ನ.26ರಿಂದ ಮಸ್ಕತ್ ನಲ್ಲಿ ಜೂನಿಯರ್ ಏಶ್ಯಕಪ್ | ಭಾರತೀಯ ಪುರುಷರ ತಂಡ ಪ್ರಕಟಿಸಿದ ಹಾಕಿ ಇಂಡಿಯಾ
PC : PTI
ಚೆನ್ನೈ: ಒಮಾನ್ ನ ಮಸ್ಕತ್ ನಲ್ಲಿ ನವೆಂಬರ್ 26ರಿಂದ ಡಿಸೆಂಬರ್ 4ರ ತನಕ ನಿಗದಿಯಾಗಿರುವ ಪುರುಷರ ಜೂನಿಯರ್ ಏಶ್ಯಕಪ್ ಟೂರ್ನಿಗೆ ಹಾಕಿ ಇಂಡಿಯಾವು ಸೋಮವಾರ 20 ಸದಸ್ಯರನ್ನು ಒಳಗೊಂಡ ಭಾರತೀಯ ಪುರುಷರ ಹಾಕಿ ತಂಡವನ್ನು ಪ್ರಕಟಿಸಿದೆ.
ಭಾರತ ತಂಡವು 2023,2015, 2008 ಹಾಗೂ 2004 ಸಹಿತ ದಾಖಲೆ ನಾಲ್ಕು ಬಾರಿ ಈ ಟೂರ್ನಮೆಂಟ್ನಲ್ಲಿ ಚಾಂಪಿಯನ್ ಆಗಿದೆ. ಭಾರತವು ಕಳೆದ ವರ್ಷ ಫೈನಲ್ನಲ್ಲಿ ಪಾಕಿಸ್ತಾನ ತಂಡವನ್ನು 2-1ರಿಂದ ಮಣಿಸಿ ಪ್ರಶಸ್ತಿ ಜಯಿಸಿತ್ತು.
ಈ ವರ್ಷದ ಸ್ಪರ್ಧಾವಳಿಯಲ್ಲಿ 10 ತಂಡಗಳಿದ್ದು, ಇವುಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಭಾರತ, ಚೈನೀಸ್ ತೈಪೆ, ಜಪಾನ್, ಕೊರಿಯಾ ಹಾಗೂ ಥಾಯ್ಲೆಂಡ್ ಎ ಗುಂಪಿನಲ್ಲಿದ್ದರೆ, ಬಾಂಗ್ಲಾದೇಶ, ಮಲೇಶ್ಯ, ಚೀನಾ, ಒಮಾನ್ ಹಾಗೂ ಪಾಕಿಸ್ತಾನ ಬಿ ಗುಂಪಿನಲ್ಲಿವೆ.
ಆತಿಥೇಯ ತಂಡವಾಗಿ ಎಫ್ಐಎಚ್ ಜೂನಿಯರ್ ವಿಶ್ವಕಪ್ಗೆ ಭಾರತ ತಂಡವು ಅರ್ಹತೆ ಪಡೆದಿದ್ದರೂ ಪಿ.ಆರ್.ಶ್ರೀಜೇಶ್ ಕೋಚಿಂಗ್ನಲ್ಲಿ ಇತ್ತೀಚೆಗೆ ಸುಲ್ತಾನ್ ಆಫ್ ಜೊಹೋರ್ ಕಪ್ ಯಶಸ್ಸನ್ನು ಮುಂದುವರಿಸಿಕೊಂಡು ಹೋಗಲು ಬಯಸಿದೆ.
ಭಾರತದ ಹಾಕಿ ತಂಡವನ್ನು ಆಮಿರ್ ಅಲಿ ನಾಯಕನಾಗಿ ಮುನ್ನಡೆಸಲಿದ್ದು, ರೋಹಿತ್ ಉಪ ನಾಯಕನಾಗಿದ್ದಾರೆ.
