ಮತ್ತೆ ಅಬ್ಬರಿಸುತ್ತಿರುವ ಇಂಗ್ಲೆಂಡ್ ತಂಡದ ರನ್ ಯಂತ್ರ ಜೋ ರೂಟ್
ಪತನದ ಭೀತಿಯಲ್ಲಿ ಬ್ಯಾಟಿಂಗ್ ಮಾಂತ್ರಿಕ ತೆಂಡುಲ್ಕರ್ ದಾಖಲೆಗಳು?
ಜೋ ರೂಟ್ | PC : PTI
ಲಂಡನ್: ಇಂಗ್ಲೆಂಡ್ ಕ್ರಿಕೆಟ್ ತಂಡದ ರನ್ಯಂತ್ರ ಜೋ ರೂಟ್ ಅವರು ಕ್ರಿಕೆಟ್ ಜಗತ್ತಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ನಿರೀಕ್ಷೆಗೂ ಮೀರಿ ಪ್ರದರ್ಶನ ನೀಡುತ್ತಿದ್ದು, ಇದೀಗ ಸ್ವಲ್ಪ ಸಮಯದಿಂದ ಜೀವನಶ್ರೇಷ್ಠ ಫಾರ್ಮ್ನಲ್ಲಿದ್ದಾರೆ.
ರೂಟ್ ತನ್ನ ಬ್ಯಾಟಿಂಗ್ ಬಗ್ಗೆ ಹೆಚ್ಚು ಆತ್ಮವಿಶ್ವಾಸದಲ್ಲಿದ್ದು, ವೆಲ್ಲಿಂಗ್ಟನ್ನಲ್ಲಿ ಇತ್ತೀಚೆಗೆ ನ್ಯೂಝಿಲ್ಯಾಂಡ್ ವಿರುದ್ಧ ತನ್ನ 36ನೇ ಟೆಸ್ಟ್ ಶತಕ ಸಿಡಿಸಿದ್ದರು. 2021ರ ಆರಂಭದಿಂದ ರೂಟ್ ನಿರಂತರ ಉತ್ತಮ ಪ್ರದರ್ಶನ ನೀಡುತ್ತಿದ್ದು, ಈ ಅವಧಿಯಲ್ಲಿ ಅವರು ಸುಮಾರು 19 ಟೆಸ್ಟ್ ಶತಕಗಳನ್ನು ಸಿಡಿಸಿದ್ದು, ಹಲವು ದಾಖಲೆಗಳನ್ನು ಮುರಿದಿದ್ದಾರೆ.
ಇದೀಗ ರೂಟ್ಗೆ ಟೆಸ್ಟ್ ಕ್ರಿಕೆಟ್ನಲ್ಲಿ ಕೈಗೆಟುಕದ ದಾಖಲೆಗಳೇ ಇಲ್ಲ. ಈಗಾಗಲೇ ಇಂಗ್ಲೆಂಡ್ ಪರ ಗರಿಷ್ಠ ರನ್ ಸ್ಕೋರರ್ ಆಗಿರುವ ರೂಟ್ ಅವರು ಟೆಸ್ಟ್ ಇತಿಹಾಸದಲ್ಲಿ ಗರಿಷ್ಠ ರನ್ ಗಳಿಸಿದವರ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ.
12,886 ರನ್ ಗಳಿಸಿರುವ ರೂಟ್ ಅವರು ಆಸ್ಟ್ರೇಲಿಯದ ದಿಗ್ಗಜ ರಿಕಿ ಪಾಂಟಿಂಗ್ರನ್ನು ಹಿಂದಿಕ್ಕಲು ಕೇವಲ 492 ರನ್ ಅಗತ್ಯವಿದೆ. ಪಾಂಟಿಂಗ್ ಅವರು ಸಾರ್ವಕಾಲಿಕ ಗರಿಷ್ಠ ಟೆಸ್ಟ್ ಸ್ಕೋರರ್ ಪಟ್ಟಿಯಲ್ಲಿ ಸಚಿನ್ ತೆಂಡುಲ್ಕರ್ ನಂತರ 2ನೇ ಸ್ಥಾನಲ್ಲಿದ್ದಾರೆ.
ರೂಟ್ ಈಗಿನ ಫಾರ್ಮ್ ಅನ್ನೇ ಮುಂದುವರಿಸಿದರೆ ಗರಿಷ್ಠ ಸ್ಕೋರರ್ಗಳ ಪಟ್ಟಿಯಲ್ಲಿ ತನಗಿಂತ ಮುಂದಿರುವ ಇನ್ನಿಬ್ಬರು ಕ್ರಿಕೆಟ್ ದಿಗ್ಗಜರಾದ ಜಾಕಸ್ ಕಾಲಿಸ್ ಹಾಗೂ ರಾಹುಲ್ ದ್ರಾವಿಡ್ರನ್ನು ಮುಂದಿನ ವರ್ಷ ಹಿಂದಿಕ್ಕಬಹುದು.
