ಐಪಿಎಲ್ ಫೈನಲ್ ಚೆನ್ನೈನಲ್ಲಿ | ಅಹ್ಮದಾಬಾದ್ ನಲ್ಲಿ ಎರಡು ಪ್ಲೇ-ಆಫ್ ಪಂದ್ಯಗಳು
ಎಮ್.ಎ. ಚಿದಂಬರಮ್ ಸ್ಟೇಡಿಯಮ್ | Photo: PTI
ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫೈನಲ್ ಪಂದ್ಯವು ಮೇ 26ರಂದು ಚೆನ್ನೈಯ ಎಮ್.ಎ. ಚಿದಂಬರಮ್ ಸ್ಟೇಡಿಯಮ್ ನಲ್ಲಿ ನಡೆಯಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಮೂಲಗಳು ತಿಳಿಸಿವೆ.
ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ಒಂದು ಕ್ವಾಲಿಫೈಯರ್ ಮತ್ತು ಒಂದು ಎಲಿಮಿನೇಟರ್ ಪಂದ್ಯಗಳು ನಡೆಯಲಿವೆ. ಇನ್ನೊಂದು ಕ್ವಾಲಿಫೈಯರ್ ಪಂದ್ಯವು ಚೆನ್ನೈನಲ್ಲಿ ನಡೆಯಲಿದೆ.
“ಕಳೆದ ವರ್ಷದ ಚಾಂಪಿಯನ್ ತಂಡದ ತವರು ಮೈದಾನದಲ್ಲಿ ಆರಂಭಿಕ ಮತ್ತು ಅಂತಿಮ ಪಂದ್ಯವನ್ನು ಏರ್ಪಡಿಸುವ ಸಂಪ್ರದಾಯವನ್ನು ಐಪಿಎಲ್ ಆಡಳಿತ ಮಂಡಳಿಯು ಅನುಸರಿಸುತ್ತಿದೆ. ಚೆನ್ನೈ ಸೂಪರ್ ಕಿಂಗ್ಸ್ ಕಳೆದ ವರ್ಷದ ಚಾಂಪಿಯನ್ ತಂಡವಾಗಿದೆ’’ ಹಿರಿಯ ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದರು.
ಮಹೇಂದ್ರ ಸಿಂಗ್ ಧೋನಿ ಈ ಬಾರಿ ತನ್ನ ಕೊನೆಯ ಐಪಿಎಲ್ ಋತುವಿನಲ್ಲಿ ಆಡುತ್ತಿದ್ದು, ಅವರ ಅಭಿಮಾನಿಗಳು ನಾಕೌಟ್ ಪಂದ್ಯಗಳನ್ನು ನೋಡಲು ಕಾತರಿಸುತ್ತಿದ್ದಾರೆ.
ಲೋಕಸಭಾ ಚುನಾವಣಾ ದಿನಾಂಕಗಳನ್ನು ಗಮನದಲ್ಲಿಟ್ಟುಕೊಂಡು, ಉಳಿದ ಐಪಿಎಲ್ ಪಂದ್ಯಗಳ ವೇಳಾಪಟ್ಟಿಯನ್ನು ಬಿಸಿಸಿಐ ಅಂತಿಮಗೊಳಿಸಿದೆ.