ಜಪಾನ್ ಓಪನ್: ಮತ್ತೊಮ್ಮೆ ಮೊದಲ ಸುತ್ತಿನಲ್ಲಿ ಎಡವಿದ ಸಿಂಧು, ಸಾತ್ವಿಕ್ -ಚಿರಾಗ್ ಶುಭಾರಂಭ
ಟೋಕಿಯೊ: ಒಲಿಂಪಿಕ್ಸ್ನಲ್ಲಿ ಎರಡು ಪದಕ ವಿಜೇತೆ ಪಿ.ವಿ. ಸಿಂಧು ಜಪಾನ್ ಓಪನ್ನಲ್ಲಿ ಬುಧವಾರ ಚೀನಾದ ಝಾಂಗ್ ಯಿ ಮಾನ್ ವಿರುದ್ಧ ನೇರ ಗೇಮ್ಗಳ ಅಂತರದಿಂದ ಸೋಲನುಭವಿಸಿ ಮತ್ತೊಮ್ಮೆ ಮೊದಲ ಸುತ್ತಿನಲ್ಲಿಯೇ ಎಡವಿದ್ದಾರೆ. ಸು
ಸಿಂಧು 32 ನಿಮಿಷಗಳಲ್ಲಿ ಕೊನೆಗೊಂಡ ಮಹಿಳೆಯರ ಸಿಂಗಲ್ಸ್ ನ ಮೊದಲ ಸುತ್ತಿನ ಪಂದ್ಯದಲ್ಲಿ ಚೀನಾದ ಆಟಗಾರ್ತಿ ವಿರುದ್ಧ 12-21, 13-21 ಅಂತರದಿಂದ ಸೋಲನುಭವಿಸಿದರು. ಈ ವರ್ಷ 13 ಬಿಡಬ್ಲುಎಫ್ ವರ್ಲ್ಡ್ ಟೂರ್ ಸ್ಪರ್ಧೆಗಳಲ್ಲಿ 7ನೇ ಬಾರಿ ಮೊದಲ ಸುತ್ತಿನಲ್ಲಿ ಸೋತಿದ್ದಾರೆ.
ಸಿಂಧು ಈ ವರ್ಷದ ಮೇನಲ್ಲಿ ಮಲೇಶ್ಯ ಓಪನ್ನಲ್ಲಿ ವಿಶ್ವದ ನಂ.18ನೇ ಆಟಗಾರ್ತಿ ಝಾಂಗ್ರನ್ನು ಸೋಲಿಸಿದ್ದರು. ಇದೀಗ ಚೀನಾ ಆಟಗಾರ್ತಿ ಹಿಂದಿನ ಸೋಲಿಗೆ ಸೇಡು ತೀರಿಸಿಕೊಂಡರು.
ಸತತವಾಗಿ ಮೊದಲ ಸುತ್ತಿನಲ್ಲಿ ಸೋಲುತ್ತಿರುವ ಮಾಜಿ ವಿಶ್ವ ಚಾಂಪಿಯನ್ ಸಿಂಧು ವಿಶ್ವ ರ್ಯಾಂಕಿಂಗ್ನಲ್ಲಿ 17ನೇ ಸ್ಥಾನಕ್ಕೆ ಕುಸಿದಿದ್ದಾರೆ. ಟೂರ್ನಿಯಲ್ಲಿ 3ನೇ ಶ್ರೇಯಾಂಕ ಪಡೆದಿರುವ ಡಬಲ್ಸ್ ಜೋಡಿ ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಮೊದಲ ಸುತ್ತಿನಲ್ಲಿ ಇಂಡೋನೇಶ್ಯದ ಜೋಡಿ ಲಿಯೊ ರೊಲಿ ಕಾರ್ನಾಂಡೊ ಹಾಗೂ ಡೇನಿಯಲ್ ಮಾರ್ಥಿನ್ರನ್ನು 21-16, 11-21, 21-13 ಅಂತರದಿಂದ ಸೋಲಿಸಿದರು.2ನೇ ಸುತ್ತಿನಲ್ಲಿ ಡೆನ್ಮಾರ್ಕ್ ಜೋಡಿ ಜೆಪ್ಪಿ ಬೇ ಹಾಗೂ ಲಾಸ್ ಮೊಹ್ಲೆಡೆರನ್ನು ಎದುರಿಸಲಿದ್ದಾರೆ.
ಲಕ್ಷ ಸೇನ್ ಸಹ ಆಟಗಾರ ಪ್ರಿಯಾಂಶು ರಾಜಾವತ್ರನ್ನು 21-15, 12-21, 24-22 ಸೆಟ್ಗಳ ಅಂತರದಿಂದ ಸೋಲಿಸಿ ಬಿಡಬ್ಲುಎಫ್ ಸೂಪರ್-750 ಟೂರ್ನಮೆಂಟ್ನಲ್ಲಿ ಗೆಲುವಿನ ಆರಂಭ ಪಡೆದಿದ್ದಾರೆ. 2ನೇ ಸುತ್ತಿನಲ್ಲಿ ಜಪಾನ್ನ ಕಾಂಟಾ ಸುನೆಯಮಾರನ್ನು ಎದುರಿಸಲಿದ್ದಾರೆ.