ಟಿ-20 ಪಂದ್ಯ: ಕೇವಲ 7 ರನ್ ಗೆ ಆಲೌಟಾದ ಐವರಿ ಕೋಸ್ಟ್; ನೈಜೀರಿಯ ವಿಶ್ವದಾಖಲೆ
Photo credit: ICC
ಹೊಸದಿಲ್ಲಿ: ಟಿ-20 ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಐವರಿ ಕೋಸ್ಟ್ ತಂಡವನ್ನು ಕೇವಲ 7 ರನ್ ಗೆ ಆಲೌಟ್ ಮಾಡಿರುವ ನೈಜೀರಿಯ ತಂಡವು, ವಿಶ್ವ ದಾಖಲೆ ನಿರ್ಮಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನೈಜೀರಿಯ ತಂಡ, ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 271 ರನ್ ಗಳ ಬೃಹತ್ ಮೊತ್ತ ಕಲೆ ಹಾಕಿತು. ನೈಜೀರಿಯ ತಂಡದ ಪರ ಸಲೀಂ ಕೇವಲ 53 ಎಸೆತಗಳಲ್ಲಿ 112 ರನ್ ಸಿಡಿಸಿದರೆ, ಐಸಾಕ್ ಒಕ್ಪೆ 23 ಎಸೆತಗಳಲ್ಲಿ 63 ರನ್ ಹಾಗೂ ಸುಲೈಮಾನ್ 50 ರನ್ ಪೇರಿಸಿದರು.
ಈ ಬೃಹತ್ ಗುರಿಯ ಬೆನ್ನತ್ತಿದ ಐವರಿ ಕೋಸ್ಟ್ ತಂಡ 7.3 ಓವರ್ ಗಳಲ್ಲಿ ಕೇವಲ 7 ರನ್ ಗಳಿಸಿ ಆಲೌಟಾಯಿತು. ತಂಡದ ಏಳು ಬ್ಯಾಟರ್ ಗಳು ಶೂನ್ಯ ಸಂಪಾದನೆ ಮಾಡಿದರು. ಆರಂಭಿಕ ಬ್ಯಾಟರ್ ಮೊಹಮ್ಮದ್ (4), ಇಬ್ರಾಹಿಂ (1) ಹಾಗೂ ಅಲೆಕ್ಸಿ (1) ಮಾತ್ರ ರನ್ ಗಳಿಸಲು ಶಕ್ತರಾದರು.
ಈ ಪಂದ್ಯದಲ್ಲಿ 264 ರನ್ ಗಳ ಭರ್ಜರಿ ಗೆಲುವು ಸಾಧಿಸಿದ ನೈಜೀರಿಯ ತಂಡ, ಟಿ-20 ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳ ಅಂತರದಿಂದ ಗೆಲುವು ಸಾಧಿಸಿದ ತಂಡಗಳ ಪಟ್ಟಿಯಲ್ಲಿ ಮೂರನೆ ಸ್ಥಾನಕ್ಕೇರಿತು.
ಈ ಹಿಂದೆ, ಮುಂಗೋಲಿಯ ತಂಡ 10 ರನ್ ಗಳಿಗೆ ಆಲೌಟಾಗಿತ್ತು.