ಐಪಿಎಲ್ | ಒಂದೇ ತಂಡದ ಪರ 250 ಸಿಕ್ಸರ್ ಸಿಡಿಸಿದ ಮೊದಲ ಬ್ಯಾಟರ್ ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ | PC : X \ @IPL
ಕೋಲ್ಕತಾ: ವಿರಾಟ್ ಕೊಹ್ಲಿ ಐಪಿಎಲ್ ನಲ್ಲಿ ಈಗಾಗಲೇ ಸಾಕಷ್ಟು ದಾಖಲೆಗಳನ್ನು ನಿರ್ಮಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ತಮ್ಮ ಯಶಸ್ವಿ ವೃತ್ತಿಜೀವನದಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ್ದಾರೆ.
2008ರಲ್ಲಿ ಐಪಿಎಲ್ ಆರಂಭವಾದಾಗಿನಿಂದ ಆರ್ ಸಿ ಬಿ ತಂಡವನ್ನು ಪ್ರತಿನಿಧಿಸುತ್ತಿರುವ ಕೊಹ್ಲಿ ಐಪಿಎಲ್ ನಲ್ಲಿ ಒಂದೇ ತಂಡದ ಪರ 250 ಸಿಕ್ಸರ್ಗಳನ್ನು ಸಿಡಿಸಿದ ಮೊದಲ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ.
ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 7 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ ಒಂದು ಬೌಂಡರಿ ಸಹಿತ 18 ರನ್ ಗಳಿಸುವ ಹಾದಿಯಲ್ಲಿ ಕೊಹ್ಲಿ ಈ ಮೈಲಿಗಲ್ಲು ತಲುಪಿದ್ದಾರೆ.
ಕೊಹ್ಲಿಯ ಬಳಿಕ ಕ್ರಿಸ್ ಗೇಲ್ ಆರ್ ಸಿ ಬಿ ಪರ 239 ಸಿಕ್ಸರ್ ಸಿಡಿಸಿದ್ದಾರೆ. ಎಬಿ ಡಿವಿಲಿಯರ್ಸ್ ಐಪಿಎಲ್ ನಲ್ಲಿ ಆರ್ ಸಿ ಬಿ ಪರವಾಗಿ 238 ಸಿಕ್ಸರ್ಗಳನ್ನು ಬಾರಿಸಿದ್ದಾರೆ.
ಕೊಹ್ಲಿ ಐಪಿಎಲ್ ನಲ್ಲಿ 250 ಸಿಕ್ಸರ್ಗಳನ್ನು ಸಿಡಿಸಿದ ನಾಲ್ಕನೇ ಬ್ಯಾಟರ್ ಹಾಗೂ ಭಾರತದ ಎರಡನೇ ಆಟಗಾರನಾಗಿದ್ದಾರೆ. ಗೇಲ್ ಐಪಿಎಲ್ ನಲ್ಲಿ 357 ಸಿಕ್ಸರ್ಗಳನ್ನು ಸಿಡಿಸಿದರೆ, ರೋಹಿತ್ ಶರ್ಮಾ(275 ಸಿಕ್ಸರ್), ಡಿ ವಿಲಿಯರ್ಸ್(251) ಪಟ್ಟಿಯಲ್ಲಿ 2ನೇ ಹಾಗೂ 3ನೇ ಸ್ಥಾನದಲ್ಲಿದ್ದಾರೆ.
ಟಿ20 ಕ್ರಿಕೆಟ್ ನಲ್ಲಿ ಒಂದೇ ತಂಡದ ಪರ ಗರಿಷ್ಠ ಸಿಕ್ಸರ್ ಸಿಡಿಸಿದವರ ಪೈಕಿ ಅಗ್ರ ಸ್ಥಾನವನ್ನು ಪಡೆದಿರುವ ಕೊಹ್ಲಿ ಅವರು ಗೇಲ್ ರನ್ನು ಹಿಂದಿಕ್ಕಿದ್ದಾರೆ. ಗೇಲ್ ಟಿ20 ಕ್ರಿಕೆಟ್ ನಲ್ಲಿ ಒಂದೇ ತಂಡದ ಪರ 263 ಸಿಕ್ಸರ್ಗಳನ್ನು ಸಿಡಿಸಿದ ದಾಖಲೆ ಹೊಂದಿದ್ದಾರೆ. ಚಾಂಪಿಯನ್ಸ್ ಲೀಗ್ ಸಹಿತ ಆರ್ ಸಿ ಬಿ ಪರ ಆಡಿರುವ ವಿವಿಧ ಟೂರ್ನಿಗಳಲ್ಲಿ ಗೇಲ್ ಈ ಸಾಧನೆ ಮಾಡಿದ್ದಾರೆ. ಕೆಕೆಆರ್ ವಿರುದ್ಧ ಎರಡು ಸಿಕ್ಸರ್ಗಳನ್ನು ಸಿಡಿಸಿದ ಕೊಹ್ಲಿ ಅವರು ಗೇಲ್ರನ್ನು ಹಿಂದಿಕ್ಕಿದರು.