ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ ಸ್ಪೋಟಕ ಅರ್ಧಶತಕ | ಸನ್ರೈಸರ್ಸ್ಗೆ ಸುಲಭ ತುತ್ತಾದ ಲಕ್ನೊ ಸೂಪರ್ ಜೈಂಟ್ಸ್
9.4 ಓವರ್ ಗಳಲ್ಲಿ ಗುರಿ ತಲುಪಿದ ಹೈದರಾಬಾದ್
Photo : x/@IPL
ಹೈದರಾಬಾದ್ : ಆರಂಭಿಕ ಆಟಗಾರರಾದ ಟ್ರಾವಿಸ್ ಹೆಡ್(ಔಟಾಗದೆ 89, 30 ಎಸೆತ, 8 ಬೌಂಡರಿ,8 ಸಿಕ್ಸರ್) ಹಾಗೂ ಅಭಿಷೇಕ್ ಶರ್ಮಾರ(ಔಟಾಗದೆ 75, 28 ಎಸೆತ, 8 ಬೌಂಡರಿ, 6 ಸಿಕ್ಸರ್) ಭರ್ಜರಿ ಜೊತೆಯಾಟದ ನೆರವಿನಿಂದ ಸನ್ರೈಸರ್ಸ್ ಹೈದರಾಬಾದ್ ತಂಡ ಲಕ್ನೊ ಸೂಪರ್ ಜೈಂಟ್ಸ್ ತಂಡದ ವಿರುದ್ಧ 10 ವಿಕೆಟ್ಗಳ ಅಂತರದಿಂದ ಸುಲಭ ಜಯ ದಾಖಲಿಸಿದೆ.
ಬುಧವಾರ ನಡೆದ ಐಪಿಎಲ್ನ 57ನೇ ಪಂದ್ಯದಲ್ಲಿ ಟಾಸ್ ಜಯಿಸಿದ ಲಕ್ನೊ ನಾಯಕ ಕೆ.ಎಲ್.ರಾಹುಲ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಆಯುಷ್ ಬದೋನಿ(ಔಟಾಗದೆ 55, 30 ಎಸೆತ) ಹಾಗೂ ನಿಕೊಲಸ್ ಪೂರನ್(ಔಟಾಗದೆ 48, 26 ಎಸೆತ) ಸಾಂದರ್ಭಿಕ ಬ್ಯಾಟಿಂಗ್ ನೆರವಿನಿಂದ ಲಕ್ನೊ ತಂಡ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ಗಳ ನಷ್ಟಕ್ಕೆ 165 ರನ್ ಗಳಿಸಿತು.
ಗೆಲ್ಲಲು 166 ರನ್ ಗುರಿ ಪಡೆದ ಸನ್ರೈಸರ್ಸ್ ತಂಡ 9.4 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 167 ರನ್ ಗಳಿಸಿತು. ಇನ್ನೂ 62 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ದಡ ಸೇರಿರುವ ಸನ್ರೈಸರ್ಸ್ 12 ಪಂದ್ಯಗಳಲ್ಲಿ 7ನೇ ಜಯ ದಾಖಲಿಸಿ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ.
ಇದಕ್ಕೂ ಮೊದಲು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಲಕ್ನೊ ತಂಡ 11.2 ಓವರ್ಗಳಲ್ಲಿ 66 ರನ್ಗೆ 4 ವಿಕೆಟ್ಗಳನ್ನು ಕಳೆದುಕೊಂಡು ಪರದಾಟ ನಡೆಸುತ್ತಿತ್ತು. ಆಗ 5ನೇ ವಿಕೆಟ್ಗೆ ಮುರಿಯದ ಜೊತೆಯಾಟದಲ್ಲಿ 52 ಎಸೆತಗಳಲ್ಲಿ 99 ರನ್ ಸೇರಿಸಿದ ಬದೋನಿ ಹಾಗೂ ಪೂರನ್ ಲಕ್ನೊ ತಂಡ ಗೌರವಾರ್ಹ ಮೊತ್ತ ಗಳಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.
