ಜಾವೆಲಿನ್ ಎಸೆತ: ಅಜೀತ್ ಸಿಂಗ್ಗೆ ಬೆಳ್ಳಿ, ಸುಂದರ್ಗೆ ಕಂಚು
ಅಜೀತ್ ಸಿಂಗ್, ಸುಂದರ್ ಸಿಂಗ್ ಗುರ್ಜರ್ | PC : olympics.com
ಪ್ಯಾರಿಸ್ : ಪ್ಯಾರಾಲಿಂಪಿಕ್ ಗೇಮ್ಸ್ನ 6ನೇ ದಿನವಾದ ಮಂಗಳವಾರ ತಡರಾತ್ರಿ ನಡೆದ ಪುರುಷರ ಹೈಜಂಪ್ ಟಿ63 ಹಾಗೂ ಜಾವೆಲಿನ್ ಎಸೆತ ಟಿ46 ಸ್ಪರ್ಧೆಯಲ್ಲಿ ಭಾರತೀಯ ಅತ್ಲೀಟ್ಗಳು ಬೆಳ್ಳಿ ಹಾಗೂ ಕಂಚಿನ ಪದಕವನ್ನು ಜಯಿಸಿದರು. ಈ ಮೂಲಕ ಭಾರತದ ಪದಕ ಸಂಖ್ಯೆಯನ್ನು 20ಕ್ಕೆ ತಲುಪಿಸಿದರು.
ಅಜೀತ್ ಸಿಂಗ್(65.62 ಮೀ.) ಹಾಗೂ ಸುಂದರ್ ಸಿಂಗ್ ಗುರ್ಜರ್(64.96 ಮೀ.) ಜಾವೆಲಿನ್ ಎಸೆತ ಎಫ್46 ಫೈನಲ್ನಲ್ಲಿ ಎರಡನೇ ಹಾಗೂ ಮೂರನೇ ಸ್ಥಾನ ಪಡೆದರು.
ಜಾವೆಲಿನ್ ಎಸೆತದ ಎಫ್46 ಸ್ಪರ್ಧೆಯ ಐದನೇ ಸುತ್ತಿನಲ್ಲಿ ಲ್ಲಿ 65.62 ಮೀ.ದೂರಕ್ಕೆ ಜಾವೆಲಿನ್ ಎಸೆದಿರುವ ಅಜೀತ್ ಸಿಂಗ್ ಜೀವನಶ್ರೇಷ್ಠ ಸಾಧನೆ ಮಾಡಿದರು. ತನ್ನ ಮೊದಲ ಪ್ಯಾರಾಲಿಂಪಿಕ್ಸ್ ಪದಕಕ್ಕೆ(ಬೆಳ್ಳಿ) ಮುತ್ತಿಟ್ಟರು.
ವಿಶ್ವ ದಾಖಲೆವೀರ ಸುಂದರ್ ಸಿಂಗ್ ನಾಲ್ಕನೇ ಸುತ್ತಿನಲ್ಲಿ ಈ ವರ್ಷದ ಶ್ರೇಷ್ಠ ಪ್ರದರ್ಶನ(64.96ಮೀ.)ನೀಡಿದರೂ 3ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಟೋಕಿಯೊ-2020ರ ಗೇಮ್ಸ್ನಲ್ಲಿ ಇದೇ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ ನಂತರ ಸುಂದರ್ ಇದೀಗ ಎರಡನೇ ಪ್ಯಾರಾಲಿಂಪಿಕ್ಸ್ ಪದಕ ಜಯಿಸಿದರು.
ಸ್ಪರ್ಧೆಯಲ್ಲಿ ಇನ್ನೋರ್ವ ಭಾರತೀಯ ರಿಂಕು(61.58 ಮೀ.)ಐದನೇ ಸ್ಥಾನ ಪಡೆದರು. ಕ್ಯೂಬಾದ ಗುಲೆರ್ಮೊ ವರೊನಾ ಗೊಂಝಾಲೆಝ್ ತನ್ನ 2ನೇ ಸುತ್ತಿನಲ್ಲಿ 66.14 ಮೀ.ದೂರಕ್ಕೆ ಜಾವೆಲಿನ್ ಎಸೆದು ಚಿನ್ನ ಜಯಿಸಿದರು.