ಐಪಿಎಲ್ ಅದ್ದೂರಿ ಉದ್ಘಾಟನಾ ಸಮಾರಂಭ | ಪ್ರೇಕ್ಷಕರನ್ನು ರಂಜಿಸಿದ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ಎಆರ್ ರೆಹಮಾನ್
Photo: PTI
ಚೆನ್ನೈ : ಐಪಿಎಲ್ ಟಿ-20 ಕ್ರಿಕೆಟ್ ಟೂರ್ನಿಯ 17ನೇ ಆವೃತ್ತಿಯು ಶುಕ್ರವಾರ ಚೆನ್ನೈನಲ್ಲಿ ಆರಂಭವಾಗಿದೆ.
ಪಿ. ಚಿದಂಬರಂ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿರುವ ಅದ್ದೂರಿ ಉದ್ಘಾಟನಾ ಸಮಾರಂಭದ ಮೂಲಕ ಟೂರ್ನಿಗೆ ಚಾಲನೆ ನೀಡಲಾಯಿತು. ಪಂದ್ಯಕ್ಕೂ ಮುನ್ನ ನಡೆದ ಕಾರ್ಯಕ್ರಮದಲ್ಲಿ ಕಣ್ಣು ಕೋರೈಸುವ ಬೆಳಕಿನ ಚಿತ್ತಾರದ ನಡುವೆ ಸಿನಿಮಾ ರಂಗದ ತಾರೆಯರು ಹೆಜ್ಜೆ ಹಾಕಿದರು.
ಖ್ಯಾತ ನಟರಾದ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್ ಅವರು ಒಟ್ಟಿಗೆ ನೃತ್ಯ ಮಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.
ಸೂಪರ್ಸ್ಟಾರ್ ಅಕ್ಷಯ್ ಕುಮಾರ್ ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದುಕೊಂಡು ಕ್ರೀಡಾಂಗಣಕ್ಕೆ ಪ್ರವೇಶಿಸಿದರು. ಅಭಿಮಾನಿಗಳ ಜೋರಾದ ಕೇಕೆಯ ನಡುವೆ ಟೈಗರ್ ಶ್ರಾಫ್ ವೇದಿಕೆಯಲ್ಲಿ ಅಕ್ಷಯ್ರನ್ನು ಸೇರಿಕೊಂಡರು. ಟೈಗರ್ ಶ್ರಾಫ್ ಅವರು ಜೈ ಜೈ ಶಿವಶಂಕರ್ ಹಾಡಿಗೆ ಹೆಜ್ಜೆ ಹಾಕಿದರು.
ಹಿನ್ನೆಲೆ ಗಾಯಕ ಸೋನು ನಿಗಮ್ ರಾಷ್ಟ್ರೀಯ ಗೀತೆ ವಂದೇ ಮಾತರಂ ಹಾಡುವ ಮೂಲಕ ಕಾರ್ಯಕ್ರಮ ಆರಂಭಿಸಿದರು. ಸಂಗೀತ ನಿರ್ದೇಶಕ ಹಾಗೂ ಆಸ್ಕರ್ ಪ್ರಶಸ್ತಿ ವಿಜೇತ ಎ.ಆರ್.ರೆಹಮಾನ್ ಕೂಡ ವೇದಿಕೆಯಲ್ಲಿದ್ದರು.
30 ನಿಮಿಷಗಳ ಕಾಲ ನಡೆದ ಉದ್ಘಾಟನಾ ಸಮಾರಂಭದಲ್ಲಿ ದಿಗ್ಗಜ ಸಂಗೀತಗಾರ ಎ.ಆರ್. ರೆಹಮಾನ್, ಗಾಯಕ ಸೋನು ನಿಗಮ್ ಅವರು ಪ್ರದರ್ಶನ ನೀಡಿದರು.
ಚಿಪಾಕ್ ಸ್ಟೇಡಿಯಮ್ನಲ್ಲಿ ಪಟಾಕಿ ಸಿಡಿಸುವ ಮೂಲಕ ಬಾಲಿವುಡ್ ಪ್ರಮುಖರ ಮಾಂತ್ರಿಕ ಪ್ರದರ್ಶನ ಅಂತ್ಯಗೊಂಡಿತು.
ಗುಜರಾತ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಕಳೆದ ಬಾರಿಯ ಉದ್ಘಾಟನಾ ಸಮಾರಂಭದಲ್ಲಿ ನಟಿಯರಾದ ತಮ್ಮನ್ನಾ ಭಾಟಿಯಾ, ರಶ್ಮಿಕಾ ಮಂದಣ್ಣ ಹಾಗೂ ಗಾಯಕ ಅರ್ಜಿತ್ ಸಿಂಗ್ ಪ್ರದರ್ಶನ ನೀಡಿದ್ದರು.