ಎಟಿಪಿ ವಿಶ್ವದ ನಂ.1 ರ್ಯಾಂಕಿಂಗ್ ಟ್ರೋಫಿ ಜಯಿಸಿದ ಜನ್ನಿಕ್ ಸಿನ್ನರ್
ಜನ್ನಿಕ್ ಸಿನ್ನರ್ | PC : X \ ATP Tour
ಟುರಿನ್ : ಎಟಿಪಿ ಫೈನಲ್ಸ್ ಟೂರ್ನಿಯ ವೇಳೆ ಜನ್ನಿಕ್ ಸಿನ್ನರ್ ಅಧಿಕೃತವಾಗಿ ವರ್ಷಾಂತ್ಯದ ನಂ.1 ರ್ಯಾಂಕಿಂಗ್ ಪಡೆದ ಇಟಲಿಯ ಮೊದಲ ಟೆನಿಸ್ ಆಟಗಾರ ಎನಿಸಿಕೊಂಡಿದ್ದಾರೆ.
ಪಂದ್ಯಾವಳಿ ಆರಂಭವಾಗುವ ಮೊದಲೇ ಸಿನ್ನರ್ ನಂ.1 ಸ್ಥಾನ ಪಡೆದಿದ್ದಾರೆ. ಸಿನ್ನರ್ ಅವರು ವರ್ಷದ ಕೊನೆಯ ಟೂರ್ನಿ ಎಟಿಪಿ ಫೈನಲ್ಸ್ನಲ್ಲಿ ರವಿವಾರ ಆಸ್ಟ್ರೇಲಿಯದ ಅಲೆಕ್ಸ್ ಡಿ ಮಿನೌರ್ರನ್ನು ಮಣಿಸಿದರು.
ಸಿನ್ನರ್ ಅವರು ಸರ್ಬಿಯದ ನೊವಾಕ್ ಜೊಕೊವಿಕ್ರನ್ನು ಹಿಂದಿಕ್ಕಿ ಅಗ್ರ ಸ್ಥಾನ ಅಲಂಕರಿಸಿದ್ದಾರೆ. ಜೊಕೊವಿಕ್ 8 ವರ್ಷಗಳ ಕಾಲ ಅಗ್ರ ರ್ಯಾಂಕಿನ ಆಟಗಾರ ಎನಿಸಿಕೊಂಡಿದ್ದರು.
ಮಾಜಿ ಆಟಗಾರ ಬೊರಿಸ್ ಬೆಕೆರ್ ಅವರು ಸಿನ್ನರ್ಗೆ ಪ್ರಶಸ್ತಿಯನ್ನು ಪ್ರದಾನಿಸಿದರು.
ಇಟಲಿಯಲ್ಲಿ ಈ ಪ್ರಶಸ್ತಿಯನ್ನು ಹಂಚಿಕೊಂಡ ಕಾರಣ ಇದೊಂದು ಅತ್ಯಂತ ವಿಶೇಷವಾಗಿದೆ. ನನ್ನ ತಂಡಕ್ಕೆ, ವಿಶ್ವದಾದ್ಯಂತದ ಅಭಿಮಾನಿಗಳ ಬೆಂಬಲಕ್ಕೆ ನಾನು ಧನ್ಯವಾದ ಹೇಳಲು ಬಯಸುವೆ. ನನಗೆ ಹತ್ತಿರವಾಗಿರುವ, ನನ್ನನ್ನು ಒಬ್ಬ ವ್ಯಕ್ತಿಯಾಗಿ ಅರ್ಥ ಮಾಡಿಕೊಳ್ಳುವ, ನಾನು ಯಾರೆಂಬುದನ್ನು ಅರ್ಥ ಮಾಡಿಕೊಳ್ಳುವ ಜನರು ಇಲ್ಲದಿದ್ದರೆ ಅದು ತುಂಬಾ ಕಷ್ಟಕರವಾಗಿರುತ್ತದೆ. ನಾನು ತುಂಬಾ ಅದೃಷ್ಟಶಾಲಿ ಎಂದು ಸಿನ್ನರ್ ಹೇಳಿದ್ದಾರೆ.
1973ರಲ್ಲಿ ಕಂಪ್ಯೂಟರೀಕೃತ ರ್ಯಾಂಕಿಂಗ್ ಪರಿಚಯವಾದ ನಂತರ ಜೂನ್ 10ರಂದು ಸಿನ್ನರ್ ಅವರು ಸಿಂಗಲ್ಸ್ ವಿಭಾಗದಲ್ಲಿ ವಿಶ್ವದ ನಂ.1 ಸ್ಥಾನ ತಲುಪಿದ ಇಟಲಿಯ ಮೊದಲ ಪುರುಷ ಆಟಗಾರನೆಂಬ ಕೀರ್ತಿಗೆ ಭಾಜನರಾಗಿದ್ದಾರೆ. ಇಟಲಿಯ ಮಹಿಳಾ ಟೆನಿಸ್ ಪಟು ಕೂಡ ಈ ಸಾಧನೆ ಮಾಡಿಲ್ಲ.
23ರ ಹರೆಯದ ಸಿನ್ನರ್ ವರ್ಷಾಂತ್ಯದಲ್ಲಿ ನಂ.1 ಗೌರವ ಪಡೆದ 19ನೇ ಆಟಗಾರನಾಗಿದ್ದಾರೆ. ನೊವಾಕ್ ಜೊಕೊವಿಕ್,ರಫೆಲ್ ನಡಾಲ್ ಹಾಗೂ ಕಾರ್ಲೊಸ್ ಕಾರ್ಲೊಸ್ ನಂತರ ಈ ಸಾಧನೆ ಮಾಡಿದ 4ನೇ ಸಕ್ರಿಯ ಆಟಗಾರನಾಗಿದ್ದಾರೆ.