ಈ ಕಳಂಕ ಜೀವನಪರ್ಯಂತ: ಜೊಹಾನ್ ಬೋಥ
ಮ್ಯಾಥ್ಯೂ ಕಹ್ನೆಮನ್ ವಿರುದ್ಧ ಸಂಶಯಾಸ್ಪದ ಬೌಲಿಂಗ್ ಶೈಲಿ ಆರೋಪ
ಜೊಹಾನ್ ಬೋಥ - Photo - AFP
ದುಬೈ: ಸಂಶಯಾಸ್ಪದ ಬೌಲಿಂಗ್ ಶೈಲಿಗಾಗಿ ಪರೀಕ್ಷೆಗೆ ಶಿಫಾರಸು ಮಾಡಲ್ಪಟ್ಟಿರುವ ಆಸ್ಟ್ರೇಲಿಯದ ಸ್ಪಿನ್ನರ್ ಮ್ಯಾಥ್ಯೂ ಕಹ್ನೆಮನ್ ಈ ಕಳಂಕವನ್ನು ಜೀವನಪರ್ಯಂತ ಹೊರಲಿದ್ದಾರೆ ಎಂದು ದಕ್ಷಿಣ ಆಫ್ರಿಕ ಕ್ರಿಕೆಟ್ ತಂಡದ ಮಾಜಿ ಆಫ್ಸ್ಪಿನ್ನರ್ ಹಾಗೂ ಕ್ವೀನ್ಸ್ಲ್ಯಾಂಡ್ ಮತ್ತು ಬ್ರಿಸ್ಬೇನ್ ಹೀಟ್ ತಂಡದ ಹಾಲಿ ಕೋಚ್ ಜೊಹಾನ್ ಬೋಥ ಹೇಳಿದ್ದಾರೆ.
ಬೋಥ ಉಸ್ತುವಾರಿಯ ಕ್ವೀನ್ಸ್ಲ್ಯಾಂಡ್ ಮತ್ತು ಬ್ರಿಸ್ಬೇನ್ ಹೀಟ್ ತಂಡದಲ್ಲಿ ಕಹ್ನೆಮನ್ ಆಡುತ್ತಿದ್ದಾರೆ.
ಇತ್ತೀಚೆಗೆ ಶ್ರೀಲಂಕಾದ ಗಾಲೆಯಲ್ಲಿ ನಡೆದ ಆತಿಥೇಯ ದೇಶದ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿನ ಕಹ್ನೆಮನ್ರ ಬೌಲಿಂಗ್ ಶೈಲಿಯನ್ನು ‘ಸಂಶಯಾಸ್ಪದ’ ಎಂಬುದಾಗಿ ಪಂದ್ಯದ ಅಧಿಕಾರಿಗಳು ವರದಿ ಮಾಡಿದ್ದಾರೆ.
ಈ ಆರೋಪದಿಂದ ಪರಿಶುದ್ಧರಾಗಿ ಹೊರಬರುವುದು ಕಹ್ನೆಮನ್ರಿಗೆ ಸುದೀರ್ಘ ದಾರಿಯಾಗಲಿದೆ; ಒಂದು ವೇಳೆ ಅವರು ತನ್ನ ವಿರುದ್ಧದ ಆರೋಪದಿಂದ ಮುಕ್ತರಾದರೂ ಆ ಕಳಂಕ ಅವರಿಗೆ ಯಾವತ್ತೂ ಅಂಟಿಕೊಂಡೇ ಇರುತ್ತದೆ ಎಂದು ಬೋಥ ಅಭಿಪ್ರಾಯಪಟ್ಟಿದ್ದಾರೆ.
‘‘ಅದೊಂದು ಸುದೀರ್ಘ ಪ್ರಕ್ರಿಯೆ. ದುರದೃಷ್ಟವಶಾತ್, ಅವರು ಆರೋಪದಿಂದ ಮುಕ್ತರಾದರೂ, ಆಗದಿದ್ದರೂ ಆ ಕಳಂಕ ಇದ್ದೇ ಇರುತ್ತದೆ. ಇದು ಒಮ್ಮೆ ಬಂದು ಹೋಗುವ ಆರೋಪ, ಅದರಿಂದ ಹೊರಬರುತ್ತೇವೆ ಎಂದು ಆಟಗಾರರು ಭಾವಿಸುತ್ತಾರೆ. ಆದರೆ, ಅದು ಹಾಗಿಲ್ಲ. ಅದೊಂದು ಸುದೀರ್ಘ ಪ್ರಕ್ರಿಯೆ. ಪರೀಕ್ಷೆಯ ವೇಳೆ, ಅವರು ಟೆಸ್ಟ್ ಪಂದ್ಯದಲ್ಲಿ ಮಾಡಿದಂತೆ ಅದೇ ವೇಗದಲ್ಲಿ ಮತ್ತು ಅದೇ ತಿರುಗುವಿಕೆಯಲ್ಲಿ ಬೌಲ್ ಮಾಡಬೇಕಾಗುತ್ತದೆ. ಯಾವುದನ್ನೂ ಬದಲಾಯಿಸುವಂತಿಲ್ಲ’’ ಎಂದು ಅವರು ಹೇಳಿದರು.
ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ನ ಕೊನೆಯ ಅವಧಿಯಲ್ಲಿನ ಅವರ ಸಂಶಯಾಸ್ಪದ ಅಕ್ರಮ ಬೌಲಿಂಗ್ ಶೈಲಿಗೆ ಬಳಲಿಕೆ ಕಾರಣವಾಗಿರಬಹುದು ಎಂದು ಬೋಥ ಅಭಿಪ್ರಾಯಪಟ್ಟರು.