ. ಸೌತ್ ಡೆಲ್ಲಿ ಸೂಪರ್ಸ್ಟಾರ್ಅನ್ನು ಪ್ರತಿನಿಧಿಸಿದ್ದ ಪ್ರಿಯಾಂಶ್ ಒಂದೇ ಓವರ್ನಲ್ಲಿ 6 ಸಿಕ್ಸರ್ಗಳನ್ನು ಸಿಡಿಸಿದ್ದರು. ಈ ಋತುವಿನಲ್ಲಿ ಎರಡು ಶತಕಗಳನ್ನು(107 ಹಾಗೂ 120)ಗಳಿಸಿದ್ದರು.
ಐಪಿಎಲ್ಗಿಂತ ಮೊದಲು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಉತ್ತರಪ್ರದೇಶ ವಿರುದ್ಧ ದಿಲ್ಲಿ ಪರವಾಗಿ 43 ಎಸೆತಗಳಲ್ಲಿ 102 ರನ್ ಗಳಿಸಿದ್ದರು.
2001 ಜನವರಿಯಲ್ಲಿ ದಿಲ್ಲಿಯಲ್ಲಿ ಜನಿಸಿದ್ದ ಪ್ರಿಯಾಂಶ್ 2021ರಲ್ಲಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ದಿಲ್ಲಿ ಪರ ಚೊಚ್ಚಲ ಟಿ20 ಪಂದ್ಯ ಆಡಿದ್ದರು. 2023ರಲ್ಲಿ ಲಿಸ್ಟ್ ಎ ಕ್ರಿಕೆಟಿಗೆ ಕಾಲಿಟ್ಟಿದ್ದರು. ಅಂಡರ್-19 ಅಂತರ್ರಾಷ್ಟ್ರೀಯ ಟೂರ್ನಿಗಳಲ್ಲಿ ಭಾರತವನ್ನು ಪ್ರತಿನಿಧಿಸಿ ಯಶಸ್ವಿ ಜೈಸ್ವಾಲ್ ಹಾಗೂ ರವಿ ಬಿಷ್ಣೋಯಿ ಜೊತೆಗೆ ಆಡಿ ತನ್ನ ಸಾಮರ್ಥ್ಯ ಪ್ರದರ್ಶಿಸಿದ್ದರು.