ಟಿ20 ವಿಶ್ಷಕಪ್ ಗೆ ಐಸಿಸ್ ಬೆದರಿಕೆ | ನ್ಯೂಯಾರ್ಕ್ ಮೈದಾನದಲ್ಲಿ ಶಾರ್ಪ್ ಶೂಟರ್ ಗಳ ನಿಯೋಜನೆ
PC : NDTV
ನ್ಯೂಯಾರ್ಕ್ : ಟಿ20 ವಿಶ್ವಕಪ್ ನ ಪಂದ್ಯಗಳು ನಡೆಯುವ ನ್ಯೂಯಾರ್ಕ್ ನ ನಸೋ ಕೌಂಟಿ ಇಂಟರ್ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಮ್ ನ ಭದ್ರತೆಯನ್ನು ಹೆಚ್ಚಿಸಲಾಗಿದೆ. ಈ ಮೈದಾನದಲ್ಲಿ ಮೊದಲ ಅಂತರರಾಷ್ಟ್ರೀಯ ಪಂದ್ಯವು ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕ ತಂಡಗಳ ನಡುವೆ ಸೋಮವಾರ ನಡೆಯುತ್ತಿದೆ. ಈ ಮೈದಾನದ ಸುತ್ತಲಿನ ರಹಸ್ಯ ಸ್ಥಳಗಳಲ್ಲಿ ಬಂದೂಕುಧಾರಿ (ಸ್ನೈಪರ್)ಗಳನ್ನು ನಿಯೋಜಿಸಲು ಪೊಲೀಸರು ನಿರ್ಧರಿಸಿದ್ದಾರೆ.
ಲಾಂಗ್ ಐಲ್ಯಾಂಡ್ ಮೈದಾನದಲ್ಲಿ ಜೂನ್ 3ರಿಂದ 12ರವರೆಗೆ ನಡೆಯಲಿರುವ ಪಂದ್ಯಗಳು ಯಾವುದೇ ಅನುಚಿತ ಘಟನೆಗಳಿಲ್ಲದೆ ಸಾಗುವಂತೆ ನೋಡಿಕೊಳ್ಳಲು ನಸೋ ಕೌಂಟಿ ಪೊಲೀಸ್ ಇಲಾಖೆಯು ಬೃಹತ್ ಬಂದೋಬಸ್ತ್ ಏರ್ಪಡಿಸಿದೆ ಎಂದು ಬಿಬಿಸಿ ವರದಿ ಮಾಡಿದೆ.
ಈ ಮೈದಾನದಲ್ಲಿ ಈ ಪಂದ್ಯಾವಳಿಯ 8 ಪಂದ್ಯಗಳು ನಡೆಯಲಿವೆ. ಆ ಪೈಕಿ ಜೂನ್ 9ರಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವೂ ಒಂದು.
ಐಸಿಸ್ ಪರವಾಗಿರುವ ಗುಂಪೊಂದರಿಂದ ಬಂದಿರುವ ಬೆದರಿಕೆಗಳ ಹಿನ್ನೆಲೆಯಲ್ಲಿ, ಶಾರ್ಪ್ ಶೂಟರ್ ಗಳನ್ನೊಳಗೊಂಡ ‘ಸ್ವಾತ್’ ತಂಡಗಳನ್ನು ನಿಯೋಜಿಸಲಾಗುತ್ತಿದೆ.
ಮೈದಾನದ ಒಳಗೆ ಮಫ್ತಿಯಲ್ಲಿರುವ ಪೊಲೀಸರನ್ನೂ ನಿಯೋಜಿಸಲಾಗುತ್ತದೆ.
ಪಂದ್ಯಾವಳಿಗೆ ಪೂರ್ವಭಾವಿಯಾಗಿ, ನಸೋ ಪೊಲೀಸ್ ಪಡೆಯು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್ಬಿಐ), ಹೋಮ್ಲ್ಯಾಂಡ್ ಸೆಕ್ಯುರಿಟಿ, ನ್ಯೂಯಾರ್ಕ್ ಪೊಲೀಸ್ ಇಲಾಖೆ ಮತ್ತು ಇತರ ಪಡೆಗಳ ಜೊತೆಗೆ ಕೈಜೋಡಿಸಿದೆ.
‘‘ಪಂದ್ಯಗಳಲ್ಲಿ ಇರುವ ಪ್ರತಿಯೊಬ್ಬರ ರಕ್ಷಣೆ ಮತ್ತು ಭದ್ರತೆ ನಮ್ಮ ಮೊದಲ ಆದ್ಯತೆಯಾಗಿದೆ. ಹಾಗಾಗಿ, ಸಮಗ್ರ ಮತ್ತು ಸದೃಢ ಭದ್ರತಾ ವ್ಯವಸ್ಥೆಯನ್ನು ಜಾರಿಗೊಳಿಸಿದ್ದೇವೆ’’ ಎಂದು ಐಸಿಸಿ ತಿಳಿಸಿದೆ.
ಜೂನ್ 4 ರಂದು ಲೋಕಸಭಾ ಚುನಾವಣೆಯ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಗಾಗಿ varthabharati.in ನೋಡ್ತಾ ಇರಿ.