ಸುಲ್ತಾನ್ ಆಫ್ ಜೊಹೋರ್ ಕಪ್ ಹಲವು ಆಟಗಾರರಿಗೆ ಮೊದಲ ಅನುಭವವಾಗಿದ್ದು, ಉತ್ತಮ ಪ್ರದರ್ಶನ ನೀಡಿ ಶ್ರೇಷ್ಠ ಸ್ಫೂರ್ತಿ ಪ್ರದರ್ಶಿಸಿದ್ದಾರೆ. ಆಟಗಾರರ ಪ್ರದರ್ಶನದಿಂದ ನನಗೆ ಸಂತೋಷವಾಗಿದೆ. ಆ ಪ್ರದರ್ಶನದಿಂದ ತಂಡವು ಆತ್ಮವಿಶ್ವಾಸ ಪಡೆದಿದೆ. ಜೂನಿಯರ್ ಏಶ್ಯಕಪ್ನಲ್ಲಿ ಯಶಸ್ವಿ ಪ್ರದರ್ಶನ ನೀಡುವತ್ತ ಕಾರ್ಯೋನ್ಮುಖವಾಗಲಿದೆ ಎಂದು ಮುಖ್ಯ ಕೋಚ್ ಹಾಗೂ ಭಾರತದ ಮಾಜಿ ಗೋಲ್ಕೀಪರ್ ಪಿ.ಆರ್.ಶ್ರೀಜೇಶ್ ಹೇಳಿದ್ದಾರೆ.
ಬೆಂಗಳೂರಿನ ಸಾಯ್ ಕೇಂದ್ರದಲ್ಲಿ ಈಗ ನಡೆಯುತ್ತಿರುವ ರಾಷ್ಟ್ರೀಯ ಶಿಬಿರದಲ್ಲಿ ಆಟಗಾರರು ಕಠಿಣ ಪರಿಶ್ರಮಪಡುತ್ತಿದ್ದಾರೆ. ಡಿಫೆನ್ಸ್ ನಲ್ಲಿ ನಮ್ಮ ಪಂದ್ಯವು ಹೆಚ್ಚು ಪರಿಣಾಮಕಾರಿಯಾಗಿ, ಗೋಲುಗಳಾಗಿ ಪರಿವರ್ತಿಸುವ ನಿಟ್ಟಿನಲ್ಲಿ ನಾವು ನಿರ್ದಿಷ್ಟ ಬದಲಾವಣೆಗಳನ್ನು ಮಾಡಿದ್ದೇವೆ ಎಂದು ಶ್ರೀಜೇಶ್ ಹೇಳಿದ್ದಾರೆ.
►ತಂಡ
ಗೋಲ್ಕೀಪರ್ಗಳು: ಪ್ರಿನ್ಸ್ದೀಪ್ ಸಿಂಗ್, ಬಿಕ್ರಂಜಿತ್ ಸಿಂಗ್
ಡಿಫೆಂಡರ್ಗಳು: ಆಮಿರ್ ಅಲಿ(ನಾಯಕ), ತಲೆಮ್ ಪ್ರಿಯೊಬಾರ್ತ, ಶಾರದಾನಂದ ತಿವಾರಿ, ಯೋಗೆಂಬರ್ ರಾವತ್, ಅನ್ಮೋಲ್ ಎಕ್ಕಾ, ರೋಹಿತ್(ಉಪ ನಾಯಕ).
ಮಿಡ್ ಫೀಲ್ಡರ್ಗಳು: ಅಂಕಿತ್ ಪಾಲ್, ಮನ್ಮೀತ್ ಸಿಂಗ್, ರೋಸನ್ ಕುಜುರ್, ಮುಕೇಶ್ ಟೊಪ್ಪೊ, ಥೊಕೊಮ್ ಕಿಂಗ್ಸನ್ ಸಿಂಗ್
ಫಾರ್ವರ್ಡ್ಗಳು: ಗುರ್ಜೊತ್ ಸಿಂಗ್, ಸೌರಭ್ ಆನಂದ್ ಕುಶ್ವಾಹ, ದಿಲ್ರಾಜ್ ಸಿಂಗ್, ಅರ್ಷದೀಪ್ ಸಿಂಗ್, ಅರೈಜೀತ್ ಸಿಂಗ್.
ಮೀಸಲು ಆಟಗಾರರು: ಸುಖವಿಂದರ್, ಚಂದನ್ ಯಾದವ್.