ಜೈಸ್ವಾಲ್, ಕೊಹ್ಲಿ ಶತಕ | ಆಸ್ಟ್ರೇಲಿಯ 2ನೇ ಇನಿಂಗ್ಸ್ನಲ್ಲಿ 3-12
ಬೃಹತ್ ಗೆಲುವಿನತ್ತ ಭಾರತ
ಕೊಹ್ಲಿ , ಜೈಸ್ವಾಲ್ | PC : PTI
ಪರ್ತ್ : ಬಾರ್ಡರ್-ಗವಾಸ್ಕರ್ ಟ್ರೋಫಿ ಪಂದ್ಯಾವಳಿಯ ಮೊದಲ ಟೆಸ್ಟ್ನ ಮೂರನೇ ದಿನದಾಟದ ಮುಕ್ತಾಯಕ್ಕೆ ಭಾರತವು ಪಂದ್ಯದ ಮೇಲೆ ಸಂಪೂರ್ಣ ನಿಯಂತ್ರಣ ಗಳಿಸಿದೆ. ಪ್ರವಾಸಿ ತಂಡವು ಆತಿಥೇಯ ತಂಡದ ಗೆಲುವಿಗೆ 534 ರನ್ ಗಳ ಬೃಹತ್ ಗುರಿಯನ್ನು ನೀಡಿದ್ದಲ್ಲದೆ, ಅದರ ಎರಡನೇ ಇನಿಂಗ್ಸನ್ನು ಮೂರು ವಿಕೆಟ್ಗಳ ನಷ್ಟಕ್ಕೆ 12ಕ್ಕೆ ನಿಯಂತ್ರಿಸಿದೆ.
ಇದರೊಂದಿಗೆ ಆಸ್ಟ್ರೇಲಿಯವು ಬೃಹತ್ ಸೋಲೊಂದನ್ನು ಎದುರು ನೋಡುತ್ತಿದೆ.
ಯಶಸ್ವಿ ಜೈಸ್ವಾಲ್ (161) ಮತ್ತು ವಿರಾಟ್ ಕೊಹ್ಲಿ (100 ಅಜೇಯ) ಭಾರತೀಯ ಪ್ರತಿಹೋರಾಟದ ನೇತೃತ್ವ ವಹಿಸಿ ಭಾರತವನ್ನು ಪ್ರಬಲ ಸ್ಥಿತಿಯಲ್ಲಿ ತಂದು ನಿಲ್ಲಿಸಿದರು.
ಮೂರನೇ ದಿನದಾಟದ ಕೊನೆಯ ಎಸೆತದಲ್ಲಿ, ಮಾರ್ನಸ್ ಲಾಬುಶಾನ್ (3) ಜಸ್ಪ್ರೀತ್ ಬುಮ್ರಾ ಎಸೆತಕ್ಕೆ ಬಲಿಯಾದರು. ಉಸ್ಮಾನ್ ಖವಾಜ ಕ್ರೀಸ್ನಲ್ಲಿದ್ದರು. ಆಸ್ಟ್ರೇಲಿಯ ಈಗ 522 ರನ್ಗಳ ಹಿನ್ನಡೆಯಲ್ಲಿದೆ.
ಆಸ್ಟ್ರೇಲಿಯದ ಎರಡನೇ ಇನಿಂಗ್ಸ್ನಲ್ಲಿ, ಭಾರತ ತಂಡದ ನಾಯಕ ಬುಮ್ರಾ, ಲಾಬುಶಾನ್ ಅಲ್ಲದೆ ನತಾನ್ ಮೆಕ್ಸ್ವೀನಿ (0) ವಿಕೆಟನ್ನೂ ಉರುಳಿಸಿ ದೊಡ್ಡ ಹೊಡೆತ ನೀಡಿದರು. ನೈಟ್ ವಾಚ್ಮನ್ ಆಗಿ ಕ್ರೀಸ್ಗಿಳಿದ ನಾಯಕ ಪ್ಯಾಟ್ ಕಮಿನ್ಸ್ (2)ರನ್ನು ಮುಹಮ್ಮದ್ ಸಿರಾಜ್ ಬೇಗನೇ ಪೆವಿಲಿಯನ್ಗೆ ಕಳುಹಿಸಿದರು.
ಇದಕ್ಕೂ ಮೊದಲು, ಯಾವುದೇ ವಿಕೆಟ್ ನಷ್ಟವಿಲ್ಲದೆ 172 ರನ್ ಇದ್ದಲ್ಲಿಂದ ತನ್ನ ಎರಡನೇ ಇನಿಂಗ್ಸನ್ನು ಮುಂದುವರಿಸಿದ ಭಾರತ ಆರು ವಿಕೆಟ್ಗಳ ನಷ್ಟಕ್ಕೆ 487 ರನ್ನಲ್ಲಿ ಇನಿಂಗ್ಸ್ ಡಿಕ್ಲೇರ್ ಮಾಡಿತು.