ಪವರ್ ಪ್ಲೇ ಅಂತ್ಯದಲ್ಲಿ ಲಕ್ನೊ ತಂಡ 27 ರನ್ಗೆ 2 ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಕ್ವಿಂಟನ್ ಡಿಕಾಕ್(2 ರನ್)ಭುವನೇಶ್ವರ ಕುಮಾರ್ ಎಸೆದ ಇನಿಂಗ್ಸ್ನ 3ನೇ ಓವರ್ನಲ್ಲಿ ನಿತಿಶ್ ಕುಮಾರ್ ರೆಡ್ಡಿ ಪಡೆದ ಚಾಣಾಕ್ಷತನದ ಕ್ಯಾಚ್ಗೆ ವಿಕೆಟ್ ಒಪ್ಪಿಸಿದರು. ಭುವನೇಶ್ವರ್ 5ನೇ ಓವರ್ನಲ್ಲಿ ಅಪಾಯಕಾರಿ ಆಟಗಾರ ಮಾರ್ಕಸ್ ಸ್ಟೋಯಿನಿಸ್ (3 ರನ್)ವಿಕೆಟನ್ನು ಪಡೆದು ಲಕ್ನೊಗೆ ಮತ್ತೊಂದು ಆಘಾತ ನೀಡಿದರು.
ಯುವ ಆಟಗಾರ ಸನ್ವೀರ್ ಸಿಂಗ್ ಮಿಡ್ ಆನ್ನಲ್ಲಿ ಅದ್ಭುತ ಡೈವಿಂಗ್ ಕ್ಯಾಚ್ ಮೂಲಕ ಸ್ಟೋಯಿನಿಸ್ರನ್ನು ಪೆವಿಲಿಯನ್ಗೆ ಕಳುಹಿಸಿದರು. ನಾಯಕ ರಾಹುಲ್(29 ರನ್) ಹಾಗೂ ಆಲ್ರೌಂಡರ್ ಕೃನಾಲ್ ಪಾಂಡ್ಯ(24 ರನ್)ತಂಡವನ್ನು ಆಧರಿಸಲು ಯತ್ನಿಸಿದರು. ರಾಹುಲ್ ಹೈದರಾಬಾದ್ ನಾಯಕ ಕಮಿನ್ಸ್ಗೆ ವಿಕೆಟ್ ಒಪ್ಪಿಸಿದರು.
ಆಯುಷ್ ಬದೋನಿ 30 ಎಸೆತಗಳಲ್ಲಿ 9 ಬೌಂಡರಿಗಳ ನೆರವಿನಿಂದ ಔಟಾಗದೆ 55 ರನ್ ಗಳಿಸಿದರೆ, ನಿಕೊಲಸ್ ಪೂರನ್ 26 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಔಟಾಗದೆ 48 ರನ್ ಸಿಡಿಸಿದರು. ಬಲಗೈ ಬ್ಯಾಟರ್ ಬದೋನಿ ಕೇವಲ 28 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
ಭುವನೇಶ್ವರ ಕುಮಾರ್(2-12)ಯಶಸ್ವಿ ಪ್ರದರ್ಶನ ನೀಡಿದರು. ನಾಯಕ ಪ್ಯಾಟ್ ಕಮಿನ್ಸ್(1-47) ಒಂದು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ಲಕ್ನೊ ಸೂಪರ್ ಜೈಂಟ್ಸ್: 20 ಓವರ್ಗಳಲ್ಲಿ 165/4
(ಆಯುಷ್ ಬದೋನಿ ಔಟಾಗದೆ 55, ನಿಕೊಲಸ್ ಪೂರನ್ ಔಟಾಗದೆ 48, ಕೆ.ಎಲ್.ರಾಹುಲ್ 29, ಕೃನಾಲ್ ಪಾಂಡ್ಯ 24, ಭುವನೇಶ್ವರ ಕುಮಾರ್ 2-12)
ಸನ್ರೈಸರ್ಸ್ ಹೈದರಾಬಾದ್: 9.4 ಓವರ್ಗಳಲ್ಲಿ 167/0
(ಟ್ರಾವಿಸ್ ಹೆಡ್ ಔಟಾಗದೆ 89, ಅಭಿಷೇಕ್ ಶರ್ಮಾ ಔಟಾಗದೆ 75)