ದುಬೈನಲ್ಲಿ ಐಸಿಸಿ ಪ್ರಶಸ್ತಿಗಳನ್ನು ಸ್ವೀಕರಿಸಿದ ಜಸ್ಪ್ರಿತ್ ಬುಮ್ರಾ

ಜಸ್ಪ್ರಿತ್ ಬುಮ್ರಾ | PC : ICC
ದುಬೈ: ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕಿಂತ ಮೊದಲು ಜಸ್ಪ್ರಿತ್ ಬುಮ್ರಾ 2024ರಲ್ಲಿ ನೀಡಿರುವ ತನ್ನ ಅಮೋಘ ಪ್ರದರ್ಶನಕ್ಕಾಗಿ ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿಯ(ಐಸಿಸಿ)ಪ್ರಶಸ್ತಿಗಳು ಹಾಗೂ ವರ್ಷದ ಟೀಮ್ ಕ್ಯಾಪ್ಗಳನ್ನು ಸ್ವೀಕರಿಸಿದರು.
ಸಿಡ್ನಿಯಲ್ಲಿ ನಡೆದಿದ್ದ ಐದನೇ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಪಂದ್ಯದಲ್ಲಿ ಬೆನ್ನುನೋವಿಗೆ ಒಳಗಾದ ನಂತರ ಈಗ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಯಿಂದ ಬುಮ್ರಾ ಹೊರಗುಳಿದಿದ್ದಾರೆ. ಪ್ರೇಕ್ಷಕನ ಸ್ಥಾನದಲ್ಲಿ ಕುಳಿತು ಪಂದ್ಯವನ್ನು ವೀಕ್ಷಿಸಿದರು.
ರವಿವಾರ ದುಬೈಗೆ ಆಗಮಿಸಿದ ಬುಮ್ರಾಗೆ ಐಸಿಸಿ ಅಧ್ಯಕ್ಷ ಜಯ್ ಶಾ ಅವರು ಐಸಿಸಿ ವರ್ಷದ ಪುರುಷರ ಕ್ರಿಕೆಟಿಗ ಹಾಗೂ ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗಳು ಹಾಗೂ ವರ್ಷದ ಟೆಸ್ಟ್ ಹಾಗೂ ಟಿ-20 ಟೀಮ್ ಕ್ಯಾಪ್ಗಳನ್ನು ಪ್ರದಾನಿಸಿದರು.
ಬುಮ್ರಾ ಅವರು ಪ್ರತಿಷ್ಠಿತ ಸರ್ ಗ್ಯಾರಿಫೀಲ್ಡ್ ಸೋಬರ್ಸ್ ಪ್ರಶಸ್ತಿಯ ಜೊತೆಗೆ ವರ್ಷದ ಐಸಿಸಿ ಪುರುಷರ ಕ್ರಿಕೆಟಿಗ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಬುಮ್ರಾ ಅವರು 2024ರಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ 14.92ರ ಸರಾಸರಿಯಲ್ಲಿ 71 ವಿಕೆಟ್ಗಳನ್ನು ಪಡೆದಿದ್ದರು. ಅಮೆರಿಕ ಹಾಗೂ ವೆಸ್ಟ್ಇಂಡೀಸ್ನ ಜಂಟಿ ಆತಿಥ್ಯದಲ್ಲಿ ನಡೆದಿದ್ದ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 15 ವಿಕೆಟ್ಗಳನ್ನು ಪಡೆದು ಭಾರತದ ಗೆಲುವಿಗೆ ನೆರವಾಗಿ‘ ಸರಣಿಶ್ರೇಷ್ಠ’ ಪ್ರಶಸ್ತಿ ಪಡೆದಿದ್ದರು.
ಐಸಿಸಿ ವರ್ಷದ ಪುರುಷರ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಯನ್ನು ನೀಡುವ ಮೂಲಕ ಬುಮ್ರಾ ಅವರ ಸಾಧನೆಯನ್ನು ಗುರುತಿಸಲಾಗಿದೆ. ಬುಮ್ರಾ ಅವರು ಟೆಸ್ಟ್ ಕ್ರಿಕೆಟ್ನಲ್ಲಿ ವೇಗವಾಗಿ 200 ವಿಕೆಟ್ಗಳನ್ನು ಪಡೆದಿದ್ದರು. ಈ ಸಾಧನೆಯ ಮೂಲಕ ಐಸಿಸಿ ವರ್ಷದ ಪುರುಷರ ಟೆಸ್ಟ್ ತಂಡ ಹಾಗೂ ಐಸಿಸಿ ವರ್ಷದ ಪುರುಷರ ಟಿ-20 ತಂಡ ಎರಡರಲ್ಲೂ ಬುಮ್ರಾ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.