ಇಂಗ್ಲೆಂಡ್ ವಿರುದ್ದದ ನಾಲ್ಕನೇ ಟೆಸ್ಟ್ ಪಂದ್ಯದಿಂದ ಜಸ್ಪ್ರೀತ್ ಬುಮ್ರಾ ವಿಶ್ರಾಂತಿ: ವರದಿ
ಜಸ್ಪ್ರೀತ್ ಬುಮ್ರಾ | Photo: PTI
ಹೊಸದಿಲ್ಲಿ: ರಾಂಚಿಯಲ್ಲಿ ಫೆಬ್ರವರಿ 23ರಿಂದ ಆರಂಭವಾಗಲಿರುವ ನಾಲ್ಕನೇ ಟೆಸ್ಟ್ ಪಂದ್ಯದಿಂದ ಭಾರತದ ಪ್ರಮುಖ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ವಿಶ್ರಾಂತಿ ಪಡೆಯಲು ಸಜ್ಜಾಗಿದ್ದಾರೆ ಎಂದು ಕ್ರಿಕ್ ಬಝ್ ವರದಿ ಮಾಡಿದೆ.
ಭಾರತೀಯ ಕ್ರಿಕೆಟ್ ತಂಡದ ಕೆಲಸದ ಒತ್ತಡವನ್ನು ನಿಭಾಯಿಸುವ ಭಾಗವಾಗಿ ಬುಮ್ರಾಗೆ ವಿಶ್ರಾಂತಿ ನೀಡಲು ನಿರ್ಧರಿಸಲಾಗಿದೆ.
ಭಾರತೀಯ ತಂಡವು ಮಂಗಳವಾರ ರಾಜ್ಕೋಟ್ನಿಂದ ರಾಂಚಿಗೆ ಪ್ರಯಾಣಿಸಲಿದೆ. ಬುಮ್ರಾ ಅವರು ನಾಲ್ಕನೇ ಟೆಸ್ಟ್ ಗಾಗಿ ಟೀಮ್ ಇಂಡಿಯಾದೊಂದಿಗೆ ಪ್ರಯಾಣಿಸುವ ಸಾಧ್ಯತೆ ಇಲ್ಲ.
ಬುಮ್ರಾ ಅವರು ರಾಜ್ಕೋಟ್ನಿಂದ ಅಹ್ಮದಾಬಾದ್ ಗೆ ರಸ್ತೆ ಮಾರ್ಗದ ಮೂಲಕ ಪ್ರಯಾಣಿಸುವ ಸಾಧ್ಯತೆ ಇದೆ.
ಪ್ರಸಕ್ತ ಟೆಸ್ಟ್ ಸರಣಿಯಲ್ಲಿ ಒಟ್ಟು 17 ವಿಕೆಟ್ ಗಳನ್ನು ಉರುಳಿಸುವ ಮೂಲಕ ಬುಮ್ರಾ ತಂಡದ ಪರ ಗರಿಷ್ಠ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಹೈದರಾಬಾದ್, ವಿಶಾಖಪಟ್ಟಣ ಹಾಗೂ ರಾಜ್ಕೋಟ್ ನಲ್ಲಿ ನಡೆದಿರುವ ಮೊದಲ ಮೂರು ಟೆಸ್ಟ್ ಪಂದ್ಯಗಳಲ್ಲಿ ಬುಮ್ರಾ ಈಗಾಗಲೇ 81 ಓವರ್ ಬೌಲಿಂಗ್ ಮಾಡಿದ್ದಾರೆ.
ವೇಗದ ಬೌಲರ್ ಮುಹಮ್ಮದ್ ಸಿರಾಜ್ ಕೂಡ ವಿಶಾಖಪಟ್ಟಣದಲ್ಲಿ ನಡೆದಿದ್ದ 2ನೇ ಟೆಸ್ಟ್ ಪಂದ್ಯದಿಂದ ವಿಶ್ರಾಂತಿ ಪಡೆದಿದ್ದರು.
ರಾಂಚಿ ಟೆಸ್ಟ್ ಪಂದ್ಯಕ್ಕೆ ಬುಮ್ರಾ ಬದಲಿಗೆ ಬೇರೊಬ್ಬ ಬೌಲರ್ ಆಡಿಸುವ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಬಂಗಾಳದ ಪರ ರಣಜಿ ಪಂದ್ಯವನ್ನಾಡಲು ವೇಗದ ಬೌಲರ್ ಮುಕೇಶ್ ಕುಮಾರ್ ರನ್ನು ಮೂರನೇ ಟೆಸ್ಟ್ ಪಂದ್ಯದಿಂದ ಹೊರಗಿಡಲಾಗಿತ್ತು. ಇದೀಗ ಮುಕೇಶ್ ಮತ್ತೊಮ್ಮೆ ತಂಡವನ್ನು ಸೇರುವ ಸಾಧ್ಯತೆ ಇದೆ.