ಶಾಂಘೈ ಮಾಸ್ಟರ್ಸ್ ಚಾಂಪಿಯನ್ಶಿಪ್ | ಜನ್ನಿಕ್ ಸಿನ್ನರ್ಗೆ ಪ್ರಶಸ್ತಿ
ಜೊಕೊವಿಕ್ ವಿರುದ್ಧ ನೇರ ಸೆಟ್ ಗಳ ಜಯ
Photo/Olympics.com
ಶಾಂಘೈ : ನೊವಾಕ್ ಜೊಕೊವಿಕ್ರನ್ನು ನೇರ ಸೆಟ್ ಗಳ ಅಂತರದಿಂದ ಸದೆಬಡಿದಿರುವ ಅಗ್ರ ರ್ಯಾಂಕಿನ ಜನ್ನಿಕ್ ಸಿನ್ನರ್ ರವಿವಾರ ಶಾಂಘೈ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಇಟಲಿ ಆಟಗಾರ ಸಿನ್ನರ್ 24 ಬಾರಿ ಗ್ರ್ಯಾನ್ಸ್ಲಾಮ್ ಚಾಂಪಿಯನ್ ಆಗಿರುವ ಜೊಕೊವಿಕ್ರನ್ನು 7-6(4), 6-3 ಸೆಟ್ಗಳ ಅಂತರದಿಂದ ಮಣಿಸಿದರು.
ಜೊಕೊವಿಕ್ ತನ್ನ 100ನೇ ಟೂರ್ ಲೆವೆಲ್ ಪ್ರಶಸ್ತಿ ಗೆಲ್ಲುವ ಗುರಿ ಇಟ್ಟುಕೊಂಡಿದ್ದರು. ಜಿಮಿ ಕಾನರ್ಸ್(109 ಪ್ರಶಸ್ತಿಗಳು)ಹಾಗೂ ರೋಜರ್ ಫೆಡರರ್(103)ಮಾತ್ರ ಪುರುಷರ ಟೆನಿಸ್ ನಲ್ಲಿ ಪ್ರಶಸ್ತಿ ಗಳಿಕೆಯಲ್ಲಿ ಶತಕದ ಗಡಿ ದಾಟಿದ್ದಾರೆ.
► ವುಹಾನ್ ಓಪನ್: ಸಬಲೆಂಕಾ ಫೈನಲ್ಗೆ
ಇದೇ ವೇಳೆ ವುಹಾನ್ ಓಪನ್ನಲ್ಲಿ ನಿಧಾನಗತಿಯ ಆರಂಭದಿಂದ ಚೇತರಿಸಿಕೊಂಡ ಎರಡನೇ ರ್ಯಾಂಕಿನ ಅರ್ಯನಾ ಸಬಲೆಂಕಾ ಅವರು ಸೆಮಿ ಫೈನಲ್ನಲ್ಲಿ ಅಮೆರಿಕದ ಕೊಕೊ ಗೌಫ್ರನ್ನು 1-6, 6-4, 6-4 ಸೆಟ್ಗಳ ಅಂತರದಿಂದ ಮಣಿಸಿದರು. ಈ ಮೂಲಕ ಸತತ ಮೂರನೇ ಬಾರಿ ವುಹಾನ್ ಫೈನಲ್ಗೆ ಲಗ್ಗೆ ಇಟ್ಟರು. ಪಂದ್ಯಾವಳಿಯಲ್ಲಿ ಪರಿಪೂರ್ಣ ದಾಖಲೆ ಉಳಿಸಿಕೊಂಡರು.
ಸಬಲೆಂಕಾ ಫೈನಲ್ನಲ್ಲಿ 7ನೇ ರ್ಯಾಂಕಿನ ಝೆಂಗ್ ಕ್ವಿನ್ವೆನ್ರನ್ನು ಎದುರಿಸಲಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ ಚಾಂಪಿಯನ್ ಸಬಲೆಂಕಾ ಅವರು 51ನೇ ರ್ಯಾಂಕಿನ ವಾಂಗ್ ಕ್ಸಿನ್ಯುರನ್ನು 6-3, 6-4 ಸೆಟ್ಗಳ ಅಂತರದಿಂದ ಸೋಲಿಸಿದರು.
ಆಸ್ಟ್ರೇಲಿಯನ್ ಓಪನ್ ಹಾಗೂ ಯು.ಎಸ್. ಓಪನ್ ಜಯಿಸಿರುವ ಸಬಲೆಂಕಾ ಇದೀಗ ಈ ಋತುವಿನಲ್ಲಿ 4ನೇ ಪ್ರಶಸ್ತಿಗಾಗಿ ಹೋರಾಡಲಿದ್ದಾರೆ.