ಕೇವಲ ತೆಂಡುಲ್ಕರ್ ಮಾತ್ರ ರೂಟ್ಗಿಂತ ತುಂಬಾ ಮುಂದಿದ್ದಾರೆ. ಬ್ಯಾಟಿಂಗ್ ಮಾಂತ್ರಿಕ ತೆಂಡುಲ್ಕರ್ 15,921 ರನ್ ಗಳಿಸಿ ದಾಖಲೆ ನಿರ್ಮಿಸಿದ್ದಾರೆ. 2013ರಲ್ಲಿ ತೆಂಡುಲ್ಕರ್ ನಿವೃತ್ತಿಯಾದ ಸಂದರ್ಭದಲ್ಲಿ ಈ ದಾಖಲೆಯನ್ನು ಮುರಿಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಭಾವಿಸಲಾಗಿತ್ತು.
33ರ ಹರೆಯದ ರೂಟ್ಗೆ ತೆಂಡುಲ್ಕರ್ ದಾಖಲೆಯನ್ನು ಮುರಿಯಲು ಇನ್ನು ಕೇವಲ 3,000 ರನ್ ಗಳಿಸುವ ಅಗತ್ಯವಿದೆ. ರೂಟ್ ಅವರ ಪ್ರಸಕ್ತ ಫಾರ್ಮ್ ಈ ದಾಖಲೆಯನ್ನು ಮುರಿಯುವ ವಿಶ್ವಾಸವನ್ನು ಮೂಡಿಸಿದೆ. ತೆಂಡುಲ್ಕರ್ರ 51 ಟೆಸ್ಟ್ ಶತಕದ ದಾಖಲೆಯೂ ಹೆಚ್ಚು ದೂರ ಇಲ್ಲ.
ಸಚಿನ್-ಪಾಂಟಿಂಗ್ ಯುಗಾಂತ್ಯದ ನಂತರ ಟೆಸ್ಟ್ ಕ್ರಿಕೆಟ್ನಲ್ಲಿ ರೂಟ್, ಭಾರತದ ವಿರಾಟ್ ಕೊಹ್ಲಿ, ಆಸ್ಟ್ರೇಲಿಯದ ಸ್ಟೀವ್ ಸ್ಮಿತ್ ಹಾಗೂ ನ್ಯೂಝಿಲ್ಯಾಂಡ್ನ ಕೇನ್ ವಿಲಿಯಮ್ಸನ್ ಹೆಚ್ಚು ಭರವಸೆ ಮೂಡಿಸಿರುವ ಅಗ್ರ ನಾಲ್ವರು ಬ್ಯಾಟರ್ ಆಗಿದ್ದಾರೆ. ಆದರೆ ಇಂಗ್ಲೆಂಡ್ ಬ್ಯಾಟರ್ ಹಿಂದಿನ 4 ವರ್ಷಗಳಲ್ಲಿ ಇತರರನ್ನು ಹಿಂದಿಕ್ಕಿದ್ದಾರೆ.
ರೂಟ್ 2021ರ ನಂತರ 19 ಟೆಸ್ಟ್ ಶತಕಗಳನ್ನು ಗಳಿಸಿದ್ದರೆ, ವಿಲಿಯಮ್ಸನ್ ಈ ವೇಳೆ 9 ಶತಕಗಳನ್ನು ಗಳಿಸಿ 2ನೇ ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ. ಈ ಅವಧಿಯಲ್ಲಿ ಸ್ಮಿತ್ ಕೇವಲ 6 ಶತಕ ಹಾಗೂ ಕೊಹ್ಲಿ ಕೇವಲ 3 ಶತಕಗಳನ್ನು ಸಿಡಿಸಿದ್ದಾರೆ.
2021ರ ನಂತರ ವಿಶ್ವ ಕ್ರಿಕೆಟ್ನಲ್ಲಿ ರೂಟ್ ಹಾಗೂ ವಿಲಿಯಮ್ಸನ್ ಹೊರತುಪಡಿಸಿ ಬೇರ್ಯಾವ ಆಟಗಾರನು 8ಕ್ಕಿಂತ ಹೆಚ್ಚು ಶತಕಗಳನ್ನು ಗಳಿಸಿಲ್ಲ.
ಈ ಅವಧಿಯಲ್ಲಿ ಇಂಗ್ಲೆಂಡ್ನ ಹ್ಯಾರಿ ಬ್ರೂಕ್ 8, ಶ್ರೀಲಂಕಾದ ಡಿಮುತ್ ಕರುಣರತ್ನೆ, ಆಸ್ಟ್ರೇಲಿಯದ ಉಸ್ಮಾನ್ ಖ್ವಾಜಾ ಹಾಗೂ ಲ್ಯಾಬುಶೇನ್ ತಲಾ 7 ಶತಕಗಳನ್ನು ಗಳಿಸಿದ್ದಾರೆ.
