ಐಸಿಸಿ ನೂತನ ಅಧ್ಯಕ್ಷರಾಗಲಿರುವ ಜಯ್ ಶಾ: ವರದಿ
ಜಯ್ ಶಾ (Photo: PTI)
ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಅವರು ಐಸಿಸಿಯ ಮುಂದಿನ ಅಧ್ಯಕ್ಷರಾಗಲಿದ್ದಾರೆ ಎಂದು NDTV ವರದಿ ಮಾಡಿದೆ.
ಐಸಿಸಿ ಈಗಿನ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಅವರ ಅಧಿಕಾರವಧಿ ಇದೇ ನವೆಂಬರ್ ಗೆ ಕೊನೆಗೊಳ್ಳಲಿದೆ. ಅವರು ಮುಂದಿನ ಅವಧಿಗೆ ಸ್ಪರ್ಧಿಸಲು ನಿರಾಸಕ್ತಿ ತೋರಿರುವುದರಿಂದ ಜಯ್ ಶಾ ಅವರ ಹಾದಿ ಸುಗಮವಾಗಿದೆ ಎನ್ನಲಾಗಿದೆ.
ಗ್ರೆಗ್ ಬಾರ್ಕ್ಲೇ ಅವರು ವೀಡಿಯೊ ಕಾನ್ಫರೆನ್ಸ್ನಲ್ಲಿ ಮೂರನೇ ಬಾರಿಗೆ ಈ ಹುದ್ದೆಗೆ ಸ್ಪರ್ಧಿಸುವ ಯಾವುದೇ ಉದ್ದೇಶ ಹೊಂದಿಲ್ಲ ಎಂದು, ಕ್ರಿಕೆಟ್ ಆಸ್ಟ್ರೇಲಿಯಾದ ಅಧ್ಯಕ್ಷ ಮೈಕ್ ಬೇರ್ಡ್ ಸೇರಿದಂತೆ ಐಸಿಸಿ ನಿರ್ದೇಶಕರಿಗೆ ಈಗಾಗಲೇ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನವೆಂಬರ್ನಲ್ಲಿ ಗ್ರೆಗ್ ಬಾರ್ಕ್ಲೇ ಅವರನ್ನು ಬದಲಾಯಿಸುವ ಬಗ್ಗೆ ಜಯ್ ಶಾ ತಿಳಿಸಿದ ನಂತರ, ಗ್ರೆಗ್ ಬಾರ್ಕ್ಲೇ ಅವರ ಈ ನಿರ್ಧಾರ ಬಂದಿದೆ. ಜಯ್ ಶಾ ಅವರಿಗೆ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದ ಕ್ರಿಕೆಟ್ ಮಂಡಳಿಗಳ ಬೆಂಬಲವಿದೆ. ಇದು ಅವರಿಗೆ ಐಸಿಸಿಯ ಮುಖ್ಯಸ್ಥರಾಗಲು ಬೇಕಾದ ಬೆಂಬಲ ನೀಡಲಿದೆ ಎಂದು ತಿಳಿದು ಬಂದಿದೆ.