ಕಮಿಂದು ಮೆಂಡಿಸ್ಗೆ ವರ್ಷದ ಉದಯೋನ್ಮುಖ ಕ್ರಿಕೆಟಿಗ ಪ್ರಶಸ್ತಿ
ಕಮಿಂದು ಮೆಂಡಿಸ್ | PC : ICC
ಕೊಲಂಬೊ: ಶ್ರೀಲಂಕಾದ ಯುವ ಕ್ರಿಕೆಟಿಗ ಕಮಿಂದು ಮೆಂಡಿಸ್ 2024ರಲ್ಲಿ ಸ್ಥಿರ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಐಸಿಸಿ ವರ್ಷದ ಉದಯೋನ್ಮುಖ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮೆಂಡಿಸ್ 2024ರಲ್ಲಿ 50ಕ್ಕೂ ಅಧಿಕ ಸರಾಸರಿಯಲ್ಲಿ ಎಲ್ಲ 3 ಮಾದರಿ ಕ್ರಿಕೆಟ್ನಲ್ಲಿ 1,451 ರನ್ ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಕೇವಲ 13 ಇನಿಂಗ್ಸ್ಗಳಲ್ಲಿ 3ನೇ ಜಂಟಿ ವೇಗದಲ್ಲಿ 1,000 ರನ್ ಪೂರೈಸುವ ಮೂಲಕ ಡಾನ್ ಬ್ರಾಡ್ಮನ್ ದಾಖಲೆಯನ್ನು ಸರಿಗಟ್ಟಿದರು.
ಟೆಸ್ಟ್ ಕ್ರಿಕೆಟ್ನಲ್ಲಿ ಮಿಂಚಿರುವ ಮೆಂಡಿಸ್ 9 ಪಂದ್ಯಗಳಲ್ಲಿ 74.92ರ ಸರಾಸರಿಯಲ್ಲಿ 5 ಶತಕ ಹಾಗೂ 3 ಅರ್ಧಶತಕಗಳ ಸಹಿತ 1,049 ರನ್ ಗಳಿಸಿದ್ದಾರೆ. ಕ್ಯಾಲೆಂಡರ್ ವರ್ಷದಲ್ಲಿ ಒಂದು ಸಾವಿರಕ್ಕೂ ಅಧಿಕ ರನ್ ಗಳಿಸಿದ ಕೇವಲ ಆರನೇ ಆಟಗಾರನಾಗಿದ್ದಾರೆ.
ಗಾಲೆಯಲ್ಲಿ ನಡೆದ ನ್ಯೂಝಿಲ್ಯಾಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ವೇಳೆ ಮೆಂಡಿಸ್ ಅಮೋಘ ಪ್ರದರ್ಶನ ನೀಡಿದ್ದು, ಮೊದಲ ಇನಿಂಗ್ಸ್ನಲ್ಲಿ ತನ್ನ ಜೀವನ ಶ್ರೇಷ್ಠ ಸಾಧನೆ (182 ರನ್)ಮಾಡಿದ್ದು, ಶ್ರೀಲಂಕಾ ತಂಡವು 5 ವಿಕೆಟ್ಗಳ ನಷ್ಟಕ್ಕೆ 602 ರನ್ ಗಳಿಸಿದೆ.
ಮೆಂಡಿಸ್ ಅವರು ತವರು ಮೈದಾನದಿಂದ ಹೊರಗೂ ಅತ್ಯುತ್ತಮ ಕೊಡುಗೆ ನೀಡಿದ್ದು ಇಂಗ್ಲೆಂಡ್ನಲ್ಲಿ ನಡೆದಿದ್ದ ಸರಣಿಯಲ್ಲಿ ಶ್ರೀಲಂಕಾದ ಅಗ್ರ ಸ್ಕೋರರ್ ಎನಿಸಿಕೊಂಡಿದ್ದರು. ದಶಕದ ನಂತರ ಮೊದಲ ಬಾರಿ ಲಂಕಾ ತಂಡ ಟೆಸ್ಟ್ ಪಂದ್ಯ ಗೆಲ್ಲಲು ನೆರವಾಗಿದ್ದರು.