ಟೆನಿಸ್ಗೆ ವಿದಾಯ ಹೇಳಿದ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ
ಜುವಾನ್ ಮಾರ್ಟಿನ್ | PC : olympics.com
ಹೊಸದಿಲ್ಲಿ : ಅರ್ಜೆಂಟೀನದ ಬ್ಯುನಸ್ ಐರಿಸ್ನಲ್ಲಿ ತನ್ನ ತವರು ಪ್ರೇಕ್ಷಕರ ಸಮ್ಮುಖದಲ್ಲಿ ನಡೆದ ಭಾವನಾತ್ಮಕ ಪ್ರದರ್ಶನ ಪಂದ್ಯವೊಂದರಲ್ಲಿ ನೊವಾಕ್ ಜೊಕೊವಿಕ್ರನ್ನು 6-4, 7-5 ನೇರ ಸೆಟ್ಗಳ ಅಂತರದಿಂದ ಮಣಿಸಿದ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ಟೆನಿಸ್ಗೆ ವಿದಾಯ ಹೇಳಿದ್ದಾರೆ.
ದಿ ಲಾಸ್ಟ್ ಚಾಲೆಂಜ್ ಹೆಸರಿನ ಪ್ರದರ್ಶನ ಪಂದ್ಯವು ಕಿಕ್ಕಿರಿದ ಪ್ರೇಕ್ಷಕರ ಉಪಸ್ಥಿತಿಯಲ್ಲಿ ಪಾರ್ಕ್ ರೋಕಾ ಕ್ರೀಡಾಂಗಣದಲ್ಲಿ ನಡೆಯಿತು.
ಜುಯಾನ್ ಮಾರ್ಟಿನ್ರನ್ನು ಪ್ರೀತಿಸದ ಜನರೇ ಇಲ್ಲ ಎನ್ನಬಹುದು. ಅವರ ಅದ್ಭುತ ವ್ಯಕ್ತಿತ್ವವೇ ಅವರ ಜೀವನದ ಶ್ರೇಷ್ಠ ಗೆಲುವು ಎಂದು ಪಂದ್ಯದ ನಂತರ 24 ಬಾರಿ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ವಿಜೇತ ಜೊಕೊವಿಕ್ ಹೇಳಿದ್ದಾರೆ.
ಸ್ನೇಹಿತ ಹಾಗೂ ಮಾಜಿ ಟೆನಿಸ್ ಆಟಗಾರ ಗ್ಯಾಬ್ರಿಯೆಲಾ ಸಬಟಿನಿ ಸಹಿತ ಹಲವು ಸೆಲೆಬ್ರಿಟಿಗಳು ಉಪಸ್ಥಿತರಿದ್ದ ಪಂದ್ಯದ ವೇಳೆ ಹಲವು ಬಾರಿ ಮಾಜಿ ವಿಶ್ವದ ನಂ.3ನೇ ಆಟಗಾರ ಡೆಲ್ ಪೊಟ್ರೊ ಭಾವುಕರಾಗಿ ಕಣ್ಣೀರಿಟ್ಟರು.
ಡೆಲ್ ಪೊಟ್ರೊ 2009ರಲ್ಲಿ ವಿಶ್ವದ ಗಮನ ಸೆಳೆದಿದ್ದರು. ಸೆಮಿ ಫೈನಲ್ ಹಾಗೂ ಫೈನಲ್ ಪಂದ್ಯದಲ್ಲಿ ಕ್ರಮವಾಗಿ ರಫೆಲ್ ನಡಾಲ್ ಹಾಗೂ ರೋಜರ್ ಫೆಡರರ್ರನ್ನು ಮಣಿಸಿ ಶಾಕ್ ನೀಡುವ ಮೂಲಕ ಯು.ಎಸ್. ಓಪನ್ನಲ್ಲಿ ತನ್ನ ಚೊಚ್ಚಲ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಎತ್ತಿ ಹಿಡಿದಿದ್ದರು. ಡೆಲ್ ಪೊಟ್ರೊ ಒಟ್ಟು 22 ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಆದರೆ ಪದೇ ಪದೇ ಕಾಡುತ್ತಿದ್ದ ಗಾಯದ ಸಮಸ್ಯೆಯಿಂದಾಗಿ ಅರ್ಜೆಂಟೀನದ ಆಟಗಾರನಿಗೆ ಇನ್ನಷ್ಟು ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ. ಎರಡು ವರ್ಷಗಳ ಹಿಂದೆ ಟೂರ್-ಲೆವೆಲ್ ಪಂದ್ಯವನ್ನು ಆಡಿದ್ದರು.
36ರ ಹರೆಯದ ಡೆಲ್ ಪೊಟ್ರೊ ರವಿವಾರ ದೈತ್ಯ ಪರದೆಯಲ್ಲಿ ತನ್ನ ವೃತ್ತಿಜೀವನದ ಕೆಲವು ಶ್ರೇಷ್ಠ ಕ್ಷಣಗಳನ್ನು ಮೆಲುಕು ಹಾಕಿದರು. ಇದರಲ್ಲಿ 2012ರಲ್ಲಿ ಲಂಡನ್ನಲ್ಲಿ ಹಾಗೂ 2016ರಲ್ಲಿ ರಿಯೋ ಡಿ ಜನೈರೊದಲ್ಲಿ ಗೆದ್ದಿರುವ ಒಲಿಂಪಿಕ್ಸ್ ಪದಕಗಳು ಸೇರಿವೆ. 2016ರಲ್ಲಿ ಅರ್ಜೆಂಟೀನದ ಪರ ಡೇವಿಸ್ ಕಪ್ ಕೂಡ ಜಯಿಸಿದ್ದರು.