ಟಿ-20 ವಿಶ್ವಕಪ್ ಗೆ ಮರಳಲು ಟೆಸ್ಟ್ ಕ್ರಿಕೆಟ್ ನಿಂದ ದೂರ ಉಳಿದ ಜೋಫ್ರಾ ಆರ್ಚರ್
ಜೋಫ್ರಾ ಆರ್ಚರ್ | Photo: PTI
ಹೊಸದಿಲ್ಲಿ: ನಿರಂತರವಾಗಿ ಕಾಡುತ್ತಿರುವ ಮೊಣಕೈ ನೋವಿನಿಂದ ಚೇತರಿಸಿಕೊಳ್ಳುವತ್ತ ಚಿತ್ತಹರಿಸಿರುವ ಇಂಗ್ಲೆಂಡ್ನ ವೇಗದ ಬೌಲರ್ ಜೋಫ್ರಾ ಆರ್ಚರ್ ಟೆಸ್ಟ್ ಕ್ರಿಕೆಟ್ನಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಜೂನ್ನಲ್ಲಿ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್ ಟೂರ್ನಿಗೆ ಪುನರಾಗಮನ ಮಾಡುವತ್ತ ದೃಷ್ಟಿ ಹರಿಸಿದ್ದಾರೆ ಎಂದು ಇಂಗ್ಲೆಂಡ್ ಪುರುಷರ ಕ್ರಿಕೆಟ್ ತಂಡದ ಆಡಳಿತ ನಿರ್ದೇಶಕ ರಾಬ್ ಕೀ ದೃಢಪಡಿಸಿದ್ದಾರೆ.
ಮೊಣಕೈ ನೋವಿನಿಂದಾಗಿ ಆರ್ಚರ್ ಕಳೆದ ವರ್ಷದ ಮೇನಿಂದ ಸಕ್ರಿಯ ಕ್ರಿಕೆಟ್ನಿಂದ ದೂರ ಉಳಿದಿದ್ದಾರೆ. ಪುನಶ್ಚೇತನ ಪ್ರಕ್ರಿಯೆಯ ಭಾಗವಾಗಿ ಕ್ಲಬ್ ಕ್ರಿಕೆಟ್ನಲ್ಲಿ ಭಾಗವಹಿಸಲು ಹುಟ್ಟಿದ ಸ್ಥಳ ಬಾರ್ಬಡೊಸ್ಗೆ ವಾಪಸಾಗಿದ್ದಾರೆ.
ಭಾರತದಲ್ಲಿ ಸಸ್ಸೆಕ್ಸ್ನೊಂದಿಗಿನ ತರಬೇತಿಯಲ್ಲಿ ತನ್ನ ಪ್ರದರ್ಶನದ ಮೂಲಕ ಆರ್ಚರ್ ಎಲ್ಲರ ಗಮನ ಸೆಳೆದಿದ್ದಾರೆ. ಇದೀಗ ಅವರ ಕೆರಿಬಿಯನ್ ಗೆ ವಾಪಸಾಗಿದ್ದಾರೆ. ಮುಂದಿನ ತಿಂಗಳು ಸ್ವದೇಶದಲ್ಲಿ ನಡೆಯುವ ಪಾಕಿಸ್ತಾನ ವಿರುದ್ಧದ ಟಿ-20 ಸರಣಿಗೆ ವಾಪಸಾಗುವ ನಿಟ್ಟಿನಲ್ಲಿ ಕ್ಲಬ್ ಪಂದ್ಯಗಳಿಗೆ ತಯಾರಿ ನಡೆಸುತ್ತಿದ್ದಾರೆ.
ಆರ್ಚರ್ ಸೀಮಿತ ಓವರ್ ಕ್ರಿಕೆಟ್ಗೆ ಬೇಗನೆ ವಾಪಸಾಗಲಿದ್ದಾರೆ ಎಂಬ ವಿಚಾರದಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡ ಆಶಾವಾದಿಯಾಗಿದೆ.
ನಾವು ಆರ್ಚರ್ ಅವರ ಸೇವೆಯನ್ನು ಸೀಮಿತ ಅವಧಿಯ ಬದಲಿಗೆ ದೀರ್ಘಾವಧಿಗೆ ಬಳಸಿಕೊಳ್ಳಲು ಬಯಸಿದ್ದೇವೆ. ಜೋಫ್ರಾ ಈ ಋತುವಿನಲ್ಲಿ ಸೀಮಿತ ಓವರ್ ಕ್ರಿಕೆಟ್ನಲ್ಲಿ ಆಡಲಿದ್ದಾರೆ. ಮುಂದಿನ ಸಮ್ಮರ್ನಲ್ಲಿ ನಾವು ಭಾರತ ವಿರುದ್ಧ ಹಾಗೂ ಮುಂದಿನ ವರ್ಷಾಂತ್ಯದಲ್ಲಿ ಆ್ಯಶಸ್ ಸರಣಿ ಆಡುವಾಗ ಆರ್ಚರ್ರನ್ನು ಟೆಸ್ಟ್ ಕ್ರಿಕೆಟ್ ತಂಡಕ್ಕೆ ಸೇರಿಸಿಕೊಳ್ಳಲಿದ್ದೇವೆ ಎಂದು ಇಂಗ್ಲೆಂಡ್ ತಂಡದ ಎಂ.ಡಿ. ರಾಬ್ ಕೀ ವಿವರಿಸಿದ್ದಾರೆ.