ಒಂಟಿ ರನ್ ಗೆ ಮನಸು ಮಾಡದ ಧೋನಿಗೆ ಇರ್ಫಾನ್ ಪಠಾಣ್ ಟೀಕೆ
ಧೋನಿ | PC : PTI
ಮುಂಬೈ: ಪಂಜಾಬ್ ಕಿಂಗ್ಸ್ ವಿರುದ್ಧದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದಲ್ಲಿ ಬುಧವಾರ ಚೆನ್ನೈ ಸೂಪರ್ ಕಿಂಗ್ಸ್ನ ಮಹೇಂದ್ರ ಸಿಂಗ್ ಧೋನಿ ಕಿರು ಅವಧಿಯ ಹೊಡೆತಗಳ ಮೂಲಕ ತನ್ನ ಅಭಿಮಾನಿಗಳನ್ನು ರಂಜಿಸಿದರು.
ಇನಿಂಗ್ಸ್ನ ಕೊನೆಯಲ್ಲಿ, 11 ಎಸೆತಗಳನ್ನು ಎದುರಿಸಿದ ಅವರು, ರನೌಟ್ ಆಗುವ ಮುನ್ನ ಒಂದು ಬೌಂಡರಿ ಮತ್ತು ಒಂದು ಸಿಕ್ಸರ್ ಸಿಡಿಸಿದರು. ಆದರೆ, ಈ ಅವಧಿಯಲ್ಲಿ ಧೋನಿ ಒಂಟಿ ಮತ್ತು ಅವಳಿ ರನ್ಗಳಿಗಾಗಿ ಓಡಲು ನಿರಾಕರಿಸಿದರು. ಈ ಸಂದರ್ಭದಲ್ಲಿ ಕ್ರೀಸ್ನ ಇನ್ನೊಂದು ಬದಿಯಲ್ಲಿ ಇದ್ದವರು ನ್ಯೂಝಿಲ್ಯಾಂಡ್ನ ಹೊಡಿಬಡಿ ದಾಂಡಿಗ ಡ್ಯಾರಿಲ್ ಮಿಚೆಲ್.
ಧೋನಿಯ ಈ ವರ್ತನೆಗೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಸಿಡಿಮಿಡಿಗುಟ್ಟಿದ್ದಾರೆ. ತಂಡ ಆಟವೊಂದರಲ್ಲಿ ಯಾರೂ ಹೀಗೆ ಮಾಡಬಾರದು ಎಂದು ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕನನ್ನು ಒತ್ತಾಯಿಸಿದ್ದಾರೆ.
ಸುಲಭದ ಒಂಟಿ ರನ್ ಎಂದು ಭಾವಿಸಿದ ಮಿಚೆಲ್ ನಾನ್-ಸ್ಟ್ರೈಕರ್ ತುದಿಯಿಂದ ಪಿಚ್ನ ಇನ್ನೊಂದು ತುದಿಗೆ ಓಡಿದ್ದರು. ಅವರು ಸ್ಟ್ರೈಕರ್ ತುದಿಯತ್ತ ಧಾವಿಸಿದ್ದರು. ಆದರೆ, ಧೋನಿ ಆ ಒಂಟಿ ರನ್ಗೆ ಮನ ಮಾಡದ ಹಿನ್ನೆಲೆಯಲ್ಲಿ ಅವರು ನಾನ್ಸ್ಟ್ರೈಕರ್ ತುದಿಗೆ ಹಿಂದಿರುಗಬೇಕಾಯಿತು.
ಒಂದು ರೀತಿಯಲ್ಲಿ, ಮಿಚೆಲ್ ಅವಳಿ ರನ್ಗಳನ್ನು ಓಡಿದ ಹಾಗಾಯಿತು. ಇದು ಹಲವರ ಅಚ್ಚರಿಗೆ ಕಾರಣವಾಯಿತು. ಯಾಕೆಂದರೆ, ಮಿಚೆಲ್ ಇನಿಂಗ್ಸ್ನ ಕೊನೆಯ ಎಸೆತಗಳನ್ನು ಹೇಗೆ ಎದುರಿಸಬೇಕು ಎನ್ನುವುದು ಗೊತ್ತಿರದ ಬಾಲಂಗೋಚಿಯೇನೂ ಆಗಿರಲಿಲ್ಲ.
“ಎಮ್.ಎಸ್. ಧೋನಿಗೆ ಬೃಹತ್ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಹಾಗಾಗಿ, ಅವರ ಸಿಕ್ಸ್ ಬಗ್ಗೆ ರೋಮಾಂಚನ ಇದ್ದೇ ಇರುತ್ತದೆ. ಅಭಿಮಾನಿಗಳು ಅವರನ್ನು ತುಂಬಾ ಪ್ರೀತಿಸುತ್ತಾರೆ. ಆದರೆ, ಪಂಜಾಬ್ ಕಿಂಗ್ಸ್ ವಿರುದ್ಧದ ಅವರ ಇನಿಂಗ್ಸ್ ಆ ಮಟ್ಟಕ್ಕೆ ಏರುವುದಿಲ್ಲ. ಅವರಿಂದ ಅದಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸಲಾಗಿತ್ತು'' ಎಂದು 'ಸ್ಟಾರ್ ಸ್ಪೋರ್ಟ್'ನಲ್ಲಿ ಮಾತನಾಡಿದ ಇರ್ಫಾನ್ ಹೇಳಿದರು.
“ಆ ಒಂಟಿ ರನ್ನನ್ನು ಅವರು ನಿರಾಕರಿಸಬಾರದಾಗಿತ್ತು. ಇದು ತಂಡ ಆಟ. ತಂಡ ಆಟವೊಂದರಲ್ಲಿ ಹಾಗೆ ಮಾಡಬೇಡಿ. ಪಿಚ್ನ ಇನ್ನೊಂದು ತುದಿಯಲ್ಲಿರುವ ಆಟಗಾರನೂ ಓರ್ವ ಅಂತರ್ರಾಷ್ಟ್ರೀಯ ಆಟಗಾರನೇ. ಅವರೊಬ್ಬ ಬೌಲರ್ ಆಗಿದ್ದರೆ, ನಾನು ಅದನ್ನು ಖಂಡಿತವಾಗಿಯೂ ಅರ್ಥ ಮಾಡಿಕೊಳ್ಳಬಲ್ಲೆ. ನೀವು ರವೀಂದ್ರ ಜಡೇಜ ಜೊತೆಗೂ ಹೀಗೆ ಮಾಡಿದ್ದೀರಿ. ನೀವು ಹೀಗೆ ಮಾಡಬೇಕಾಗಿಲ್ಲ'' ಎಂದು ಪಠಾಣ್ ಹೇಳಿದರು.