ವಿರಾಟ್ ಕೊಹ್ಲಿ 143 ಎಸೆತಗಳಲ್ಲಿ ಅಜೇಯ 100 ರನ್ಗಳನ್ನು ಬಾರಿಸುವ ಮೂಲಕ ಫಾರ್ಮ್ಗೆ ಮರಳಿದರು. ಅವರ ಇನಿಂಗ್ಸ್ನಲ್ಲಿ ಎಂಟು ಬೌಂಡರಿಗಳು ಮತ್ತು ಎರಡು ಸಿಕ್ಸರ್ಗಳಿದ್ದವು.
ಕೊಹ್ಲಿ ಎರಡು ಮಹತ್ವದ ಭಾಗೀದಾರಿಕೆಗಳನ್ನು ನಿಭಾಯಿಸಿದರು. ಅವರು ಮೊದಲು, ವಾಶಿಂಗ್ಟನ್ ಸುಂದರ್ (29) ಜೊತೆಗೆ ಆರನೇ ವಿಕೆಟ್ಗೆ 89 ರನ್ಗಳನ್ನು ಸೇರಿಸಿದರು. ಬಳಿಕ, ನಿತೇಶ್ ರೆಡ್ಡಿ (38 ಅಜೇಯ) ಜೊತೆಗೆ ಮುರಿಯದ ಏಳನೇ ವಿಕೆಟ್ಗೆ 54 ಎಸೆತಗಳಲ್ಲಿ 77 ರನ್ಗಳನ್ನು ಕೂಡಿಸಿದರು.
ಭಾರತದ ಬೃಹತ್ ಮೊತ್ತದ ಇನಿಂಗ್ಸ್ಗೆ ಪಂಚಾಂಗ ಹಾಕಿದವರು ಯುವ ಆರಂಭಿಕ ಯಶಸ್ವಿ ಜೈಸ್ವಾಲ್. ಅವರು 297 ಎಸೆತಗಳಲ್ಲಿ 161 ರನ್ಗಳನ್ನು ಕಲೆಹಾಕಿದರು. ಅವರ ಬೃಹತ್ ಇನಿಂಗ್ಸ್ನಲ್ಲಿ 15 ಬೌಂಡರಿಗಳು ಮತ್ತು ಮೂರು ಸಿಕ್ಸರ್ಗಳಿವೆ. ಅದೂ ಅಲ್ಲದೆ, ಅವರು ಕೆ.ಎಲ್. ರಾಹುಲ್ (77) ಜೊತೆಗೆ ದಾಖಲೆಯ 201 ರನ್ಗಳ ಆರಂಭಿಕ ಭಾಗೀದಾರಿಕೆಯನ್ನೂ ನಿಭಾಯಿಸಿದರು. ಇದು ಆಸ್ಟ್ರೇಲಿಯದ ನೆಲದಲ್ಲಿ ಭಾರತೀಯ ಆರಂಭಿಕ ಜೋಡಿಯೊಂದರ ಅತ್ಯಧಿಕ ಭಾಗೀದಾರಿಕೆಯಾಗಿದೆ.
ದಿನದಾಟದ ಎರಡನೇ ಅವಧಿಯಲ್ಲಿ, ಆಸ್ಟ್ರೇಲಿಯದ ಬೌಲರ್ಗಳು ಸ್ವಲ್ಪ ಸಮಯ ಕೊಂಚ ಪ್ರತಿರೋಧ ತೋರಿದರು. ಈ ಅವಧಿಯಲ್ಲಿ ದೇವದತ್ತ ಪಡಿಕ್ಕಲ್ (25), ರಿಶಭ್ ಪಂತ್ (1) ಮತ್ತು ಧ್ರುವ ಜೂರೆಲ್ (1) ಸೇರಿದಂತೆ ನಾಲ್ಕು ವಿಕೆಟ್ಗಳು ಕ್ಷಿಪ್ರವಾಗಿ ಉರುಳಿದವು. ಆದರೆ, ಕೊಹ್ಲಿ ತನ್ನ ಪ್ರಭಾವಿ ಆಟದ ಮೂಲಕ ಪಂದ್ಯದ ಮೇಲೆ ಭಾರತದ ನಿಯಂತ್ರಣವನ್ನು ಮರುಸ್ಥಾಪಿಸಿದರು.
ಭಾರತ ತನ್ನ ಮೊದಲ ಇನಿಂಗ್ಸ್ನಲ್ಲಿ ಕೇವಲ 150 ರನ್ಗಳನ್ನು ಗಳಿಸಿತ್ತು. ಆದರೆ, ಬಳಿಕ ಆಸ್ಟ್ರೇಲಿಯದ ಇನಿಂಗ್ಸನ್ನು ಕೇವಲ 104 ರನ್ಗಳಿಗೆ ನಿಯಂತ್ರಿಸಿದೆ. ಭಾರತವೀಗ ಪಂದ್ಯದಲ್ಲಿ ಸ್ಪಷ್ಟ ಮೇಲುಗೈ ಸಾಧಿಸಿದೆ.