ರೂಟ್ ಅವರು 2021ರ ಬಳಿಕ ಶತಕಗಳ ದಾಖಲೆಯ ಜೊತೆಗೆ ತಾವೊಬ್ಬರೇ 56.26ರ ಸರಾಸರಿಯಲ್ಲಿ 5,063 ರನ್ ಕೂಡ ಗಳಿಸಿದ್ದಾರೆ. ಬೇರೆ ಯಾವ ಬ್ಯಾಟರ್ಗಳಿಗೆ 3,000 ರನ್ ತಲುಪಲು ಸಾಧ್ಯವಾಗಿಲ್ಲ. ಕರುಣರತ್ನೆ 2,613 ರನ್ ಗಳಿಸಿ 2ನೇ ಸ್ಥಾನದಲ್ಲಿದ್ದಾರೆ.
ಈ ಮಹತ್ವದ ಸಾಧನೆಯ ಹಾದಿಯಲ್ಲಿ ರೂಟ್ ಅವರು ಟೆಸ್ಟ್ ಇತಿಹಾಸದ 4ನೇ ಇನಿಂಗ್ಸ್ನಲ್ಲಿ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದಾರೆ. ಸಚಿನ್ ತೆಂಡುಲ್ಕರ್ ದಾಖಲೆ(1,625 ರನ್)ಯನ್ನು ಮುರಿದಿದ್ದಾರೆ. ರೂಟ್ ಅವರು ಇದೀಗ ಟೆಸ್ಟ್ ಕ್ರಿಕೆಟ್ನ 4ನೇ ಇನಿಂಗ್ಸ್ನಲ್ಲಿ 1,630 ರನ್ ಗಳಿಸಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ 50 ಪ್ಲಸ್ ಸ್ಕೋರ್ ಗಳಿಕೆಯಲ್ಲಿ ಶತಕವನ್ನು ಪೂರೈಸಿದ ವಿಶ್ವದ 4ನೇ ಬ್ಯಾಟರ್ ಆಗಿದ್ದಾರೆ. ತೆಂಡುಲ್ಕರ್ 119 ಫಿಫ್ಟಿ ಪ್ಲಸ್ ಸ್ಕೋರ್ಗಳೊಂದಿಗೆ ಎಲೈಟ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಈಗಾಗಲೇ ಈ ವರ್ಷ 1,470 ರನ್ ಗಳಿಸಿರುವ ರೂಟ್ ಅವರು ಕ್ಯಾಲೆಂಡರ್ ವರ್ಷದಲ್ಲಿ ಎರಡನೇ ಬಾರಿ 1,500ಕ್ಕೂ ಅಧಿಕ ರನ್ ಗಳಿಸಿದ ಎರಡನೇ ಬ್ಯಾಟರ್ ಎನಿಸಿಕೊಳ್ಳುವತ್ತ ಹೆಜ್ಜೆ ಇಟ್ಟಿದ್ದಾರೆ. ಪಾಂಟಿಂಗ್ 2003 ಹಾಗೂ 2005ರಲ್ಲಿ ಈ ಸಾಧನೆ ಮಾಡಿದ್ದರು. ರೂಟ್ 2021ರಲ್ಲಿ 1,500 ರನ್ ಕ್ರಮಿಸಿದ್ದರು.
►2021ರ ತನಕ ರೂಟ್, ಕೊಹ್ಲಿ, ವಿಲಿಯಮ್ಸನ್, ಸ್ಮಿತ್ ಸಾಧನೆ
ರೂಟ್: 54 ಪಂದ್ಯ-5,063 ರನ್-262 ಗರಿಷ್ಠ ಸ್ಕೋರ್- 56.25 ಸರಾಸರಿ- 19 ಶತಕ- 15 ಅರ್ಧಶತಕ
ಕೊಹ್ಲಿ: 33 ಪಂದ್ಯ-1,845 ರನ್- 186 ಗರಿಷ್ಠ ಸ್ಕೋರ್- 33.54 ಸರಾಸರಿ- 3 ಶತಕ- 8 ಅರ್ಧಶತಕ
ವಿಲಿಯಮ್ಸನ್: 22 ಪಂದ್ಯ- 2,199 ರನ್- 238 ಗರಿಷ್ಠ ಸ್ಕೋರ್ - 59.43 ಸರಾಸರಿ- 9 ಶತಕ- 5 ಅರ್ಧಶತಕ
ಸ್ಮಿತ್: 36 ಪಂದ್ಯ- 2,467 ರನ್-200 ಗರಿಷ್ಠ ಸ್ಕೋರ್-44.85 ಸರಾಸರಿ-6 ಶತಕ, 12 ಅರ್ಧಶತಕ